ವಾಕ್ಯದ ಅರ್ಥ ಮತ್ತು ಅದ್ಭುತ

ವಾಕ್ಯದ ಅರ್ಥ ಮತ್ತು ಅದ್ಭುತ

ಕಾವ್ಯವಿಮರ್ಶೆಯ ಕುರಿತು ಅಸಹನೆ ಮತ್ತು ಅಸಮಾಧಾನ ತೋರಿದವರು ಕನ್ನಡದ ಕವಿ ರಾಮಚಂದ್ರ ಶರ್ಮರು ಮಾತ್ರವೇ ಅಲ್ಲ. ಅಮೇರಿಕನ್ ಕವಿ ಕಾರ್ಲ್ ಸಪೀರೋ (Karl Sapiro) `ವಿಮರ್ಶೆಗೆ ವಿದಾಯ’ (A farewell to Critisism) ಎಂಬ ಸ್ಪಷ್ಟ ಲೇಖನವನ್ನೇ ಈ ನಿಟ್ಟಿನಲ್ಲಿ ಬರೆದಿದ್ದಾನೆ (Poetry, Jan. 1948). ‘ಪಠ್ಯದ ವಿವರಣೆ (explanation de texte) ಎ೦ಬ ತತ್ವದ ತಳಹದಿಯನ್ನೇ ನಾನು ಪ್ರಶ್ನಿಸುತ್ತೇನೆ. ಕವಿತೆಯನ್ನು ನಾವು ಭಾಷಾವೈಜ್ಞಾನಿಕ ಅಥವಾ ಮನೋವೈಜ್ಞಾನಿಕ ಅಭ್ಯಾಸದ ವಿಷಯವಾಗಿ ಉಪಯೋಗಿಸಬಾರದು…. ಕವಿತೆಯೆಂದರೆ ಕೇವಲ ಭಾಷೆಯಲ್ಲ, ಬದಲು ಕಾವ್ಯವಾಗಿ ಮಾತ್ರ ತಿಳಿಯಬಹುದಾದ, ಅರ್ಥಾಂತರಿಬಹುದಾದ, ಅಥವಾ ಅನುವಾದಿಸಬಹುದಾದ ಅಸದೃಶವಾದ (sui generis) ಭಾಷೆ…. ಗದ್ಯದ ಒಂದು ಸಾಲಿನಲ್ಲಿ ಮತ್ತು ಪದ್ಯದ ಒಂದು ಸಾಲಿನಲ್ಲಿ ಶಬ್ದ ಒಂದೇ ಆದರೂ ಅವು ನಿಜಕ್ಕೂ ಎರಡು ಬೇರೆ ಬೇರೆ ಶಬ್ದಗಳು, ತೋರಿಕೆಯಲ್ಲಿಲ್ಲದೆ ಅವಕ್ಕೆ ಸಾಮ್ಯವೂ ಇಲ್ಲ. ಕವಿತೆಯ ಶಬ್ದವನ್ನು ನಾನ “ನಿ-ಶ್ಶಬ್ದ’ವೆಂದು (non-word) ಕರೆಯುತ್ತೇನೆ….ಕವಿತೆಯೆಂದರೆ ತಮ್ಮ ಅರ್ಥವಿಮುಖತೆಯಲ್ಲಿ ಲಯಬದ್ಧ ಅರ್ಥಾತೀತ ಅರ್ಥ ದತ್ತ (prosodic seನse-beyond-senಸe) ಆಗಮಿಸುವ ನಿ-ಶ್ಶಬ್ದಗಳಿಂದ ಮಾಡಿದ ಸಾಹಿತ್ಯಿಕ ರಚನೆ. ಕವಿತೆಯ ಗುರಿ ಅವೇದ್ಯ’ ಎನ್ನುತ್ತಾನೆ ಸಪೀರೋ. ಸಾಮಾನ್ಯ ಶಬ್ದಗಳಲ್ಲಿ ಹೇಳಲಾಗದ್ದನ್ನು ಹೇಳುವುದಕ್ಕೆಂದೇ ಬಂದ ಕವಿತೆಗೆ ಮತ್ತೆ ಸಾಮಾನ್ಯ ಶಬ್ದಗಳಲ್ಲಿ (ಅರ್ಥಾತ್ ವಿಮರ್ಶೆಯಲ್ಲಿ) ಅರ್ಥ ವಿವರಿಸುವ ಯತ್ನದ ಹಿಂದಿನ ವಿರೋಧಾಭಾಸವನ್ನು ಸಪೀರೋ ಇಲ್ಲಿ ತೋರಿಸುತ್ತಿದ್ದಾನೆ.

