ಬಿಜೆಪಿ ಎಂಬ ಶಬರಿಯೂ ಕೊಮಾರನೆಂಬ ರಾಮನೂ…

‘ಎರಡು ಸಾವಿರದಾ ಆರು ಬಿಜೆಪಿ ಗದ್ದುಗೆಗೆ ಹಾರು’ ಆಂತ ಈಸಲ ಮೈಲಾರ್ದಾಗೆ ಕಾರಣೀಕ ನುಡಿದಾರಂತ ಬಿಜೆಪಿನೋರು ಇದೀಗ ನ್ಯೂಸ್ ಹಬ್ಬಿಸ್ಯಾರೆ. ಮಿಕ್ಸಚರ್ ಸರ್ಕಾರ ನಡೆಸಿದ ಜಿಪಂ, ತಾಪಂ ಚುನಾವಣೆದಾಗ ಕಾಂಗ್ರಸ್ ಮೆಜಾರ್ಟಿ ಬರುತ್ಲು ಧರಂ ಮೋರೆ ಮೊರದಗಲಾತು. ಗೋಡ್ರ ಮೋರೆ ಡಾಂಬರ್ ಕಲರಾತು. ಮಧ್ಯದಾಗೆ ನಂದೆಲ್ಲಿ ಇಕ್ಲಿ ಅಂತ ಸಿದ್ದೂ ಪಾಲ್ಟಿ ತೊಡೆ ತಟ್ಟಿ ಒಂದಷ್ಟು ಪ್ಲೇಸ್ ಗೆದ್ದು ಪೈಲ್ಯಾನಗಿರಿಗೆ ಇಳಿದಿದ್ದೇ ಸಕಲ ಯಡವಟ್ಟಿಗೆ ಕಾರಣಾಗೇತಿ. ಚುನಾವಣಾ ನಂತರ ವಸಿ ಧಂ ಕಳ್ಕೊಂಡ ಗೋಡ್ರು ಹತಾಶರಾಗಿ ಕಾಂಗೈದು ಎಲ್ಡು ಕಣ್ಣು ಹೋದಂತಾದ್ರೆ ನಂದು ಒಂದು ಕಣ್ಣು ಹೋದ್ರೂ ಚಿಂತಿಲ್ಲ ಅಂಬೋ ಸಿಟ್ನಾಗೆ ಸರ್ಕಾರ ಉಲ್ಡು ಗೆಡಿಸ್ತೀನಿ ಅಂತ ಡೆಲ್ಲಿಗೋಗಿ ವಾಜಪೇಯಿ ಭೆಟ್ಟಿ ಮಾಡಿ ಬಂದ್ರೂ ಅಸಲು ಚುನಾವಣೆ ಯಾವ ಪಾಲ್ಟಿಗೂ ಬೇಡಾಗೇತಿ. ಆದ್ರೂ ಗೋಡ್ರು ಇಲ್ಲದ ಮೀಸೆ
ತಿರುವ್ಲಿಕತ್ತಾರೆ. ಆದರೆ ಇರೋ ಮೀಸೇನಾ ಹುರಿಗಟ್ಟಿ ಕರ್ನಾಟಕದಾಗೆ ಕುಂತೇ ತಿರುವ್ಲಿಕತ್ತಿರೋ ಕರಿಸಿದ್ದೇಶ್ವರ ಸ್ವಾಮಿ ಯಾನೆ ಕುಮಾರ ರಾಮ, ಬಿಜೆಪಿ ದೋಸ್ತಿಯಾ ಒಳಗಿಂದೊಳ್ಗೆ ಮಾಡ್ಕೊಂಡು ತಾನೆ ಸಿ.ಎಂ. ಯಡೂರಿನೇ ಡಿಸಿ‌ಎಂ ಅಂತ ಸಡನ್ ಆಗಿ ಇಡೀ ಸೀನೇ ಜೇಂಜ್ ಮಾಡಿ ಬಿಡೋದೆ! ಅಧ್ಯಕ್ಷ ತಿಪ್ಪಣ್ಪಂಗೆ ಕಿವಿ ಕೇಳಂಗಿಲ್ಲ ಕಣ್ಣು ಕಾಂಬಗಿಲ್ಲ ಇನ್ನು ಪ್ರಕಾಸು ಗೋವಿದ್ದಂಗೆ ಸಿಂಧ್ಯಂದು ಎಮ್ಮೆನೇಚರ್ರು ಎಮ್ಮೆಯಂತಾಗಿರೋ ಡಿ.