(೧೯೧೧ನೆಯ ಏಪ್ರಿಲ್ ತಿಂಗಳ `Modern Review’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ “Farewell”ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು)
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು!
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ? ಬಾರೆಂದು ೫
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೧೦
ಅಲೆವೆಲರುಸಿರಿಂ ಹುಯ್ಯುವೆನು,
ನಿನ್ನೆದೆಯಿಂ ನಿಡುಸುಯ್ಯುವೆನು;
ಬಿಮ್ಮನೆ ತೋಳುಗಳಿಂದೆನ್ನ
ಬಿಗಿವಿಡಿಯಡೊಲೋಡುವೆ ನಿನ್ನ,
ನೀರಿನ ಕಿರುದೆರೆಯಾಗುತಲಿ, ೧೫
ಯಾರೆನ್ನರಿಯದೊಲೀಸುತಲಿ,
ಮೀಯುವ ನಿನ್ನನು ಬಲವಂದು
ಮುರಿಮುರಿದಪ್ಪಿ ಕೊಳುವೆನಂದು
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೨೦
ಸೂಸುವ ಸೇಸೆಯ ಸೋನೆಯಲಿ
ಇರುಳಲಿ ನೀನಮ್ಮ ಮನೆಯಲಿ
ಒಂಟಿ ಮಲಗಿ ನಮ್ಮ ಹಸೆಯಲ್ಲಿ
ಮೆಯ್ಮರೆತೆನ್ನನೆ ನೆನೆವಲ್ಲಿ,
ತಟತಟ ತಟಕುವ ತನಿಯೆಲೆಯಿಂ ೨೫
ತೊದಲಾಡುನೆನಿಂಬನಿಯುಲಿಯಿಂ
ಮುಚ್ಚಲು ಮರೆತಿಹ ಕಿಟಿಕಿಗಳಿಂ
ಮಿಂಚುವೆ ಮಿಂಚಿನ ಮಿಟಕುಗಳಿಂ-
ಅಂದಿನ ನನ್ನಟ್ಟಸವನ್ನ
ಬಗೆಯಲಳನೆ ಅವ್ವಾ ನಿನ್ನ? ೩೦
ಮೀರಿದಿರುಳ ಕಗ್ಗತ್ತಲಲಿ
ನೀನೆಚ್ಚರವಿರೆ ಮರುಗುತಲಿ,
ಮಿರುರೆಪ್ಪೆಯ ತಾರಗೆಯಾಗಿ
ಮಲಗವ್ವಾ ಎನುವೆನು ಬಾಗಿ,
ಅಳಲಿ ಬಳಲಿ ಕಡೆಯಲಿ ದಣಿದು ೩೫
ಪವಡಿಸುತಲೆ ನೀನರೆಮಣಿದು,
ಚಂದ್ರನ ಸೊದೆಗದಿರಾಗುನೆನು,
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು ೪೦
ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೊಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿಸುವೆನು ನಿದ್ದಿಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು ೪೫
ಹಸೆಯೊಳೆನ್ನ ತಡವರಿಪಂದು,
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೫೦
ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ ೫೫
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ.
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. ೬೦
ಹಬ್ಬದುಡುಗೆರೆಗಳನು ತಂದು
ನಮ್ಮಯ ಮನೆಗತ್ತಿಗೆ ಬಂದು,
ಅಕ್ಕಾ ಮಗುವೆಲ್ಲಿಹುದೆಂದು
ಕೇಳುವಳಾಕೆಗೆ ಪೇಳಂದು-
ಎಲ್ಲೆಲ್ಲಿಯು ನನ್ನ ಮಗುವಿಹುದು, ೬೫
ನೋಡೆನ್ನಯ ಕಣ್ಣುಲಿಯದು!
ಎನ್ನಯ ಮೊಲೆಯ ಕುಡಿಯುತಿಹುದು,
ಎನ್ನಂಕದಲಿದೊ ಕುಳಿತಿಹುದು!
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೭೦
*****