ಹೂವು ತೋರಣಗಳ ಛತ್ರಚಾಮರಗಳಿಂದಲಕೃತ ವೇದಿಕೆ
ಕಣ್ಮನ ಸೆಳೆವ ರೆಶ್ಮೆ ಪಂಚೆಯುಡುಗೆ ತೊಡುಗೆ
ವಜ್ರವೈಡೂರ್‍ಯಗಳ ಕಿರೀಟಧರಿಸಿದ ಶ್ರೀರಾಮಚಂದ್ರ
ಸುಶೋಭಿತ ಚಂದ್ರವದನೆ ಸೀತೆಯ ಪಟ್ಟಾಭಿಷೇಕ
ಮನಮೋಹಕ ಚಿತ್ತಾಕರ್‍ಷಕ
ಕ್ಯಾಲಂಡರದೊಳಗಿನ ದೃಶ್ಯಕಾವ್ಯ.
ದೇವದೇವೋತ್ತಮ ಪುರುಷೋತ್ತಮ ರಾಮನೆಂದರೆ
ರಾಜಾರಾಮ ರಘುಕುಲತಿಲಕನೆಂದರೆ
ಪಿಳಿಪಿಳಿ ಕಣ್ಣು ಹೊಸಪೀಳಿಗೆಯವುಗಳಿಗೆ
ರಾಮನವತಾರದ ಬಟ್ಟೆತೊಟ್ಟು
ಕುಸಂಬರಿ ಪಾನಕ ಸವಿದು
ದಿನದ ರಜೆ ಕಳೆದುಬಿಟ್ಟರೆ
ಹಿರಿಯರ ರಾಮನಾಮಸ್ಮರಣೆ ಏನೆಂದು
ಯಾಕೆಂದು ಗೊತ್ತಾಗದೆ ಗಲಿಬಿಲಿ.
ಭಕ್ತಿಭಾವ ನಂಬಿಕೆ ವಿಶ್ವಾಸಗಳ ಬಗೆಗೆ ಹೇಳಿದ್ದಾದರೆ
ಅದೆಂತಹ ನಾಮಬಲ, ಹೇಗಿದ್ದನಾತ
ಅವನ ಓದು ಕೆಲಸ ಹೆಂಡತಿ ಮಕ್ಕಳು ಏನೆಂದು
ನಿನ್ನ ಬಯೋಡಾಟಾ ಕೇಳುತ್ತಾರೆ ರಾಮಾ-
ಮೊದಲ ಸುತ್ತಿನ ನಿನ್ನ ಪರಿಚಯ ಕೇಳಿದ್ದೇ ಸಾಕು
ಈಗ ನೂರಾರು ಪ್ರಶ್ನೆಗಳ ಮೂಟೆಹೊತ್ತು ಬಂದಿದ್ದಾರೆ.
ದೇವನಾಗಿದ್ದರೆ…
ಗೊತ್ತಾಗಬೇಕಿತ್ತು ಮಾಯಾಜಿಂಕೆಯ ಬೆನ್ನುಹತ್ತಿ
ದಂಡಕಾರಣ್ಯದಲಿ ಸೀತೆಯನ್ನು ಬಿಟ್ಟು ಹೋದನೇಕೆ?-
ಹದಿನಾಲ್ಕು ವರ್ಷ ಮಕ್ಕಳಾಗದಂತೆ
ಅದಾವ ನಾರುಬೇರು ಕೊಟ್ಟು ಸೀತೆಗೆ ಸಮಾಧಾನಿಸಿದನಂತೆ?
ರಾವಣ, ಸೀತಾಪರಹಣ, ಮರುಪಟ್ಟಾಭಿಷೇಕ
ಅಬ್ಬಬ್ಬಾ! ಹೌದು, ಆದರೆ….
ದೇವನಾಗಿದ್ದರೆ, ರಾಜನಾಗಿದ್ದರೆ, ಹೋಗಲಿ ಪುರುಷೋತ್ತಮನಾಗಿದ್ದರೆ…
ಹಾದಿಹೋಕರ ಮಾತಿಗೆ ಬೆಲೆಕೊಟ್ಟು
ಹೆಂಡತಿಗೆ ಅಪಮಾನಸಿ ಅಗ್ನಿಪರೀಕ್ಷೆ ಮಾಡಿಸಿದನೇಕೆ?-
ತುಂಬು ಬಸುರಿಯನು ನದಿದಾಟಿಸಿ ಕಾಡಿಗೆ ಬಿಟ್ಟಿದ್ದೇಕೆ?
ಮಕ್ಕಳಾದರೂ ಮರಳಿನೋಡದ ಜನಪಾಲಕ
ಪ್ರಜೆಗಳ ಪರಾಕದಮಲಿಗೆ ಹೆಂಡತಿ ಮಕ್ಕಳಿಗೆ
ಅಪಾತ್ರನಾದ ರಾಮರಾಮ ಅದ್ಹೇಗೆ ದೇವಮಾನವನಂತೆ?-
ಅವನೊಬ್ಬ ಪುರುಷರಲಿ ಪುರುಷನಷ್ಟೇ
ಅವನ ಬಯೋಡಾಟಾ ಬದಲಿಸಬೇಕು.
ನಿರ್ಭಿಡೆಯ ಮಕ್ಕಳು ಕಥೆ ಹಿಂಜುತ್ತಿವೆ
ನೀನೇ ಉತ್ತರಹೇಳು ರಾಮಾ.
ವಿಜ್ಞಾನ ದೇವಕಣ ಸೃಷ್ಠಿಯ ಆದಿ ಅನಂತದ
ನಿಗೂಢದೊಳಹೊಕ್ಕು ಝಾಲಾಡಿಸಿ ಸತ್ಯ ಬಹಿರಂಗಿಸುವ
ಈ ಹೊಸ ದೇವರುಗಳಿಗೆ ಬೆರಗಾಗುವುದಬಿಟ್ಟು
ಬೇರೇನೂ ಉಳಿಯಲಿಲ್ಲ ರಾಮಾ
ರಾಮ ರಾಮಾ.
*****