ಖಾಂಡವವನ ದಹನ

-ದ್ರೌಪದಿಯನ್ನು ಮದುವೆಯಾಗಿ ಪಾಂಚಾಲರ ಬೆಂಬಲವನ್ನೂ, ಕೃಷ್ಣನ ಕಡೆಯಿಂದ ಯಾದವರ ಬಲವನ್ನೂ ಪಡೆದುಕೊಂಡ ಪಾಂಡವರನ್ನು ಅಂದಾಜು ಮಾಡಿದ ಕೌರವರು, ಕುರುಸಾಮ್ರಾಜ್ಯವನ್ನು ಎರಡು ಪಾಲು ಮಾಡಿ, ಸಮೃದ್ಧವಾದ ಗಂಗಾನದಿಯ ದಡದಲ್ಲಿನ ಹಸ್ತಿನಾಪುರವನ್ನು ರಾಜಧಾನಿಯನ್ನಾಗಿ ಉಳಿಸಿಕೊಂಡು, ಪಾಂಡವರಿಗೆ ಯಮುನಾ ನದಿಯ ದಕ್ಷಿಣದ ಹಿಂದುಳಿದ ಪ್ರದೇಶವೂ ಕಾಡುಮೇಡುಗಳಿಂದ ಕೂಡಿದ ಖಾಂಡವಪ್ರಸ್ಥವೆಂಬ ಬರಡು ನೆಲವನ್ನು ನೀಡಿದರು. ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸಿದ ಪಾಂಡವರು, ತಮ್ಮ ಪರಾಕ್ರಮದಿಂದ ಆ ಕಾಡನ್ನು ನಾಡಾಗಿಸಿ ಅಭಿವೃದ್ಧಿಪಡಿಸುವ ಪಣತೊಟ್ಟರು-

ಕುರುಸಾಮ್ರಾಜ್ಯವ ವಿಭಜನೆ ಮಾಡಲು ಹಿರಿಯರೆಲ್ಲರೂ ನಿರ್ಧರಿಸಿ
ಕುರುಪಾಂಡವರನು ಬೇರೆ ಮಾಡಿದರು ಹಿರಿಯರು ಮಧ್ಯಸ್ಥಿಕೆ ವಹಿಸಿ
ಖಾಂಡವಪ್ರಸ್ಥವು ರಾಜಧಾನಿ ಈ ಹಿಂದಿನ ಭಾರತವಂಶದಲಿ
ನಹುಷ ಪುರೂರವರಾಳಿದ ನಾಡಿನ ಭಾಗವು ಹಿಂದಿನ ಕಾಲದಲಿ
ಭಾರತ ವಂಶದ ಯಯಾತಿ ರಾಜನು ಆಳಿದ ಭಾಗವು ಈ ಹಿಂದೆ
ಕೇಂದ್ರಾಡಳಿತವು ಹಸ್ತಿನಪುರಕ್ಕೆ ಬದಲಾಗಿದ್ದಿತು ಆ ಮುಂದೆ
ಹಸ್ತಿನಾಪುರವು ಆಳುವ ಮಂದಿಗೆ, ಪಾಂಡವರಿಗೆ ಖಾಂಡವಪ್ರಸ್ಥ
ಆಸ್ತಿಯೆಲ್ಲವೂ ಹಂಚಿಕೆಯಾಯಿತು ಆಳುವವರಿಗೇ ಪ್ರಾಶಸ್ತ್ಯ!