ಅದೇ ವರ್ಷ ಪ್ರಸಿದ್ಧ ಭಾಷಾವಿಮರ್ಶಕ ಲಿಯೋ ಸ್ಪಿಟ್ಝರ್ (Leo Spitzer) ತಾನು ನೀಡಿದ ಸ್ಮಿತ್ ಕಾಲೇಜ್ ಪ್ರಭಾಷಣ ಮಾಲಿಕೆಯ ಮೊದಲ ಭಾಷಣದಲ್ಲೇ ಸಪೀರೋನ ಈ ಮಾತನ್ನು ಎತ್ತಿಕೊಂಡು ಕಾವ್ಯವಿಮರ್ಶೆಯ ಪರವಾಗಿ ಆಡಿದ ಮಾತುಗಳೂ ಮನನಾರ್ಹ. ತಮ್ಮ ಕಾವ್ಯವನ್ನು ವಿವರಿಸಹೊರಡುವ ವಿಮರ್ಶಕರ ವಿರುದ್ಧವಾದ ಕವಿಗಳ ಬಂಡಾಯದ ಆದಿಯನ್ನು ಸ್ಪಿಟ್ಝರ್ ಹದಿನೆಂಟನೆಯ ಶತಮಾನದ ರೊಮ್ಯಾಂಟಿಕ್ ಚಳುವಳಿಯಲ್ಲಿ ಗುರುತಿಸುತ್ತಾನೆ. ಇದಕ್ಕೆ ಮುಂಚಿನ ಡಾಂಟೆಗಾಗಲಿ ಇಂಥ ವಿವರಣೆಯಲ್ಲಿ ಯಾವುದೇ ತಪ್ಪು ಗೋಚರಿಸುತ್ತಿರಲಿಲ್ಲ. ಮಾತ್ರವಲ್ಲ; ಅವರು ಸ್ವತಃ ಕಾವ್ಯವಿವರಣೆಗೆ ತಯಾರಾಗುತ್ತಿದ್ದರು ಕೂಡಾ. ಆದರೆ ಹದಿನೆಂಟನೆಯ ಶತಮಾನದಲ್ಲಿ ‘ಮೂಲ ಪ್ರತಿಭೆ’ (original genius) ಎಂಬುದೊಂದು ಕಲ್ಪನೆ ಸುರುವಾಯಿತು. ಈ ಮೂಲ ಪ್ರತಿಭೆ ಮನುಷ್ಯ ಸಮೂಹಕ್ಕಾಗಿ ಮಾತಾಡುವುದಲ್ಲ, ಸ್ವಂತಕ್ಕಾಗಿ ಮಾತ್ರ ಎಂದಾಯಿತು. ಆ ಲಾಗಾಯ್ತಿನಿ೦ದ ಅತಾರ್ಕಿಕ ಅರ್ಥದ ಮೇಲೆಯೇ ಹೆಚ್ಚು ಒತ್ತು ಮೂಡಿದುದನ್ನು ಕಾಣುತ್ತೇವೆ-ಯಾಕೆಂದರೆ ತಾರ್ಕಿಕ ಅರ್ಥವೆನ್ನುವುದು ಲೋಕಕ್ಕೆ ಸೇರಿದ್ದು, ಹಾಗೂ ಅತಾರ್ಕಿಕ ಅರ್ಥ ವ್ಯಕ್ತಿಗೆ ಸೇರಿದ್ದು.