ಮಂಜುನಾಥ ಬಾಯಿಗೆ ಬಂದಂಗೆ ಬೊಗಳೊ ಹೊರಟ್ಟಿ ಮಾದೇವ ಪ್ರಸಾದ ಇವರೆಲ್ಲಾ ನನ್ನ ಲೆಕ್ಕ ಬುಕ್ಕನಾಗೆ ಇಲ್ಲ ಅಂತ ನಿರ್ಧರಿಸಿದ ಕುಮಾರರಾಮ ಸಾಕ್ಷಾತ್ ಪಿತಾಮಹ ಗೋಡ್ರಗೇ ಟಾಂಗ್ ಕೊಟ್ಟು ಗೋಡ್ರಗೋಡ! ಈಗ ಕುಣಿದಾಡ್ತಿರೋರು ಬಿಜೆಪಿ ವಟುಗಳು. ಹುಟ್ಟಿದಾಗಿನಿಂದ ಹೋರಾಡಿ ಕೂಗಾಡಿ ಗೆದ್ದದ್ದೇ ಕಷ್ಟ, ಗೆದ್ದರೂ ಗದ್ದುಗೆ ಗಿಟ್ಟಿಸಿದ್ದೇ ಇಲ್ಲ ಜೀವಮಾನ ಪೂರಾ ಶಾಸಕರ ಫೋಸ್ಟ್‌ನಾಗೇ ಡ್ಯೂಟಿ ಬೋರ್ ಹತ್ತಿ ಘೋಸ್ಟ್‌ನಂಗಾಗಿರೋ ಬಿಜೆಪಿ ಭೂತಗಳಿಗೆ ಕೊಮಾರಣ್ಣ ಬೂಸ್ಟ್‌ ಈಸ್ ಎ ಸಿಕ್ರೇಟ್ ಆಫ್ ಅವರ್ ಎನರ್ಜಿ ಅಂತ ಬೂಸ್ಟ್ ಕುಡಿಸವ್ನೆ. ಸಾಯೋದ್ರಾಗೆ ಒಂದಪನಾರ ಸಚಿವರಾಗೇ ಸಾಯೋ ಆಸೆ ಮಡಿಕ್ಕೊಂಡಿರೋ ಬಿಚೆಪಿ ಶಾಸಕರೀಗ ತುದಿಗಾಲ ಮೇಲೆ ನಿಂತಾರೆ. ಇದೆಲ್ಲಾ ನೋಡ್ತಾ ಕಂಗಾಲಾಗಿರೋ ಏಕೈಕ ಪರ್ಸನ್ ಅಂದ್ರೆ ಉಬ್ಬಲ್ಲು ಅನಂತಿ. ಗೋಡ್ರು ಡಿಪ್ರೆಸ್ ಆಗಿ ಮಗನಿಗೆ ಬಹಿರಂಗವಾಗಿ ಕುಮ್ಮಕ್ಕು ಕೊಡ್ಲಿಲ್ಲ ಅಂಬೋದೇ ಅನಂತಿಗೆ ವಸಿ ಸಮಾಧಾನ. ‘ಎಳೆಗರುಂ ಎತ್ತಾಗದೆ ಹೋರೆಗಾಯಿ ಹಣ್ಣಾಗದೆ ಶಾಸಕ ಸಚಿವನಾಗಬಾರದೆ ಹರಹರ ಶ್ರೀ ಚೆನ್ನ ಗೋಡೇಶ್ವರ’ ಆಂತ ಯಡೂರಿ ಗೋಡ್ರ ಭಜನೆ ಶುರುಮಾಡೇತೆ. ಡೆಲ್ಲಿನಾಗಿರೋ ಬಿಜೆಪಿ ಓಲ್ಡ್ ಬಾಡಿಗಳು ಕಚ್ಚೆ ಕೊಡವಿಕೊಂಡು ಗೋಡ್ರು ವರಕ್ಕಾಗಿ ಹಣುಮಂತನಂಗೆ ಮಂಡಿಯೊರಿ ಕುಂತಾರೆ. ಜೆಡಿ‌ಎಸ್‌ನ ಬಾಲ್ ಗೋಡ್ರ ಮುನಿಸಿನಿಂದಾಗಿ ಇನ್ನೂ ನಮ್ಮ ಅಂಗಳಕ್ಕೆ ಬಂದಿಲ್ರಿ ಯಾವ ಆಟ ಆಡೋಣೇಳ್ರಿ? ದೊಡ್ಡ ಬಾಲ್ ಆದ್ರೆ ಥ್ರೋಬಾಲ್ ಬಾಸ್ಕೆಟ್‌ಬಾಲ್ ಫುಟ್‌ಬಾಲ್‌ ಆಡ್ಬೋದು. ಸಣ್ದ ಬಾಲ್ ಆಯ್ತೋ ಕಿರಿಕೆಟ್ಟು ಬ್ಯಾಡಮೆಂಟೆನ್ನು ಟೆನಿಸ್ಸು ಲಗ್ಗೆ ಚೆಂಡ್ಗೂ ಶ್ರೀರಾಮನಾಣೆಗೂ ತಯಾರ್ ಅಂತ ತಕಥೈ ಕುಣಿಲಿಕ್ಕತ್ತಾರೆ. ಜಮ್ಮು ಕಾಶ್ಮೀರದ ಟೈಪು ಇರೋ ೪೦ ತಿಂಗಳಾಗೆ ೨೦ ತಿಂಗಳು ನೀವು ರೂಲ್ ಮಾಡ್ರಿ ನಾವು ೨೦ ತಿಂಗಳು ನಾವು ರೂಲ್ ಮಾಡ್ತೀವಿ ಅಂಬೋ ಡಿಸ್ಕಶನ್ಗೆ ಇಳ್ದಿದಾರೆ. ಹೆಂಗಾರ ಮಾಡಿ ಡ್ಯಾಡೀನ ಒಪ್ಪಸ್ತೀನಿ ಕಾಂಗೈಗೆ ಮಣ್ಣು ಮುಕ್ಕಿಸ್ತೀನಿ ಕರ್ನಾಟರತ್ನ ಸಿಂಹಾಸುನ ಏರಲಿಲ್ಲ ನಾನ್‌ ಗಂಡುಗಲಿ ಕುಮಾರರಾಮನೇ ಅಲ್ಲ ಚೋಕುಮಾರಸ್ವಾಮಿ ಅಂತ ಕರೀರಿ ಅಂತಂದು ಕೊಮಾರಣ್ಣ ಸವಾಲ್ ಹಾಕವ್ನೆ. ಬಿಚೆಪಿಯ ವೆಂಕಯ್ಯ ನಾಯ್ಡು ಅಂಬೋ ಆಂಧ್ರವಾಲಾ ಈಗಾಗಲೆ ಕರ್ನಾಟಕದಾಗೆ ಹದ್ದು ಇಳ್ಕಂಡಂಗೆ ಇಳ್ಕಂಡು ಬಿಟ್ಟೇತೆ. ಯಡೂರಿಗೆ ಈಗಾಗಲೆ ಮೂವತ್ತು ಜೊತೆ ಫುಲ್‌ಸೂಟ್ ಹೊಲಿಯಲು ಜಪಾನ್ ಟೇಲರ್ ಪುಲ್ ಬಾಡಿನಾ ಅಳತೆ ತಗಂತಾ ಅವ್ನೆ. ಜಗದೀಶ ಶೆಟ್ಟರ್ಗೂ ಆಸೆ ಯಾಕಿರಬಾರ್ದೇಳ್ರಿ? ಹೊಸ ಸಫಾರಿ ಬಂಡಲ್‌ಗಳ್ನೇ ಪರ್ಚೇಸ್ ಮಾಡೇತೆ. ಚಡ್ಡಿ ಚತುರರಾದ ಈಶ್ವರಿ ಅರಗಂ, ಶಂಕರಮೂತ್ರಿ, ಕಟ್ಟಾ ಸುಬ್ರಮಣ್ಯ ಗಡ್ಡದ ಚಾಲಾಕಿ ಬಾಲಕ ಸಿ.ಟಿ. ರವಿಯಾದಿಯಾಗಿ ಎಲ್ಲರೂ ಹೊಸ ಧಿರಿಸ್ಗೆ ರೆಡಿಮೇಡ್ ಅಂಗಿಗೆ ಮುಗಿ ಬಿದ್ದವರೆ ಕಣ್ರಿ.