ಖಾಂಡವಪ್ರಸ್ಥವ ಪಡೆದ ಪಾಂಡವರು ಕಂಡರು ಅಲ್ಲಿನ ಕಾಡನ್ನು
ಸಾವಿರ ಸಾವಿರ ಮೃಗಸಂತತಿಗಳು ನೆಲೆಸಿದ ಖಾಂಡವವನವನ್ನು
ಪ್ರಾಣಿ-ಪಕ್ಷಿಗಳು, ಹಾವು-ಚೇಳುಗಳು ಹಾಯಾಗಿದ್ದವು ಬಾಳುತಲಿ
ಆನೆ,ಸಿಂಹ,ಹುಲಿ,ಚಿರತೆ,ಕಿರುಬಗಳು ಮೆರೆಯುತಲಿದ್ದವು ಕಾಡಿನಲಿ
ಎತ್ತರ ಎತ್ತರ ಮರಗಳು ಎಲ್ಲೆಡೆ ಚುಂಬಿಸುತಿದ್ದವು ಮುಗಿಲನ್ನು
ಹಬ್ಬಿದ ಬಳ್ಳಿಯ ಹಸುರಿನ ಎಲೆಗಳು ಸೆಳೆಯುತಲಿದ್ದವು ಮನವನ್ನು
ಮರಗಳ ಎಲೆಗಳ ನಡುವಲಿ ಸುಳಿಯಲು ಹವಣಿಸುತಿರೆ ರವಿ ಕಿರಣಗಳು
ಹಚ್ಚನೆ ಗರಿಕೆಗೆ ಹಾತೊರೆವಂತಹ ಹೊನ್ನಿನ ಬಣ್ಣದ ಹರಿಣಗಳು
ಲಕ್ಷಲಕ್ಷಗಳ ಲೆಕ್ಕದೊಳಿದ್ದವು ವನ್ಯಜೀವಿಗಳು ಕಾಡಿನಲಿ
ಪ್ರಾಣಿ-ಪಕ್ಷಿಗಳ ತವರೆನಿಸಿದ್ದಿತು ಸುಂದರ ಖಾಂಡವವನವಲ್ಲಿ!

ಯಮುನೆಯ ಕಾಲುವೆ ಹರಿಯುತಲಿದ್ದಿತು ಖಾಂಡವವನದ ಪಕ್ಕದಲಿ
ಜಲಚರ ಜೀವಿಯು ಅದರೊಳಗಿದ್ದವು ಲಕ್ಷಲಕ್ಷಗಳ ಲೆಕ್ಕದಲಿ
ಹಳ್ಳಿಯು ಹಲವಾರಿದ್ದವು ಸನಿಹದಿ ಕಾಡಿನ ಸುತ್ತಲೂ ಅಲ್ಲಲ್ಲಿ
ಸಣ್ಣಪುಟ್ಟ ವ್ಯವಸಾಯವ ಮಾಡುತ ಬದುಕುತಲಿದ್ದರು ಜನ ಅಲ್ಲಿ!
ಖಾಂಡವವನದಲಿ ನಡುಭಾಗದಲ್ಲಿ ನಾಗ ಜನಾಂಗವು ನೆಲೆಸಿತ್ತು
ವಿವಿಧ ವಿದ್ಯೆಯಲಿ ಚತುರತೆ ಹೊಂದಿದ ಪ್ರತಿಭೆಯ ಕಲೆ ಅವರಲ್ಲಿತ್ತು
ನಾಗರು ಎಂಬುವ ಹೆಸರಲಿ ಬೀಗುತ ವಾಸಿಸುತ್ತಿದ್ದರು ಕಾಡೊಳಗೆ
ತಮ್ಮಯ ಪಾಡಿಗೆ ತಾವಿರುತಿದ್ದರು ಹಸುರಿನ ಖಾಂಡವವನದೊಳಗೆ!

ಖಾಂಡವಪ್ರಸ್ಥದಿ ಖಾಂಡವವನವೋ ಬಗೆಬಗೆ ಮೂಲಿಕೆಗಳ ತವರು
ಖಾಂಡವವನದಲಿ ದೊರಕುತಲಿದ್ದಿತು ವಿಧವಿಧ ಔಷಧಿಗಳ ಬೇರು
ಪಾಂಡವರಲ್ಲಿಗೆ ಬಂದರು ಅಲ್ಲಿನ ಕಾಡನು ಕಡಿಯುವ ಸಲುವಾಗಿ
ಖಾಂಡವವನವನ್ನು ನಾಶವ ಮಾಡುತ ನಾಡನು ಕಟ್ಟಲು ಸೊಗಸಾಗಿ!