ತನ್ನ ಸೃಷ್ಟಿಯ ಅತಾರ್ಕಿಕ, ಹಾಗೂ ಅದೆಂತೋ ‘ಗುರಿರಹಿತ’ವೂ ಆದ ಗುಣವನ್ನು ಏಕ ಪಕ್ಷೀಯವೂ, ತಾರ್ಕಿಕ ಅಥವಾ ವರ್ತನಾಧಾರಿತವೂ ಆದ ವಿವರಣೆಯ ವಿರುದ್ಧ ರಕ್ಷಿಸುವುದು ಇಂದಿನ ಕವಿಯ ಹಕ್ಕು ಮಾತ್ರವೇ ಅಲ್ಲ, ಕಡಮೆ ಕೂಡಾ ಹೌದೆನ್ನುವುದನ್ನು ಸ್ಪಿಟ್ಝರ್ ಒಪ್ಪುತ್ತಾನೆ. ಆದರೆ ಕವಿ ಉಪಯೋಗಿಸುವ ವಿಶಿಷ್ಟ ಮಾಧ್ಯಮವಾದ ಭಾಷೆಯೆನ್ನುವುದು ಅದೂ ಸಹಿತ ತಾರ್ಕಿಕ ಮತ್ತು ಅತಾರ್ಕಿಕವಾದೊಂದು ವ್ಯವಸ್ಥೆ ಎನ್ನುವ ಅಲ್ಲಗಳೆಯಲಾಗದ ಸತ್ಯವನ್ನು ನಾವು ಪರಿಗಣಿಸಬೇಕಾಗುತ್ತದೆ ಎನ್ನುತ್ತಾನೆ. ಸಾಧಾರಣವಾದ, ಮುಖ್ಯವಾಗಿ ತರ್ಕಬದ್ಧವಾದ, ಭಾಷೆಯ ಜತೆ ಅದು ಸಂಬಂಧಗಳನ್ನು ಇಟ್ಟುಕೊಂಡಿರುತ್ತಲೇ ಕವಿ ಅದನ್ನು ಇನ್ನಷ್ಟು ಅತಾರ್ಕಿಕವಾದ ಮಟ್ಟಕ್ಕೆ ಎತ್ತುತ್ತಾನೆ. ಕವಿತೆ ‘ನಿ-ಶ್ಶಬ್ದ’ಗಳಿಂದ ತುಂಬಿರುತ್ತದೆ ಎನ್ನುವುದು ನಿಜ ಅಲ್ಲವೇ ಅಲ್ಲ (ಬಹುಶಃ ತಮ್ಮ ಭಾಷೆಯಲ್ಲಾಗಲಿ ಮಾನುಷಿಕವಾದ ಇನ್ನಾವುದೇ ಭಾಷೆಯಲ್ಲಾಗಲಿ ಇರದಂಥ ಶಬ್ಧಗಳನ್ನು ನಿರ್ಮಿಸುವ ಡಾಡಾಯಿಸ್ಟರ ಅಥವಾ ಅಂಥದೇ ಇನ್ನಿತರರ ಕೆಲವು ಉದಾಹರಣೆಗಳಿನ್ನು ಬಿಟ್ಟರೆ). ಕವಿತೆ ಸಾಮಾನ್ಯವಾಗಿ ಯಾವುದೇ ಒ೦ದು ಭಾಷೆಗೆ ಸೇರಿದ ಶಬ್ದಗಳನ್ನು ಹೊಂದಿರುತ್ತದೆ, ಹಾಗೂ ಈ ಶಬ್ದಗಳಿಗೆ ತಾರ್ಕಿಕವೂ ಅತಾರ್ಕಿಕವೂ ಆದ ಧ್ವನಿಗಳಿದ್ದು, ಸಪೀರೋ ಹೇಳುವ ಲಯವಾಗಿ ಮಾರ್ಪಡುತ್ತವೆ’ ಎನ್ನುತ್ತಾನೆ ಸ್ಪಿಟ್ಝರ್. ಓದುಗನಿಗೆ ವಿಮರ್ಶೆಯ ಮಧ್ಯಸ್ತಿಕೆಯಿಲ್ಲದೆ ಇದು ತಟ್ಟಬಹುದಾದರೂ ಈ ಮಾರ್ಪಾಟಿನ ವಿಧಾನವನ್ನು ವಿವರಿಸುವುದು ವಿಮರ್ಶೆಯ ಕೆಲಸವಾಗುತ್ತದೆ. ಒಬ್ಬ ಒಳ್ಳೇ ಭಾಷಾವಿಮರ್ಶಕನ ಕೈಯಲ್ಲಿ ಕವಿತೆಯ ‘ಅತಾರ್ಕಿಕತೆ’ ಊನವಾಗುವುದಿಲ್ಲ; ಬದಲು ಕವಿ ಒಂದೇ ಲಂಘನದಲ್ಲಿ ಸಾಧಿಸಿದ ದೂರವನ್ನು ವಿಮರ್ಶಕ ನಿಧಾನವಾಗಿ ಕ್ರಮಿಸಬಹುದು. ಹೀಗಾದಾಗ ವಿಮರ್ಶಕ ಕವಿಗೆ ವಿರೋಧವಾಗಿ ವರ್ತಿಸದೆ ಕವಿಗೆ ಅನುಸಾರವಾಗಿ ವರ್ತಿಸುವುದು ಸಾಧ್ಯವಾಗುತ್ತದೆ. ಇದನ್ನು ಉದಾಹರಣೆಗಳ ಸಮೇತ ಸ್ಪಿಟ್ಝರ್ ತನ್ನ ಪ್ರಭಾಷಣದಲ್ಲಿ ವಿವರಿಸುತ್ತ ಹೋಗುತ್ತಾನೆ.

