ಫಾಲ್ಗುಣದ ಮುಂಜಾವು ದಿನಗಳು
ನನ್ನ ಕಿಡಕಿಯಾಚೆ ಸ್ವರ್‍ಗ
ಸ್ಪರ್‍ಧೆಗಿಳಿಯುವಂತೆ ಧರೆಗೆ
ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ
ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ
ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ
ನೆಲತುಂಬ ಚಿತ್ತ ಚಿತ್ತಾರದ ಹಾಸುಗೆ
ಉಸಿರಿನೊಳಗೆ ಪರಿಮಳ ಮಕರಂದ ಜೇನು.
ದುಡಿದು ಹಣ್ಣಾದ ಇಳಿಗಾಲದ ಅಜ್ಜಿ
ನೂರೆಂಟು ಚಿಂತೆಗಳಲಿ ಚಿತೆಯಾಗಿ
ನಾಲ್ಕೆಳೆ ಬಿಳಿ ಕೂದಲಿನ ಬೆಳ್ಳುಳ್ಳಿ ತುರುಬ ಕಟ್ಟಿ
ಮಾಸಿದ ಸೀರೆ ಮೈಗೆ ಸುತ್ತಿ
ಹೆಜ್ಜೆಹೆಜ್ಜೆಗೂ ಬಾಗಿ
ಮತ್ತೊಮ್ಮೆ ಎದೆ ಸೆಟಿಸಿ ನಿಂತು
ಒಮ್ಮೆ ಸೋತು ಮತ್ತೊಮ್ಮೆ ನಕ್ಕು
ಮರದ ಕೆಳಗೆ ಕುಳಿತು ಮೌನ
ಮನದೊಳಗಿನ ಗೊಂದಲಗಳ ನಡುವೆ ನಿಶ್ಯಬ್ಧ
ತಾನೇ ಕೈಯಾರೆ ನಿರುಣಿಸಿ ಬೆಳೆಸಿದ
ಹಚ್ಚ ಹಸಿರಿನ ತೋಟದ
ಬಾಳೆ ಮಾವು ತೆಂಗುಗಳು ತೊನೆದಾಡಿ
ಮಾತನಾಡಲೆಳಿಸಿ, ಅರ್ಪಿಸಿಕೊಳ್ಳಲು ಹಾತೊರೆಯುವಿಕೆ
ಮಕ್ಕಳು ಮೊಮ್ಮಕ್ಕಳ ಕಲರವದ
ಹಣ್ಣುಗಳು ಉಡಿತುಂಬಿ
ಬಣ್ಣ ಬಣ್ಣದ ಹೂಮಳೆ
ಅವಳ ಕೊರಳಿಗೆ ಪದಕವಾಗಿ
ತುರುಬಿಗೆ ಮಾಲೆಯಾಗಿ
ನೆರಿಗೆ ಕೆನ್ನೆಗೆ ಪರಾಗಮೆತ್ತಿ
ಸೀರೆಗೆ ಹೂಬಳ್ಳಿಯ ಬಣ್ಣ ತುಂಬಿ,
ಬಿರುದು ಸಮ್ಮಾನಗಳ ಹಂಗಿಲ್ಲದೆ
ನಿಸರ್ಗಕೊಟ್ಟ ಸಂತಸಕೆ
ಹೊಂಬಣ್ಣದ ಸೂರ್ಯನಿಗೆ ನಮಸ್ಕರಿಸಿ
ಮೆಲ್ಲನೆ ಹೂ ಹಾಸಿನ ಮೇಲೆ ಹೆಜ್ಜೆ ಹಾಕಿದಳು
ಹೂವು ಹುಡಿ ಮುತ್ತಿದ ಅಜ್ಜಿ
ಆಗಿದ್ದಳು ಬೆಡಗು ಬಿಂಕ ಬಿನ್ನಾಣದ
ಫಾಲ್ಗುಣಿ.
*****