ನಾಡನು ಕಟ್ಟಲು ಕಾಡನು ಕಡಿವರು ಅಭಿವೃದ್ಧಿಯ ಹೆಸರಿನಲಿ
ಕಾಡನು ಕಡಿಯದೆ ನಾಡನು ಕಟ್ಟಲು ಸಾಧ್ಯವೆ? ಎನುವರು ವಾದದಲಿ
ಕಾಡಿನ ಜೀವಿಗೆ ಕಂಟಕವಲ್ಲವೆ? ಅವುಗಳು ಮಾಡಿದ ತಪ್ಪೇನು?
ನಾಡಿಗೆ ಕೂಡಾ ಸಂಕಟವಲ್ಲವೆ? ಪ್ರಕೃತಿ ವಿನಾಶವು ಗೊತ್ತೇನು?
ಹಸಿರೇ ಉಸಿರನು ನೀಡುತಲಿರುವುದು ಲೋಕದ ಜೀವಿಗೆ ಅನುದಿನವು
ಹಸಿರದು ಅಳಿದರೆ ಉಸಿರಿಗೆ ತೊಂದರೆ ಲೋಕವಿನಾಶವು ದಿನದಿನವು
ಉಸಿರಿನ ಹಸಿರನು ಕೊಲ್ಲುತಲಿದ್ದರೆ ಜೀವಿಯು ಅಳಿವುವು ಬಲು ಬೇಗ
ಹಸಿರುಳಿದಿದ್ದರೆ ಉಳಿವುದು ಈ ಧರೆ ಎಂಬುದು ಅರಿವುದು ಯಾವಾಗ?

ಕಾಡನು ಕಡಿವುದು ಬೇಡೆಂದೆನ್ನುವ ಬೇಡಿಕೆ ಅಲ್ಲಿನ ನಾಗರದು
ಕಾಡನು ಕಡಿದೇ ತೀರುವವೆಂಬುವ ಹಠ ಆ ಪಾಂಡವ ವೀರರದು
ಪ್ರತಿಭಟಿಸುತ್ತಲಿ ಯದ್ಧಕ್ಕೆ ನಿಂತರು ನಾಗರು ಅವರಿಗೆ ಎದುರಾಗಿ
ದ್ವಾರಕೆಯಿಂದಲಿ ಕೃಷ್ಣನು ಬಂದನು ಪಾಂಡವರಿಗೆ ಬೆನ್ನೆಲುಬಾಗಿ
ಆತ್ಮರಕ್ಷಣೆಗೆ ನಾಗ ಜನಾಂಗವು ಹೋರಾಟಕೆ ತಾನಿಳಿದಿತ್ತು
ವಿಷವನು ಸವರಿದ ಹರಿತ ಬಾಣವನು ವೈರಿಪಡೆಯ ಕಡೆಗೆಸೆದಿತ್ತು
ನಾಗರ ಕೊಲ್ಲದೆ ಬೇರೆಯ ದಾರಿಯು ಇಲ್ಲದೆ ಪಾಂಡವರಿಗೆ ಆಗ
ವೇಗದಿ ಕಾರ್ಯವ ಪೂರ್ಣಗೊಳಿಸಲು ನಿರ್ಧರಿಸಿದ್ದರು ಬಲುಬೇಗ!
ಕೃಷ್ಣನ ಸೂಚನೆ ಮೇರೆಗೆ ಪಾರ್ಥನು ಕಾಡಿಗೆ ಬೆಂಕಿಯ ಹಚ್ಚಿದನು
ವೇಗದಿ ಸುತ್ತುತ ಸಂಚರಿಸುತ್ತಲಿ ನಾಗರಪಡೆಯನು ಚಚ್ಚಿದನು
ಪಾಂಡವರೆಲ್ಲರು ಒಟ್ಟಿಗೆ ಸೇರುತ ಸುತ್ತಲೂ ಬೆಂಕಿ ಹಚ್ಚಿದರು
ಬೆಂಕಿಯ ಕೆನ್ನಾಲಿಗೆಯನು ನೋಡಿದ ಕಾಡಿನ ನಾಗರು ಬೆಚ್ಚಿದರು
ಧಾವಿಸಿ ಬರುತಿಹ ಸಾವನ್ನು ತಡೆಯಲು ಸರ್ವಪ್ರಯತ್ನವ ಮಾಡಿದರು
ಹೆಂಡತಿ ಮಕ್ಕಳ ಸಂಗಡ ಹಲವರು ಮಡಿಯುತ ಯಮಪುರಿ ಸೇರಿದರು!

ಖಾಂಡವವನವನು ದಹಿಸುವ ಕಾರ್ಯಕ ಸಹಕರಿಸಿದ್ದಿತು ಬಿರುಗಾಳಿ
ಒಂದೆಡೆಯಿಂದಲಿ ಇನ್ನೊಂದೆಡೆ ಕಡೆ ಹಬ್ಬುತ ನುಗ್ಗಿತು ರಭಸದಲಿ
ಚಟಪಟ ಸದ್ದನು ಮಾಡುತ ಬಿದಿರಿನ ಮೆಳೆಗಳು ಉರಿದವು ಸರಸರನೆ
ಒಣಗಿದ ಮರಗಳು ಹರಡಿದ ಪೊದೆಗಳು ಉರಿಯತೊಡಗಿದವು ಬಿರಬಿರನೆ
ಹಸುರಿನ ಗಿಡಮರ ಧಗಧಗ ಉರಿದವು ನರಳುತ ಬೆಂಕಿಯ ಜ್ವಾಲೆಯಲಿ
ಕಾಡಿನ ಪ್ರಾಣಿಯು ಓಡುತ ಅರಚುತ ಸೀದವು ಬೆಂಕಿಯ ಒಡಲಿನಲಿ
ಗೋಳನು ಕೇಳುವರಾರೂ ಇಲ್ಲದೆ ಬಾಳಿಗೆ ವಿದಾಯ ಎಂಬಂತೆ
ಸಾವಿರ ಸಾವಿರ ಜೀವಿಗಳಳಿದವು ಹೇಳಲು ಹೆಸರೇ ಇರದಂತೆ!
ಬೆಂಕಿಯು ಕೆನ್ನಾಲಿಗೆ ಚಾಚುತ್ತ ನುಗ್ಗುತಲಿದ್ದಿತು ಎಲ್ಲ ಕಡೆ
ಬೆಂಕಿಯ ಝಳವನು ಸಹಿಸಲು ಆಗದೆ ಜೀವಿಯು ವಿಧವಿಧ ದಿಕ್ಕಿನೆಡೆ
ಧಗಧಗ ಉರಿಯುವ ಬೆಂಕಿ ನಾಲಗೆಗೆ ಬೇಯತೊಡಗಿತ್ತು ಕಾಡೆಲ್ಲ
ಕೊತ ಕೊತ ಕುದಿಯುತ ಜೀವಜಂತುಗಳು ಸೀದು ಬೂದಿಯಾದವು ಎಲ್ಲ!
ತಕ್ಷಕನೆಂಬುವ ನಾಗರ ಒಡೆಯನು ಓಡಿದ ಹರಿಯುವ ಯಮುನೆಯೆಡೆ
ನೋಡಿದ ಅರ್ಜುನ ಅವನನು ತಡೆಯುತ ಕೊಲ್ಲಲು ಬಾಣವ ಗುರಿಯನಿಡೆ
ಬೆದರಿದ ಒಡೆಯನು ಬೇಡಿದನವನನು- “ಮಧ್ಯಮ ಪಾಂಡವನೇ ಶರಣು
ಉತ್ತರದಿಕ್ಕಿನ ಹುತ್ತದ ನಾಡಿನ ಅಣ್ಣನ ಬಳಿ ನಾ ತೆರಳುವೆನು
ಹೆಂಡತಿ ಮಕ್ಕಳು ಇರುವರು ಅಲ್ಲಿಯೇ ಕೊಲ್ಲದೆ ನನ್ನನು ಉಳಿಸಿಂದು
ಉಳಿಸಿದೆಯಾದರೆ ಜೀವನವೆಲ್ಲವು ನೆನೆಯುವೆ ನಿನ್ನನು ಎಂದೆಂದೂ”
—–
ಒಮ್ಮೆ ಅಗ್ನಿದೇವನು ಬ್ರಾಹ್ಮಣ ವೇಷದಲ್ಲಿ ಅರ್ಜುನನ ಬಳಿ ಬಂದು ತನಗೆ ಅಜೀರ್ಣವಾಗಿದೆಯೆಂದು ಹೇಳಿ ಖಾಂಡವವನವನ್ನು ತನಗೆ ಆಹಾರವಾಗಿ ನೀಡಿದರೆ ಅಲ್ಲಿನ ಔಷಧಿ ಸಸ್ಯಗಳನ್ನು ಉಂಡು ಜೀರ್ಣಿಸಿಕೊಳ್ಳುವುದಾಗಿ ಕೇಳಿದನು. ಅರ್ಜುನ ಒಪ್ಪಲು ಸಂತುಷ್ಟನಾದ ಅಗ್ನಿ, ಅರ್ಜುನನಿಗೆ ದಿವ್ಯರಥವನ್ನೂ, ಗಾಂಡೀವವನ್ನೂ ಉಡುಗೊರೆಯಾಗಿ ನೀಡಿದನು. ಅರ್ಜುನನಿಗೆ ಕೃಷ್ಣನು ಬೆಂಬಲವಾಗಲು ಖಾಂಡವವನವನ್ನು ಸುಡಲಾರಂಭಿಸಿದ. ಖಾಂಡವವನವು ಇಂದ್ರನಿಗೆ ಸೇರಿದ್ದಾಗಿದ್ದು, ಅದನ್ನು ರಕ್ಷಿಸಲು ಕಾವಲುಗಾರರು ಮುಂದೆ ಬಂದು ಅರ್ಜುನನಿಂದ ಮಣ್ಣುಮುಕ್ಕಿದರು. ವಿಷಯವನ್ನರಿತ ಇಂದ್ರನು ಕೋಪಾವಿಷ್ಠನಾಗಿ ವರುಣಾದಿಗಳನ್ನು ಕಳುಹಿಸಿದನು. ಅವರೂ ಅಸಹಾಯಕರಾಗಿ ಹಿಂದಿರುಗಿ ಬಂದಾಗ ತಾನೇ ಸ್ವತಃ ಯುದ್ಧಕ್ಕೆ ಬಂದನು. ಕಡೆಗೆ ತನ್ನ ಮಗನಾದ ಅರ್ಜುನನೇ ಶ್ರೀಕೃಷ್ಣನ ಸಹಾಯದಿಂದ ಈ ಕೆಲಸ ಮಾಡುತ್ತಿರುವನೆಂದು ಅರಿತು ಅರ್ಜುನನನ್ನು ಹರಸಿ ಹೊರಟುಹೋದನು. ಅಗ್ನಿಯು ಖಾಂಡವವನವನ್ನೆಲ್ಲ ದಹಿಸಿ ಸಂತೃಪ್ತನಾದನು.
—–

ಅರ್ಜುನ ಅವನನು ಕೊಲ್ಲದೆ ಬಿಟ್ಟನು ಕರುಣೆಯ ತೋರಿಸಿ ಅವನಲ್ಲಿ
ಕೂಡಲೆ ನಾಗರ ಒಡೆಯನು ಧುಮುಕುತ ಈಜಿದ ಯಮುನೆಯ ನೀರಿನಲಿ!
ಖಾಂಡವವನವದು ಉರಿಯುವ ಸಮಯದಿ ‘ಮಯ’ನೆಂಬುವ ಹೆಸರಿನ ಶಿಲ್ಪಿ
ಕಾಡಿನ ಮಾರ್ಗದಿ ನಡೆಯುತಲಿದ್ದನು ಭವನ ನಿರ್ಮಿಸುವ ಮಯಶಿಲ್ಪಿ
‘ಅಯ್ಯಯ್ಯೋ! ಕಾಪಾಡಿರಿ!’ ಎನ್ನುತ ಬೊಬ್ಬೆಯ ಹಾಕುತ ಕೂಗಿದನು
ಕೃಷ್ಣನು ಅವನನು ಬೆಂಕಿಯೊಳಿಂದಲಿ ರಕ್ಷಿಸುತ್ತ ಕಾಪಾಡಿದನು
ಶಿಲ್ಪಿಯು ಕೇಳಿದ ಕೃಷ್ಣಾರ್ಜುನರನು, ಏನನು ಮಾಡಲಿ ನಿಮಗೆಂದು
ಕೃಷ್ಣನು ಹೇಳಿದ ಸುಂದರ ನಗರವ ನಿರ್ಮಿಸಿಕೊಡು ನೀ ನಮಗೆಂದು!
ದ್ವಾರಕೆಯಿಂದಲಿ ಬಂದರು ಹಲವರು ಕುಶಲತೆ ಹೊಂದಿದ ಶಿಲ್ಪಿಗಳು
ನಾಡಿನ ನಾನಾ ಭಾಗಗಳಿಂದಲಿ ಬಂದವು ಹಲಬಗೆ ವಸ್ತುಗಳು
ಮುಂದಿನ ಒಂದೇ ವರುಷದ ಅವಧಿಗೆ ಮೂಡಿತು ಸುರಸುಂದರ ನಗರ
ಖಾಂಡವಪ್ರಸ್ಥದಿ ಪಾಂಡುಪುತ್ರರಿಗೆ ಕಟ್ಟಿದ ನಗರವು ಸಿಂಗಾರ
ಹಸ್ತಿನಪುರವನು ಮೀರಿಸುವಂತಹ ಆ ನಗರವು ಸರ್ವೋತ್ಕೃಷ್ಟ
ಇಂತಹ ಸುಂದರ ನಗರವು ಜಗದಲ್ಲಿ ಹೆಸರಾಯಿತು ಇಂದ್ರಪ್ರಸ್ಥ!