ಲಿಯೋ ಸ್ಪಿಟ್ಝರ್ ಸುಪ್ರಸಿದ್ಧ ವಿಮರ್ಶಾಗ್ರಂಥವಾದ ‘ಮಿಮೆಸಿಸ್’ನ (Memisis) ಕರ್ತು ಎರಿಕ್ ಔವರ್‌ಬಾಖ್‌ನ (Eric Auerbach) ಪಂಡಿತ ಪರಂಪರೆಗೆ ಸೇರಿದ ವಿಮರ್ಶಕ. ಇವರ ಬರಹಗಳನ್ನು ಓದಿದವರಿಗೆ ಗೊತ್ತಾಗುತ್ತದೆ, ಆಧುನಿಕ ಕಾಲಘಟ್ಪವೂ ಸೇರಿದಂತೆ ಪಾಶ್ಚಾತ್ಯ ಸಾಹಿತ್ಯ ವಾಹಿನಿಯ ಕೇವಲ ವಿವರಣೆಗೆ ಮಾತ್ರವೇ ಅಲ್ಲ, ಆ ವಿವರಣೆಯ ಮೂಲಕದ ಅದರ ನಿಮಾ೯ಣಕ್ಕೆ ಕೂಡಾ ಇಂಥ ವಿಮರ್ಶಕರ ಕೊಡುಗೆ ಎಷ್ಟೊಂದಿದೆ ಎನ್ನುವುದು. ಅದರಲ್ಲೂ ಈ ಭಾಷಾವಿಮರ್ಶಕರ ವಿಶಿಷ್ಣತೆಯೆಂದರೆ, ಅವರೆಂದೂ ನಾವು ಭಾಷೆಯನ್ನು ಮರೆಯದಿರುವಂತೆ ಎಚ್ಚರವಹಿಸುತ್ತಲೇ ಇರುತ್ತಾರೆ. ಯಾಕೆಂದರೆ ಕವಿ ಏನನ್ನು ಸಾಧಿಸುವುದಿದ್ದರೂ ಅದು ಭಾಷೆಯ ಮೂಲಕವೇ ನಡೆಯಬೇಕಾದ ಕ್ರಿಯೆ; ಸಾಮಾನ್ಯವಾದ ಭಾಷೆಯಿಂದ ಅಸಾಮಾನ್ಯವಾದ ಕವಿತೆಯನ್ನು ಕವಿ ಹೇಗೆ ಸೃಷ್ಟಿಸುತ್ತಾನೆ ಎನ್ನುವ ವಿಸ್ಮಯವೇ ಇಂಥ ವಿಮರ್ಶಕರನ್ನು ವಿಶ್ಲೇಷಣೆಗೆ ಪಚೋದಿಸುವ ಸಂಗತಿ. ಇದರಲ್ಲಿ ವಿಮರ್ಶಕರಿಗೂ ಓದುಗರಿಗೂ ಸಮನಾದ ಆಸಕ್ತಿಯಿರುವ ವರೆಗೆ ಕಾವ್ಯದ ಜತೆಗೇ ಕಾವ್ಯ ವಿಮರ್ಶೆಗೂ ಬಹುಶಃ ಅವಕಾಶವಿರುತ್ತದೆ.

