ಹುಣ್ಣಿಮೆಯಿಂದ ಪಾಡ್ಯ
ಪಾಡ್ಯದಿಂದ ಬಿದಿಗೆ
ಅಂಶ-ಅಂಶ ಕರಗಿ
ಅಮಾವಾಸ್ಯೆ
ಇನ್ನಿಲ್ಲವಾಗಿಬಿಟ್ಟ ಚಂದ್ರ
ಬರುವುದಿಲ್ಲ ಇನ್ನು
ಇದೇ ಹದಿನೈದು ದಿನಗಳ ಹಿಂದೆ
ಈ ಆಕಾಶ
ತಾರೆಗಳ ಹೂಹಾರ ತೊಡಿಸಿ
ಚಂದ್ರನ್ನ ಸನ್ಮಾನಿಸಿತ್ತು,
ಪೂರ್ಣಚಂದ್ರನ ತುಂಬು ನಗೆ ತುಂಬಿ ಆಕಾಶ
ಸುರಿದಿತ್ತು, ಭೂಮಿಯ ತುಂಬ
ತುಂಬಿಕೊಂಡಿದ್ದೆವು ನಾವೂ ನೀವೂ
ಇನ್ನು ಇನ್ನಿಲ್ಲ ಚಂದ್ರ
ಆಕಾಶದಲ್ಲಿ ಹೊಳೆಯೋದಿಲ್ಲ
ತಾರೆಗಳ ಮೂಕ ಮೆರವಣಿಗೆಯಲ್ಲಿ
ಚಂದ್ರನ್ನ ಬೇರೆಲ್ಲೋ ಸಾಗಿಸಲಾಯ್ತು,
ಆಕಾಶ ಅಪೂರ್ಣ ಇನ್ನು
ಸೂರ್ಯನೂ ಒಬ್ಬಂಟಿ ಇನ್ನು
ಚಂದ್ರ ಹೋಗಿ ಬಿಟ್ಟ
ಇನ್ನೂ ಬೇಕು
ಎನ್ನುತ್ತಿದ್ದಾಗಲೇ ಹೋಗುವುದು ಒಳ್ಳೆಯದು
ಹೋಗಿಬಿಟ್ಟ
ಆದರೆ ಒಂದೇ ಶಂಕೆ
ಚಂದ್ರನಿಗೆ
ಆಕಾಶವಲ್ಲದೆ ಬೇರ ಎಲ್ಲಿದೆ ಜಾಗ ?
ಇದ್ದರೂ ಆ ಜಾಗ
ಚಂದ್ರನ ಅನಂತ ನಗೆಗೆ
ಖಂಡಿತಾ ಸಾಕಾಗ
ಬರುತ್ತಾನೆ
ಬರದೆ ಎಲ್ಲಿ ಹೋಗುತ್ತಾನೆ ?
ಚಂದ್ರ ಇದ್ದಲ್ಲೇ ತಾರೆಗಳು
ಇದ್ದಲ್ಲೆ ಆಕಾಶ
ಇದ್ದಲ್ಲೆ ನಮ್ಮ
ಕವಿತೆಗಳಿಗಿಷ್ಟು ಅವಕಾಶ
ನಗಲಿದ್ದಾನೆ ಹೊಸ ಶಕ್ತಿಯಿಂದ
ಹೊಗಲಿದ್ದಾನೆ ಹೊಸ ಭಾವನೆಗಳಿಂದ
ಹೊಳೆಯುತ್ತಾನೆ ಪುನಹಾ
ಬೆಳೆಯುತ್ತಾನೆ
ಅಳಬೇಡಿರೋ ಮಕ್ಕಳೆ
ನಿಸ್ತೇಜ ಪ್ರೇಮಿಗಳೆ
ಭಗ್ನ ಹೃದಯಿಗಳಾಗಿ
ಕೆರೆ ಹಾರಿ ಸಾಯಬೇಡಿರೋ ಕವಿಗಳೆ
ನಿಮಗಾಗಿ-ನಿಜವಾಗಿಯೂ
ನಿಮಗಾಗಿಯು
ಬರಲಿದ್ದಾನೆ ಚಂದ್ರ
ಚಂದ್ರ ಬರಲಿದ್ದಾನೆ
*****