ಇಂದ್ರನ ನಗರವ ಮೀರಿಸುವಂತಹ ಸುಂದರ ನಗರವು ಮೂಡಿತ್ತು
ಇಂದ್ರಪ್ರಸ್ಥದ ಸುಂದರ ಮಂದಿರವೆಲ್ಲವೂ ಮೋಡಿ ಮಾಡಿತ್ತು
ಇಂದ್ರಜಾಲ ಮೆರೆದಂತಹ ತೆರದಲಿ ಚೆಂದದ ನಗರದ ನಿರ್ಮಾಣ
ಇಂದ್ರಜಾಲವನು ತೋರಿದ ಕೃಷ್ಣನ ಸಾಮರ್ಥ್ಯಕೆ ಎಲ್ಲರ ನಮನ

ಖಾಂಡವವನವಿದ್ದಂತಹ ಜಾಗವು ಸಮಗೊಂಡಿತು ಕೆಲದಿನದಲ್ಲಿ
ಯಮುನೆಯ ನೀರಿನ ಕಾಲುವೆ ಹರಿದವು ಅಲ್ಲಿನ ಬಯಲಿನ ಹೊಲದಲ್ಲಿ
ಹುತ್ತಗಳೆಲ್ಲವು ಪತ್ತೆಯೇ ಇಲ್ಲದೆ ನೆಲಸಮಗೊಂಡವು ಇರದೆ ತಡೆ
ಎತ್ತರ ಮರಗಳು ಇಲ್ಲದಿದ್ದರೂ ಉತ್ತಮ ಭೂಮಿಯು ಎಲ್ಲ ಕಡೆ
ಎತ್ತನೋಡಿದರೂ ಫಲವತ್ತಾಗಿಹ ನೆಲವೇ ಕಂಡಿತು ಬಯಲಿನಲಿ
ಸತ್ತ ಗಿಡಮರದ ಪ್ರಾಣಿಪಕ್ಷಿಗಳ ಬೂದಿಯು ಗೊಬ್ಬರವಾಗುತಲಿ
ಕಾಡು ಅಳಿದರೂ ನಾಡಿಗಾಗಿಯೇ ಎಂಬ ತತ್ವ ಬಲಗೊಂಡಿತ್ತು
ಕಾಡನ್ನೇ ಬಲಿಯಾಗಿಸಿ ನಾಡಿಗೆ ಬುನಾದಿಯಾಗಿ ನೆಲೆಗೊಂಡಿತ್ತು.