‘I have immortal longings in me’ ಎನ್ನುತ್ತಾಳೆ ಕ್ಲಿಯೋಪಾತ್ರ ಶೇಕ್‌ಸ್ಪಿಯರನ Antony and Cleopatra ನಾಟಕದ ಐದನೆಯ ಅಂಕದಲ್ಲಿ. ಈಜಿಪ್ಟಿನ ಸೋಲು ಖಚಿತವೆಂದು ಗೊತ್ತಾದಾಗ ಸ್ವಯಂ ಹತ್ಯೆಗೆ ಪೂರ್ತಿ ರಾಜಮಕುಟದೊಂದಿಗೆ ಸಿದ್ಧಳಾಗುವ ಕ್ಲಿಯೋಪಾತ್ರ ಹೇಳುವ ಮಾತು ಇದು. ಇಡೀ ನಾಟಕದಲ್ಲಿ ಇದೊಂದು ಅದ್ಭುತವಾದ ವಾಕ್ಯ. ಏನಿದರ ಅರ್ಥ? ಅರ್ಥ ವಿವರಿಸ ಹೊರಟ ತಕ್ಷಣ ವಾಕ್ಯದ ವಿಸ್ಮಯ ಕಳೆದುಹೋಗುತ್ತದೆ. ಆದರೆ ವಿಮರ್ಶಕ ವಿವರಿಸಬೇಕಾದ್ದು ವಾಕ್ಯದ ಅರ್ಥವನ್ನಲ್ಲ; ವಾಕ್ಯದ ಅದ್ಭುತವನ್ನು. Immortal ಎಂದರೆ ಅಮರ, ಅನಶ್ವರ, ಶಾಶ್ವತ, ಅಮರ್ತ್ಯ ಎಂದು ಮುಂತಾದ ಅರ್ಥಗಳಿವೆ; mortal ಎನ್ನುವುದರ ವಿರೋಧ ಶಬ್ದ ಇದು. ಇಂಗ್ಲಿಷ್‌ನ mortal ಶಬ್ದದ ಲ್ಯಾಟಿನ್ ಮೂಲದ್ದು ಈ ಮೂಲಕ್ಕೂ ಸಂಸ್ಕೃತದ ಮೃತ್ಯು ಶಬ್ದದ ಮೂಲಕ್ಕೂ ಸಂಬಂಧವಿದೆ. ಸಾಯಲು ಹೊರಟ ಕ್ಲಿಯೋಪಾತ್ರ ತನ್ನಲ್ಲಿ ಶಾಶ್ವತ ಹಂಬಲಗಳಿವೆ ಎನ್ನುವುದೆಂದರೆ ಅದೆಂಥ ವಿರೋಧಾಭಾಸ! ಸಾಯುವುದರ ಮೂಲಕವೇ ಮನುಷ್ಯನ ಶಾಶ್ವತ ಹಂಬಲಗಳು ಕೈಗೂಡುವುದೇ? ಅಥವಾ ಸತ್ತು ಅಮರಳಾಗುವುದಕ್ಕೆ ಕ್ಲಿಯೋಪಾತ್ರ ಹಂಬಲಿಸುತ್ತಿದ್ಧಾಳೆಯೇ? ಮನುಷ್ಯನ ಎಲ್ಲ ಆಸೆಗಳೂ ಮಣ್ಣುಗೂಡಿದಾಗ ಉಳಿಯುವ ಆಸೆಗಳೇ ಅಮರತ್ವದ ಆಸೆಗಳೇ? ಎಷ್ಟೇ ಪಯತ್ನಿಸಿದರೂ ಈ ಅರ್ಥ ನಿಗೂಢತೆಯಿಂದ ನಾವು ಬಿಡಿಸಿಕೊಳ್ಳಲಿಕ್ಕಾಗುವುದಿಲ್ಲ. ಅದೇ ರೀತಿ ಶೇಕ್‌ಸ್ಪಿಯರನ ವಾಕ್ಯವನ್ನು ಕನ್ನಡಕ್ಕಾಗಲಿ ಇನ್ನೊಂದೇ ಭಾಷೆಗಾಗಲಿ ಅದರ ಪೂರ್ತಿ ಅದ್ಭುತದೊಂದಿಗೆ ಅನುವಾದಿಸುವುದು ಕಷ್ಪಸಾಧ್ಯ. ‘ಅಮರ್ತ್ಯ ಆಸೆಗಳಿವೆ ನನ್ನಲ್ಲಿ’ ಎನ್ನುವುದು ಬಹುಶಃ ಅರ್ಥ ಮತ್ತು ಲಯಗಳನ್ನು ಆದಷ್ಟೂ ಹೊಂದಿಸಿಕೊಂಡು ಮಾಡಬಹುದಾದ ಕನ್ನಡಾನುವಾದ. ಇತರ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ; ಆದರೆ ಯಾವ ಅನುವಾದವೂ ಮೂಲದ ಸೊಗಸನ್ನು ಸಂಪೂರ್ಣವಾಗಿ ತರಲಾರದು. ಶೇಕ್‌ಸ್ಪಿಯರ್ ಹೇಗೆ ಲ್ಯಾಟಿನ್ ಮೂಲದ ‘ಇಮೋರ್ಟಲ್’ ಎಂಬ ವಿಶೇಷಣಪದ ಮತ್ತು ಇಂಗ್ಲಿಷ್ (ಅರ್ಥಾತ್ ಆಂಗ್ಲೋ-ಸ್ಯಾಕ್ಸನ್) ಮೂಲದ ‘ಲೋಂಗಿಂಗ್ಸ್’ ಎಂಬ ನಾಮಪದವನ್ನು ಒಟ್ಟಿಗೆ ತರುತ್ತಾನೆ ನೋಡಿ. ಈ ಪದಗಳಲ್ಲಿರುವ ‘ಓ’ ಎಂಬ ಹಂಬಲದ ಸ್ವರ ಕೂಡಾ ನಮ್ಮನ್ನು ಆಕರ್ಷಿಸುವ ವಿಷಯ. ಜತೆಗೇ ‘ಇನ್ ಮೀ’ ಎಂಬಲ್ಲಿನ ಸ್ವರಮೇಳವೂ ಅಷ್ಟೇ ಮೃದುವಾದುದು. ವಾಕ್ಯ ‘ಐ’ ಎ೦ಬ ಚಿಕ್ಕ ಆತ್ಮನೇ ಪದದಲ್ಲಿ ಆರಂಭವಾಗಿ ‘ಮೀ’ ಎಂಬ ಅಂಥದೇ ಇನ್ನೊಂದು ಪದದಲ್ಲಿ ಕೊನೆಗೊಳ್ಳುವುದನ್ನೂ ಗಮನಿಸಿ: ಈ ಪದಗಳ ನಡುವೆ ‘ಇಮೋರ್ಟಲ್ ಲಾಂಗಿ೦ಗ್ಸ್’ ಎ೦ಬ ಅಮರತ್ವ ಸೂಚಿಸುವ ಸುದೀರ್ಘ ಪದಸಮೂಹ ಬರುತ್ತದೆ. ಇದೆಲ್ಲದರಿಂದಾಗಿ ಇದು ಹತಾಶೆಯ ಆಕ್ರಂದನವೋ ಅಥವಾ ಆಹ್ಲಾದದ ಉದ್ಗಾರವೋ, ಅಥವಾ ಪಾಲ್ ದ ಮಾನ್ ಹೇಳಬಹುದಾದಂತೆ, ಇವುಗಳ ನಡುವೆ ವ್ಯತ್ಯಾಸವೇನು ಎನ್ನುವಷ್ಟು ದಿಕ್ಚ್ಯುತಿಯೊಂದು ಉಂಟಾಗುತ್ತದೆ.