ಆದರೆ ಈ ಮುದಿ ರಾಜ್ಯಪಾಲ ಚತುರನಲ್ಲದ ವೇದಿ ಫಬ್ರವರಿ ೨೭ ರ ತನಕ ಧರಂಗೆ ಗಡವು ನೀಡಿ ಬಿಜೆಪಿಗೆ ಭೇದಿ ಹಿಡಿಯಂಗೆ ಮಾಡೋದೆ! ಕುಮಾರರಾಮ ಮತ್ತು ಶಬರಿ ಬಿಚೆಪಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬೀಳ್ದಂಗಾಗಿ ತಮ್ಮ ಶಾಸಕರ್ನ ವಾರೊಪ್ಪತ್ತು ತಮ್ಮ ಮುಷ್ಟಿನಾಗೆ ಇಟ್ಕಂಬೋ ಟೆನ್ಶನ್ ಶುರುವಾಗಿ ಅವನ್ನೆಲ್ಲಾ ಭೂಗತ ಮಾಡೋ ಯೋಜನೆಗೆ ಸ್ಕೆಚ್‌ ಹಾಕವರೆ. ಗೋಡ್ರು ತನ್ನ ಮಗನೇ ಡೋಂಟ್‌ಕೇರ್ ಆಗಿದ್ರಿಂದ ಕೋಮುವಾದಿಗಳ ದೋಸ್ತಿಗಿಂತ ಧಪನ್ ಆಗೋದೇ ವಾಸಿ ಅಂಬೋ ಹಿಕಮತ್ತಿನ ನುಡಿಗಳನ್ನಾಡುತ್ತಾ ರಾಜಿನಾಮೆ ಕೊಡ್ತೀನಿ ಅಂತ ಹೆದರಿಸ್ತಾ ಧರಂಗೇ ನನ್ನ ಕುಮ್ಮಕ್ಕು ಅಂತ ವಚನವನ್ನು ನೀಡ್ತಾ ಆಗಾಗ ಕಣ್ಣೀರ್ನ ಕಪಾಳಕ್ಕೆ ಇಳಿಸ್ತಾ ನಾಟಕ ಮಾಡುತ್ತಿದ್ದರೂ ಯಾರ್ಗೂ ಯಾಕೋ ನಂಬಿಕೆನೇ ಬರಂಗಿಲ್ಲ. ‘ಗೋಡ್ರು ಕೆಸರ್ನಾಗಳ ಕಂಬ ಇದ್ದಂಗೆ ನಂಬಬೇಡ್ರಿ. ನಿಜವಾಗ್ಲೂ ಜಾತ್ಯಾತೀತನಾಗಿದ್ರೆ ಮಗನ ಮೇಲೆ ಆಕ್ಶನ್ ತಗಳ್ಳಿ ಡ್ರಾಮಾ ನಿಲ್ಲಿಸಿ’ ಅಂತ ಸಿದ್ರಾಮ ಡೂಲಾಗ್ ಹೊಡಿಲಿಕತ್ತಾನೆ. ಪ್ರಪಂಚಾವೇ ತಲೆಕೆಳಗಾದ್ರೂ ಅಲ್ಲಾಡದ ಧರ್ಮಣ್ಣ ಈಗ್ಲೂ ಮೈಕ್ ಹಿಡ್ದೋರ ಮುಂದಾಗಡೆ ಈಗೋರಿ ಇವನವ್ನ ಪಾಲಿಟಿಕ್ಸೇ ಹಾಂಗ. ಇಂಥ ಸ್ವೇಟ್‌ಮೆಂಟು ಕಮಿಟ್‌ಮೆಂಟು ಕಾಮೆಂಟು