ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು
ಸಂತೋಷದ ತಮಟೆ ಬಾರಿಸಲಿಲ್ಲ
ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ
ಖರ್‍ಚು ಜಾಸ್ತಿ ಎಂದು ನೊಂದರು
ರ್‍ಯಾಂಕ್ ಪಡೆದಳೆಂದು ಬೀಗಿ
ತಮಟೆ ಬಾರಿಸಲಿಲ್ಲ
ಹೆಚ್ಚು ಓದಿದವನನ್ನು ಹುಡುಕಬೇಕಲ್ಲ
ಬೆವರಿಳಿಸತೊಡಗಿದರು.
ಮಗಳ ಮದುವೆ ಎಂದೇನು
ಸಂಭ್ರಮದ ತಮಟೆ ಬಾರಿಸಲಿಲ್ಲ
ವಸ್ತ್ರ ಒಡವೆ ಹಾಕಿ ಅಕ್ಷತೆ ಉದುರಿಸಿ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ಆರತಿ ಎತ್ತಿದರು.
೨
ಮಗನನ್ನು ಕಸಿದುಕೊಂಡಳೆಂದು
ಉರಿಯ ತಮಟೆ ಬಾರಿಸಿದರಿಲ್ಲಿ
ಗಳಿಸಿದ್ದೆಲ್ಲ ಇವಳ ಬೆಡಗು ಬಿನ್ನಾಣಕ್ಕೆಂದು
ಚುಚ್ಚಿದರು ಕಣ್ಣೀರು ಹರಿಸಿದರು.
ಬಂದವಳು ಹೆಣ್ಣೆ ಹಡೆದಳೆಂದು
ವಂಶೋದ್ಧಾರಕರಿವರು ತಮಟೆ ಬಾರಿಸಿದರು
ಗಂಡುಮಗಳ ಹೆರಲಾರದ ಬಂಜೆ
ಎಂದೇ ಬಿರುದುಕೊಟ್ಟು ಬೆಂಕಿಹಚ್ಚಿದರು.
ಬೈಕು ಕಾರು ಓಡಿಸುವ ಗಂಡುಬೀರಿ
ಮನೆಯವರ ಸೇವೆಮಾಡದ ಸೊಕ್ಕಿನಾಕೆ
ಎಲ್ಲೆಲ್ಲೂ ತಮಟೆ ಬಾರಿಸುವವರು
ಅಡುಗೆಮನೆಯ ಕಟಕಟೆಯಲ್ಲಿ ನಿಲ್ಲಿಸಿ
ನೂರುಬೈಗುಳ ಹೂವೇರಿಸುತ
ಮನೆಮುರುಕಿ ಹಣೆಪಟ್ಟಿ ಕಟ್ಟುವರು
ತನ್ನದೇ ಕರುಳಿನ ಕುಡಿಯ ಹೆಮ್ಮೆಗೆ
ತಮಟೆ ಬಾರಿಸದ ಅಪ್ಪ ಅಮ್ಮ
ಕ್ಷಣಕ್ಷಣಕೂ ಅಪರಾಧಿ ಇವಳೆಂದು
ತಮಟೆ ಬಾರಿಸುವ ಮಾವ ಅತ್ತೆ
೩
ಪ್ರೀತಿವಾತ್ಸಲ್ಯದ ಹೆಣ್ಣು ಜೀವ
ಸ್ವಾರ್‍ಥಿಗಳ ಕೈಗೊಂಬೆಯಾಗಿ
ನೊಂದು ಬೆಂದು ತಳಮಳಿಸಿ
ಒಂದೊಮ್ಮೆ ಅರ್ಥೈಸಿಕೊಳ್ಳದ
ಕಿವುಡ ನಾಟಕಕಾರರನು ದಾಟಿ
ಮರುಭೂಮಿಯಾಗಿಯೋ
ಜಲಪಾತವಾಗಿಯೋ
ಹೀಗೆ ಕಣ್ಮರೆಯಾಗುವಳು
ಆದರೂ ಮತ್ತೆ ಮತ್ತೆ ತಮಟೆಗಳು
ಹಲಗೆ ಕಹಳೆಯಾಗಿ ಬಾರಿಸುತ್ತಲೇ ಇರುತ್ತವೆ
ನಿರ್‍ದಯಿಗಳ ಬಾಯಲ್ಲಿ
ಇವಳು ಹೀಗೆ ಹಾಗೆ ಎಂದಾಗಲಿ
ಹೆಣ್ಣುಜೀವ ಮುತ್ತೈದೆಸಾವು ಎಂದಾಗಲಿ….
*****