ಕೆಲವೇ ದಿನದಲಿ ಯೋಜನಗಟ್ಟಲೆ ನೆಲವಾಯಿತು ಬೆಳೆ ಬೆಳೆಯಿಸಲು
ದವಸ ಧಾನ್ಯಗಳು ಹಣ್ಣು ತರಕಾರಿ ಬೆಳೆಸಿ ಜನತೆಗೆ ಒದಗಿಸಲು
ಕಾಡಿನ ಗುರುತೇ ಇಲ್ಲದ ತೆರದಲಿ ನಾಡು ಮೂಡಿತ್ತು ನಯವಾಗಿ
ಕಾಡಿನ ಮರಗಳ ಕಾಡಿನ ಜೀವಿಯ ಗೋರಿಯ ತೆರದಲಿ ಸೊಗಸಾಗಿ!
ದೂರದ ನಾಡಿನ ವಿವಿಧೆಡೆಯಿಂದಲಿ ಬಂದರು ರೈತರು ತಾವಲ್ಲಿ
ಹಸುರಿನ ತೋಟವು ಹೊಲಗದ್ದೆಗಳೂ ನಳನಳಿಸುತ್ತಲಿ ಮೈಚೆಲ್ಲಿ
ಘಮಘಮವೆನ್ನುವ ಮಲ್ಲಿಗೆ ಬನಗಳು ಎಲ್ಲೆಡೆಯಲ್ಲಿ ತಲೆಯೆತ್ತಿದವು
ಝೇಂಕಾರದ ಧ್ವನಿಗೈಯುವ ದುಂಬಿಯು ಹೂವಿನ ಬನಗಳ ಮುತ್ತಿದವು!
ವಿಧವಿಧ ಬೆಳೆಗಳು ಬೆಳೆದವು ಹೊಲದಲಿ ಕಂಗೊಳಿಸಿದ್ದಿತು ಸೊಗಸಾಗಿ
ಹಾಲನು ನೀಡುವ ಹಸುಗಳಿಗಾಗಿಯೆ ಹುಲ್ಲೂ ಬೆಳೆಯಿತು ಹುಲುಸಾಗಿ
ಗೋಸಂಪತ್ತೂ ನಾಡಿನ ಆಸ್ತಿಯು ಎಂಬುದನ್ನು ಮನಗಂಡಿತ್ತು
ಗೋಪಾಲಕರೂ ನೆಲೆಯನು ಕಂಡರು ಹೆಚ್ಚಿತು ನಾಡಿನ ಸಂಪತ್ತು!
ಕೈ ಕೆಸರಾದರೆ ಬಾಯಿ ಮೊಸರೆಂಬ ಮಾತು ಇಲ್ಲಿ ನಿಜವಾಗಿತ್ತು
ಕಾಯಕವೇ ಕೈಲಾಸವು ಎನ್ನುತ ದುಡಿದರು ಫಲವೂ ದೊರೆತಿತ್ತು
ಚಿಂತೆಯೆನ್ನುವುದು ದೂರಕೆ ಓಡಿತು ಕೋರಿಕೆಯೂ ಕೈಗೂಡಿತ್ತು
ಸಂತಸ ಸಂಭ್ರಮವೆಂಬುದು ನಾಡಲಿ ಎಲ್ಲೆಡೆಯೂ ಮನೆಮಾಡಿತ್ತು
ಕುಂತಿಯಪತ್ರರದೆಂಥ ಪರಿಶ್ರಮವೆಂದಿತು ಲೋಕವು ಬೆರಗಾಗಿ
ಸಂತಸದಿಂದಲಿ ಹಾರೈಸಿದ್ದಿತು ಕಷ್ಟಜೀವಿಗಳ ಪರವಾಗಿ!

ಕೃಷ್ಣನಂಥವನು ಸಂಗಡವಿದ್ದರೆ ಸಾಧ್ಯವಾಗದುದು ಯಾವುದಿದೆ?
ಕೃಷ್ಣಗಾರುಡಿಯ ಮೋಡಿಯ ಎದುರಲಿ ಅಸಾಧ್ಯವೆಂಬುದು ನಿಲ್ಲುವುದೆ?
ಪಾಂಡವರೈವರ ಶ್ರಮವೂ ಸೇರಿತು ಹೊಸರೂಪಕೆ ತಿರುಗಿತು ನೆಲವು
ಅಳಿದ ಅರಣ್ಯವು ನಗಣ್ಯವಾಯಿತು ದೊರಕಿತು ಅವರಿಗೆ ಪ್ರತಿಫಲವು
ಆದರೆ, ಕಾಡನು ನಾಶವ ಮಾಡಿದ ಪಾಪವು ಅವರನ್ನು ಕಾಡಿತ್ತು
ಮಾಡಿದ ತಪ್ಪಿಗೆ ಕಾಡಿನ ಬದುಕಿನ ಕೇಡಿನ ಸಂಚನು ಹೂಡಿತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಮ
Next post ವಚನ ವಿಚಾರ – ಸಂಬಂಧ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…