ಕೈ ಕೈದ ಹಿಡಿದು ಕಾದುವಾಗ
ಕೈದೊ ಕೈಯೊ ಮನವೊ
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ
ಅಂಗವೊ ಲಿಂಗವೊ ಆತ್ಮನೊ
ಕಾಲಾಂತ ಭೀಮೇಶ್ವರಲಿಂಗವನರಿದುದು
[ಕೈದ-ಆಯುಧವನ್ನು]
ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ.
ಆಯುಧ ಹಿಡಿದು ಯುದ್ಧಮಾಡುವುದುಂಟಲ್ಲ, ಆಗ ಕಾದುತ್ತಿರುವುದು ಆಯುಧವೋ, ಆಯುಧ ಹಿಡಿದ ಕೈಯೋ, ಅಥವಾ ಮನಸ್ಸೋ? ದೇಹ ಮತ್ತು ದೇವರ ಸಂಬಂಧ ಅನ್ನುವುದುಂಟಲ್ಲ, ಆ ಸಂಬಂಧ ದೇಹದ್ದೋ, ದೇಹದೊಳಗಿನ ಮತ್ತು ದೇಹದ ಮೇಲಿರುವ ಲಿಂಗದ್ದೋ ಅಥವಾ ಆತ್ಮದ್ದೋ?
ಈ ವಚನ ಇರುವ ರೀತಿಯಲ್ಲೇ ವಚನಕಾರನ ನಿಲುವೂ ಸ್ಪಷ್ಟವಾಗಿಯೇ ಇದೆ. ಆಯುಧ ತನ್ನಷ್ಟಕ್ಕೇ ಕಾದಲಾರದು, ಹಿಡಿಯುವ ಕೈ ಬೇಕು; ಮತ್ತೆ ಅದಕ್ಕಿಂತ ಮಿಗಿಲಾಗಿ ಕಾದುವ ಮನಸ್ಸು ಬೇಕು. ಹಾಗೆ ನೋಡಿದರೆ ಯುದ್ಧದಲ್ಲಿ ತೊಡಗುವುದಕ್ಕೆ ಮನಸ್ಸೇ ಮುಖ್ಯ ಕಾರಣ. ಹಾಗೆಯೇ ಅಂಗ, ಲಿಂಗ ಇವೆಲ್ಲಕ್ಕಿಂತ ಒಳಗಿನ ಆತ್ಮ, `ನಾನು’, ಅನ್ನುವುದೇ ಮುಖ್ಯ.
ನಾವು ಕಣ್ಣಿಗೆ ಕಾಣುವ ಸ್ಕೂಲವಾದದ್ದನ್ನು ಮಾತ್ರ ಗಮನಿಸಿ ಸೂಕ್ಷ್ಮವಾದದ್ದನ್ನು ಲೆಕ್ಕಿಸುವುದೇ ಇಲ್ಲ. ಕಾದುವಾಗ ಮತ್ತು ದೇವರನ್ನು ಅರಿಯುವಾಗ ಸ್ಥೂಲವಾಗಿ ಬೇರೆ ಬೇರೆಯಾಗಿ ಕಾಣುವ ಸಂಗತಿಗಳಿಗೆಲ್ಲ ಇರುವ ಬಿಡಿಸಲಾರದ ಸಂಬಂಧವೇ ಮುಖ್ಯ. ಹೀಗೆ ಸಂಬಂಧದ ಸ್ವರೂಪವನ್ನು ಅರಿಯುವುದೇ ಆಧ್ಯಾತ್ಮ ಎಂದು ಡಕ್ಕೆಯ ಬೊಮ್ಮಣ್ಣ ಹೇಳುತ್ತಿರುವಂತಿದೆ.
*****