ಕನ್ನಡದ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಜನ್ನನ ‘ಯಶೋಧರ ಚರಿತೆ’ಯಲ್ಲಿ ಬರುವ ಈ ಪದ್ಯ:

ಅಮೃತಮತಿಯೆಂಬ ಪಾತಕಿ-
ಯ ಮಾಯೆ ಬನಮಾಯ್ತು ಚಂದ್ರಮತಿ ಮಾತೆಯ ಮಾ-
ತೆಮಗೆ ಬಲೆಯಾಯ್ತು ಹಿಂಸನ-
ಮಮೋಘ ಶರಮಾಯ್ತು ಕಡೆದುದಾತ್ಮಕುರಂಗಂ

ಬಹುಶಃ ಕನ್ನಡದ ಕಂದ ಛಂದಸ್ಸನ್ನು ಜನ್ನನಷ್ಟು ಸೃಷ್ಟ್ಯಾತ್ಮಕವಾಗಿ ಬಳಸಿದವರು ವಿರಳ. ಅದರಲ್ಲೂ ಈ ಮೇಲಿನ ಪದ್ಯ ಅದರ ಸಾಧ್ಯತೆಯ ಉತ್ತುಂಗ ಸ್ಥಿತಿಯನ್ನು ತಲುಪಿದೆಯೆಂದೇ ಹೇಳಬಹುದು. ‘ಅಮೃತಮತಿ’ ಎಂದು ನಿಧಾನಗತಿಯಲ್ಲಿ ಆರಂಭವಾಗುತ್ತ ಮುಂದುವರಿದಂತೆ ಚರಣಾಂತ್ಯದಲ್ಲಿ ಯಾವುದೇ ಯತಿ ಅರ್ಥಾತ್ ನಿಲುಗಡೆಯಿಲ್ಲದೆ ತೀವ್ರ ಗತಿಯನ್ನು ಪಡೆದುಕೊಳ್ಳುತ್ತ ‘ಕಡೆದುದಾತ್ಮಕುರಂಗಂ’ ಎಂಬ ನಿಶ್ಚಿತ ಘಾತದಲ್ಲಿ ಕೊನೆಗೊಳ್ಳುತ್ತದೆ. ಮೊದಲ ಮೂರೂ ಸಾಲುಗಳು ಪದಾಂತ್ಯದಲ್ಲಿ ಕೊನೆಗೊಳ್ಳದೆ ನಂತರದ ಸಾಲಿನತ್ತ ಜೀಕುವ ವಿಧಾನದಲ್ಲಿ ಯಶೋಧರನ ವಿಧಿಯ ಜೀಕಾಟವೂ ಇದೆ. ‘ಕಡೆದುದಾತ್ಮಕುರಂಗಂ’ ಎಂಬಲ್ಲಿ ಕ್ರಿಯಾಪದ ಮತ್ತು ಕರ್ತೃಪದಗಳು ಒಂದಾಗಿರುವುದು, ಅದರಲ್ಲೂ ಕ್ರಿಯಾಪದ ಮೊದಲು, ಕರ್ತೃಪದ ನಂತರ ಬಂದಿರುವುದು ಗಮನಾರ್ಹ. ಇಡೀ ಪದ್ಯ ಯಶೋಧರ ತನ್ನ ಅವಸ್ಥೆಯನ್ನು ತಾನೇ ಜಿಂಕೆಯೊಂದು ಬೇಟೆಗಾರನ ಬಲೆಗೆ ಬಿದ್ದ ರೂಪಕದ ಮೂಲಕ ಚಿತ್ರಿಸುವ ವಿಷಾದ ಭಾವದ್ದು. ಇನ್ನು ‘ಮಾ’ಕಾರದ ಮರುಕಳಿಕೆ ಹಾಗೂ ‘ಮಾತೆಯ ಮಾತೆಮಗೆ’ ಎಂಬಲ್ಲಿ ಮಾತೇ ಮಾತೆಯಾಗಿ ಇಮ್ಮಡಿಸುವ ಕ್ರಮ ಮುಂತಾದುವು ಪದ್ಯದ ಭಾವಲಯವನ್ನು ಹೆಚ್ಚಿಸುವುದಕ್ಕೆ ಕಾರಣಗಳಾಗುತ್ತವೆ.

ವಿಮರ್ಶೆಯೆಂದರೆ ಬರೇ ಛಂದೋಲಯಗಳ ವಿಚಾರವೂ ಅಲ್ಲ. ಅದು ಯಾವತ್ತಾದರೂ ಅರ್ಥವಲಯದಲ್ಲಿ ಸ೦ಚರಿಸಬೇಕಾಗುತ್ತದೆ. ಆದರೆ ಹಾಗೆ ಸಂಚರಿಸುತ್ತ ಭಾಷೆಯ ಸ್ತರಕ್ಕೆ ಖಾಯಮ್ಮಾಗಿ ವಿದಾಯ ಹೇಳುವಂತೆಯೂ ಇಲ್ಲ. ಸ್ಪಿಟ್ಝರ್ ಹೇಳುವಂತೆ ಇವೆರಡನ್ನೂ ಅದು ಒಟ್ಟೊಟ್ಟಿಗೇ ನಿಭಾಯಿಸಬೇಕಾಗುತ್ತದೆ. ಆದರೆ ವಿಮರ್ಶೆ ಇಂದು ಹಲವರಿಗೆ ತಮ್ಮ ಇಷ್ಟದ ಥಿಯರಿಗಳನ್ನು ಹೇರುವುದಕ್ಕಿರುವ ಒಂದು ವಿಧಾನ: ಫ್ರಾಯ್ಡ್‌ನ ಮನೋವಿಜ್ಞಾನಕ್ಕೆ ಬದ್ಧರಾದವರು ಸಾಹಿತ್ಯ ಕೃತಿಗಳಲ್ಲಿ ಮನುಷ್ಯನ ಹತ್ತಿಕ್ಕಿದ ಬಯಕೆಗಳು ಎಸಗುವ ರಂಪಾಟಗಳನ್ನು ಕಾಣುತ್ತಾರೆ; ಮಾರ್ಕ್ಸಿಸಮಿಗೆ ಬದ್ದರಾದವರು ದುಡಿಮೆ ಮತ್ತು ಅದಕ್ಕೆ ಸಂಬಂಧಿಸಿದ ಶೋಷಣೆಯನ್ನು ಕಾಣುತ್ತಾರೆ; ದಲಿತ ಬಂಡಾಯದವರು ವರ್ಗ ಮತ್ತು ಜಾತಿವ್ಯವಸ್ಥೆಯ ಒಳನೋಟಗಳನ್ನು ಕಾಣುತ್ತಾರೆ; ಸ್ತ್ರೀವಾದಿಗಳು ಕಾಲಾಂತರದಿಂದ ಮುಂದರಿದಿರುವ ಲಿಂಗತಾರತಮ್ಯದ ಸಾದೃಶ್ಯಗಳನ್ನು ಕಾಣುತ್ತಾರೆ; ಇವೆಲ್ಲ ವಾದಗಳಿಂದಲೂ ಮುಕ್ತರೆಂದೆನಿಸಿದ ನಿರಚನವಾದಿಗಳು ಸಹಾ ಸರ್ವತ್ರ ಅರ್ಥ ಸಂದಿಗ್ಧತೆಯನ್ನು ಕಾಣುತ್ತಾರೆ. ಪೂರ್ವಾಗ್ರಹಗಳೇ ಇಲ್ಲದ ಶುದ್ಧಾಂಗ ಓದು ಬಹುಶಃ ಸಾಧ್ಯವಿಲ್ಲವಾದರೂ, ಸಿದ್ಧಾಂತವೇ ಸಾಹಿತ್ಯಕ್ಕಿಂತ ಮುಂದೆ ಬಂದು ನಿಲ್ಲುವಾಗ ಆ ಸಿದ್ಧಾಂತವೇ ಓದಿಗೆ ಅಡಚಣೆಯಾಗುತ್ತದೆ. ಯಾಕೆಂದರೆ ಸಿದ್ಧಾಂತದ ಚೌಕಟ್ಟಿಗೆ ಹೊರತಾಗಿರುವುದೇನೂ ಆಗ ಕಣ್ಣಿಗೆ ಬೀಳುವುದಿಲ್ಲ; ಹಾಗೂ ಎಲ್ಲೆಡೆ ಸಿದ್ಧಾಂತದ ಪುರಾವೆಗಳಲ್ಲದೆ ಇನ್ನೇನೂ ಗೋಚರಿಸುವುದೂ ಇಲ್ಲ. ಇದೇ ಕಾರಣಕ್ಕೆ ಅಮೆರಿಕನ್ ಚಿಂತಕಿ ಸೂಸನ್ ಸೊಂಟಾಗ್ ‘ವಿವರಣೆಯ ವಿರುದ್ಧ’ (Against Interpretation)ಎಂಬ ಲೇಖನ ಬರೆದಳು. ವಿಮರ್ಶೆಯ ಮಧ್ಯಸ್ತಿಕೆಯಿಲ್ಲದೆ ಕೃತಿಯ ಜತೆ ನೇರವಾದ ಭೋಗ (libidinal)ಸಂಬಂಧವನ್ನು ಬೆಳೆಸಿಕೊಳ್ಳುವುದೇ ನಿಜವಾದ ಓದು ಎನ್ನುವುದು ಸೊಂಟಾಗ್‌ಳ ಅಭಿಪ್ರಾಯ. ಆದರೆ ಸೊಂಟಾಗ್ ಲಿಯೋ ಸ್ಪಿಟ್ಝರ್‌ನ ಮಾತನ್ನು ಬಹುಶಃ ತಳ್ಳಿಹಾಕಲಾರಳು ಎಂದು ಕಾಣುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆಗೆ ಶೃಂಗಾರ ಗೈದ
Next post ವಿದಾಯ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…