ಅಡ್ಜಸ್ಟ್‌ಮೆಂಟು ಇದ್ದೇ ಇರ್ತಾವ. ವಾರಪ್ಪೊತ್ತು ತಡ್ಕೋರಿ ಗೋಡ್ರು ನಾನು ಕೂಡೆ ‘ಮೇರಾ ದೋಸ್ತಿ ಮೇರಾ ಪ್ಯಾರ್’ ಅಂಬೋ ಸಾಂಗ್ ಹಾಡೇ ಹಾಡ್ತೀನಿ ಅಂತ್ಹೇಳಿ ದಬರಿ ಮೋರೆ ತುಂಬಾ ನಗು ತುಳಕಿಸ್ಲಿಕತ್ತಾರೆ. ಗೋಡ್ರು ಅನ್ನ ನೀರು ನಿದ್ದೆ ಬಿಟ್ಟವರೆ ಅಂಬೋ ನ್ಯೂಸೂ ಹಬ್ಬೇತೆ. ಅವರ ಮನೆ ಮುಂದೆ ಕುಂತು ಪ್ರಕಾಸು, ಸಿಂಧ್ಯ, ಡಿ. ಮಂಜು, ಮಾದೆವು, ರೇವಣ್ಣ ಸತ್ತರ ಮನೆಯಾಗೆ ಮಡ್ದಂಗೆ ಭಜನೆ ಮಾಡ್ಲಿಕತ್ತಾರೆ. ಹೊಸ ಸರ್ಕಾರವೂ ಬರ್ಲಿಲ್ಲ ಮಂತ್ರಿಗಿರಿನೂ ಗಿಟ್ಟಲಿಲ್ಲ ಅಂಬೋ ಸಿಟ್ಟಾಗೆ ಈಗ ಎಲ್ಲರೂ ಎಲ್ಲಾನೂ ಸಂಶಯದಿಂದ ನೋಡ್ತಾ ಕುದುರೆ ವ್ಯಾಪಾರದ ಬಗ್ಗೆ ಥಿಂಕ್ ನಡೆಸವ್ರೆ. ಅಪ್ಪನಿಗಿಂತ ಪಕ್ಷ ಮುಖ್ಯ ಅಂತಾನೆ ಕೊಮಾರಣ್ಣ. ಸಿದ್ಧಾಂತಕ್ಕಿಂತ ಮಂತ್ರಿ ಸೀಟ್ ಮುಖ್ಯ ಅಂತಾರೆ ಯಡೂರಿ ಆಂಡ್ ಫ್ರೆಂಡ್ಸ್. ಗೋಡ್ರು ರಾಜಕೀಯವಾಗಿ ಡೆಡ್ ಅಂತಾರೆ ಸಿದ್ರಾಮು. ಕಾದು ನೋಡ್ರಲಾ ಸಾಯೋಗಂಟ ನಾನೇ ಸೀ‌ಎಮ್ಮು ಅಂತಾರೆ ಡೆಡ್ಲಿ ಧರ್ಮು. ಕಾಯೋಣ ಬಿಡ್ರಲಾ.
*****
(ದಿ. ೩೦-೦೧-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವಪಾರ್ವತಿಯರ ಸೋಲು
Next post ಪುಲಿಯಂಡದ ಪ್ರೇತಾತ್ಮ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…