ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುತ್ತಿದ್ದರು. ಕರ್ಣನು ಬಂದು ತನಗೂ ಕಲಿಸಬೇಕೆಂದು ಕೇಳಿಕೊಂಡನು. ಅವರು “ನೀನು ಕ್ಷತ್ರಿಯನಲ್ಲ. ನಾನು ನಿನಗೆ ವಿದ್ಯೆಯನ್ನು ಹೇಳಿ ಕೊಡುವುದಿಲ್ಲ” ಎಂದರು. ಕರ್‍ಣನು “ಬೇರೆ ಕಡೆಯಲ್ಲಿ ಕಲಿತು ಬರುವೆನು” ಎಂದು ಆಣೆಯಿಟ್ಟುಕೊಂಡನು.
ಆಗಿನ ಕಾಲದಲ್ಲಿ ಪರಶುರಾಮರನ್ನು ಬಿಟ್ಟರೆ, ದ್ರೋಣಾಚಾರ್ಯರನ್ನು ಮೀರಿಸಿದವರು ಯಾರೂ ಇರಲಿಲ್ಲ. ಅದರಿಂದ ಕರ್‍ಣನು ಅವರ ಬಳಿಗೇ ಹೋದನು. ಅವರು ಬ್ರಾಹ್ಮಣರಲ್ಲದವರಿಗೆ ವಿದ್ಯೆಯನ್ನು ಹೇಳುತ್ತಿರಲಿಲ್ಲ. ಕರ್ಣನು “ತಾನೂ ಬ್ರಾಹ್ಮಣನು” ಎಂದು ಸಟೆಯಾಡಿದನು. ಅವರು ಅದು ದಿಟಿನೆಂದು ನಂಬಿ ಅವನನ್ನು ಶಿಷ್ಯನನ್ನಾಗಿ ಸೇರಿಸಿಕೊಂಡರು.
ಆದರೆ ಈ ಕಪಟವು ಬಹಳ ಕಾಲದವರೆಗೆ ಹೊರಬೀಳಲಿಲ್ಲ. ಕರ್‍ಣನು ಬ್ರಾಹ್ಮಣನೆಂದೇ ಪರಶುರಾಮರು ವಿದ್ಯೆಯನ್ನೆಲ್ಲಾ ಹೇಳಿಕೊಟ್ಟರು. ಇನ್ನು ಕೆಲವು ದಿನವಾದರೆ ಎಲ್ಲವೂ ಮುಗಿದು ಕರ್‍ಣನು ಹಿಂತಿರುಗಬಹುದು. ಆಗ ಒಂದು ದಿನ ಅವನ ಗುಟ್ಟು ಹೊರಬಿತ್ತು. “ಕರ್‍ಣನು ಬ್ರಾಹ್ಮಣನಲ್ಲ” ಎಂಬುದು ಅವರಿಗೆ ತಿಳಿದುಹೋಯಿತು. ಸಟೆಯಾಡಿ ಮೋಸ ಮಾಡಿದನೆಂದು ಅವರಿಗೆ ಬಹಳ ಸಿಟ್ಟು ಬಂತು. “ಸುಳ್ಳು ಹೇಳಿ ಮೋಸದಿಂದ ಈ ವಿದ್ಯೆಯನ್ನು ಸಂಪಾದಿಸಿದೆ. ಇದು ನಿನಗೆ ಸಮಯದಲ್ಲಿ ಫಲಿಸದೆ ಹೋಗಲಿ” ಎಂದು ಹೇಳಿಬಿಟ್ಟರು.
ಅದರಂತೆಯೇ ಕರ್‍ಣನು ಯುದ್ಧಕ್ಕೆ ಹೋದಾಗಲೆಲ್ಲಾ ಅವನಿಗೆ ಬಾಣ ವಿದ್ಯೆಯು ಮರೆತು ಹೋಗುತ್ತಿತ್ತು. ಅದರಿಂದಲೇ ಅವನಿಗೆ ಸಾವೂ ಬಂದಿತು.
*****