ಕುರುಬ ಬೀರನು ಕುರಿ ಕಾಯುತ್ತ ಒಂದು ಹಳ್ಳದ ದಂಡೆಗೆ ಬಂದನು. ಅಲ್ಲಿಯ ನೀರು ನೆರಳು ನೋಡಿ, ಕುರುಬನು ತನ್ನ ಕುರಿಗಳಿಗೆ ದಡ್ಡಿಹಾಕಲು ತಕ್ಕ ಸ್ಥಳವೆಂದು ಬಗೆದನು. ಅದರಂತೆ ದಡ್ಡಿಹಾಕಲು ತೊಡಗಿದನು.
ಅಷ್ಟರಲ್ಲಿ ಅತ್ತಕಡೆಯಿಂದ ಶಿವಪಾರ್ವತಿ ಬಂದರು. “ಇಲ್ಲೇಕೆ ದಡ್ಡಿ” ಎಂದು ಕೇಳಿದರು.
“ಅದಕ್ಕೇನೂ ಆಗುವದಿಲ್ಲ” ಎಂದನು ಬೀರನು.
“ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತುಂಬಿ ಬರುವದಿಲ್ಲವೇ?” ಎಂದು ಶಿವ ಪಾರ್ವತಿ ಕೇಳಿದರು.
“ಮಳೆ ಹೋಯಿತು ತನ್ನ ನಾಡಿಗೆ ಮೂರು ತಿಂಗಳು” ಎಂದು ಬೀರನು ಅವರಿಗೆ ಮರುನುಡಿದನು.
ಶಿವಪಾರ್ವತಿಯರು ಅಲ್ಲಿ ನಿಲ್ಲದೆ ಹೋಗಿಬಿಟ್ಟರು. ಅವರು ನೇರವಾಗಿ ವರುಣನ ಲೋಕಕ್ಕೆ ತೆರಳಿ – “ಈಗಲೇ ಮಳೆರಾಯನನ್ನು ಕಳಿಸಿಕೊಡು” ಎಂದು ಹೇಳಿದರು.
“ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ. ಅವನು ಬರುವುದು ಮೂರು ತಿಂಗಳು ಕಳೆದ ಬಳಿಕ” ಎಂದು ವರುಣನು ತಿಳಿಸಿದನು.
ಆ ಮಾತು ಕೇಳಿ ಶಿವಪಾರ್ವತಿಯರ ಮುಖ ಬಾಡಿಹೋದವು. ಮರುನುಡಿಯದೆ ಅವರು ಕೈಲಾಸಕ್ಕೆ ಹೊರಟುಹೋದರು.
ಬೀರನ ದಡ್ಡಿ ಹಳ್ಳದಲ್ಲಿ. ಅವನ ಕುರಿಗಳು ಹಳ್ಳದ ದಂಡೆಯಲ್ಲಿ ಬೀಡುಬಿಟ್ಟು ತಂಗಿದವು. ಹಳ್ಳದ ದಡದಲ್ಲಿ ಬೆಳೆದು ನಿಂತ ಹುಲ್ಲು ಮೇದು ಹಳ್ಳದ ನೀರು ಕುಡಿಯುತ್ತ ಮೂರು ತಿಂಗಳು ಕಳೆದವು.
ಆ ಸಂದರ್ಭದಲ್ಲಿ ಅತ್ತ ಕಡೆಯಿಂದ ಶಿವಪಾರ್ವತಿಯರು ಬಂದರು. ಕೇಳಿದರು – “ಬೀರಾ, ದಡ್ಡಿ ಕಿತ್ತಿದೆಯಲ್ಲ ! ಯಾಕೆ ?” “ಮಳೆರಾಜ ಬಂದಿರುವನಲ್ಲವೇ ನಮ್ಮ ನಾಡಿಗೆ” ಇದು ಬೀರನ ಮರುನುಡಿ. “ಎಷ್ಟು ಸೊಕ್ಕು ಈ ಕುರುಬನಿಗೆ ? ಮಳೆ ಬರುವದೆಂದು ಸ್ಪಷ್ಟವಾಗಿ ಹೇಳುತ್ತಿರುವನಲ್ಲ! ಏತರ ಮೇಲಿಂದ ಹೇಳುತ್ತಾನೆ ಹೀಗೆ ?” ಎಂದು ಶಿವಪಾರ್ವತಿ ತಮ್ಮತಮ್ಮಲ್ಲಿಯೇ ಅಂದುಕೊಂಡು, ನೇರವಾಗಿ ದೇವಲೋಕಕ್ಕೆ ನಡೆದರು. ಅಲ್ಲಿ ವರುಣನ ಬಳಿಗೆ ಹೋಗಿ ಹೇಳಿದರು – “ಮಳೆರಾಯನನ್ನು ಮರಳಿ ಕರೆಯಿಸು.”
ವರುಣ ಬಿನ್ನಯಿಸಿದನು – “ಆ ಹೊತ್ತು ನೀವು ಸೂಚಿಸಿದಂತೆ ಆತನನ್ನು ಇಂದೇ ಅತ್ತಕಡೆ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ, ಸಿಡಿಲು ಮಿಂಚುಗಳು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ ? ಕೊಟ್ಟ ಹುಕುಮು ಅವರ ಕೈಯಲ್ಲಿದೆ.”
ಆ ಮಾತು ಕೇಳಿ ಶಿವಪಾರ್ವತಿಯರು ಅಂದುಕೊಂಡರು – “ನಾವಿಂದು ಕುರುಬನಿಗೆ ಸೋತೆವು.”
*****