ಉತ್ಸಾಹಭಂಗ
ರಂಗಣ್ಣ ತಿಮ್ಮರಾಯಪ್ಪನಿಗೆ ಕಾಗದವನ್ನು ಬರೆದು ಎಲ್ಲವನ್ನೂ ವಿವರಿಸಿದನು; ತನಗೆ ಹಾಳು ಇನ್ಸ್‌ಪೆಕ್ಟರ್ ಗಿರಿ ಸಾಕಾಯಿತೆಂದು ತಿಳಿಸಿದನು. ಆಮೇಲೆ ಆ ಹೊಸ ಸಾಹೇಬರನ್ನು ಕಂಡು ಮಾತನಾಡಿಕೊಂಡು ಬರಬೇಕೆಂದೂ ಅವರ ಸಹಾಯ ಮತ್ತು ಸಹಕಾರಗಳಿಂದ ಮುಂದಿನ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕೆಂದೂ ನಿಶ್ಚಿಸಿದನು. ಹೊಸದಾಗಿ ಬಂದವರು ತನಗೆ ಚೆನ್ನಾಗಿ ತಿಳಿದವರು; ತನ್ನಲ್ಲಿ ವಿಶ್ವಾಸ ಮತ್ತು ಗೌರವಗಳನ್ನು ಇಟ್ಟಿರತಕ್ಕವರು ಆದ್ದರಿಂದ ಅವರಿಗೆ ಎಲ್ಲವನ್ನೂ ತಿಳಿಸುವುದು ಒಳ್ಳೆಯದೆಂದು ಆಲೋಚನೆಮಾಡಿ ಪ್ರಯಾಣಕ್ಕೆ ಸಿದ್ದನಾಗುತ್ತಿದ್ದಾಗ ಜನಾರ್ದನಪುರದ ಪ್ರೈಮರಿ ಸ್ಕೂಲು ಹೆಡ್ ಮಾಸ್ಟರು ಬಂದು ಕೈ ಮುಗಿದನು. ಆ ಮನುಷ್ಯನ ಮುಖ ದುಗುಡದಿಂದ ತುಂಬಿತ್ತು. ಆತನ ಕೈಯಲ್ಲಿ ಒಂದು ಉದ್ದವಾದ ಲಕೊಟೆ ಇತ್ತು.
‘ಏನು ಹೆಡ್‌ಮೇಷ್ಟ್ರ್‍ಏ? ಏನು ಸಮಾಚಾರ? ಈಗ ನಾನು ಪ್ರಯಾಣದ ತರಾತುರಿಯಲ್ಲಿದ್ದೆನಲ್ಲ! ಹೆಚ್ಚು ಕಾಲ ಮಾತುಕತೆಗಳಲ್ಲಿ ಕೂಡಲಾರೆ’ ಎಂದು ರಂಗಣ್ಣ ಹೇಳಿದನು.
‘ಸ್ವಾಮಿಯವರಿಗೆ ಯಾವಾಗಲೂ ಪ್ರಯಾಣ, ಯಾವಾಗಲೂ ಸರ್ಕಿಟು, ಯಾವಾಗಲೂ ಕೆಲಸದ ತರಾತುರಿ ಇದ್ದೇ ಇರುತ್ತೆ! ಬಡ ತಾಪೇದಾರರ ಅಹವಾಲನ್ನು ಸಹ ಸ್ವಲ್ಪ ಕೇಳಿ ಸ್ವಾಮಿ!’
‘ನಿಮಗೇನು ತೊಂದರೆ ಬಂದಿದೆ? ನಿಮ್ಮ ಅಹವಾಲು ಎಂಥದು ಹೆಡ್ ಮೇಷ್ಟ್ರ್‍ಏ?’
‘ಈ ಹೆಡ್‌ಮೇಷ್ಟ್ರ್‍ಅ ಪಟ್ಟ ಸಾಕು ಸ್ವಾಮಿ! ನನ್ನನ್ನು ಇಲ್ಲಿಂದ ವರ್ಗ ಮಾಡಿಬಿಟ್ಟರೆ ಬದುಕಿಕೊಳ್ಳುತ್ತೇನೆ. ಇಲ್ಲದಿದ್ದರೆ ಇನ್ನು ಕೆಲವು ದಿನಗಳೊಳಗಾಗಿ ನನ್ನ ಸಾವು ಖಂಡಿತ! ಖಂಡಿತ ಸ್ವಾಮಿ!’
‘ಅದೇನು? ನೀವು ಸಾಯುವುದಕ್ಕೆ ಕಾರಣ?’
‘ಆ ಉಗ್ರಪ್ಪನ ಕಾಟವನ್ನು ನಾನು ಸಹಿಸಲಾರೆ ಸ್ವಾಮಿ! ಈಚೆ ಗಂತೂ ಮಾನ ಮರ್ಯಾದೆ ಬಿಟ್ಟು ಎಲ್ಲರೆದುರಿಗೂ ಹುಚ್ಚು ಹುಚ್ಚಾಗಿ ಬಯ್ಯುತ್ತಾನೆ. ಪಾಠಶಾಲೆಯಲ್ಲಿ ಪಾಠಗಳನ್ನು ಮಾಡುವುದೇ ಇಲ್ಲ. ಹಾಯಾಗಿ ಮೇಜಿನ ಮೇಲೆ ಕಾಲು ನೀಟಿಕೊಂಡು ಕುರ್‍ಚಿಗೆ ಒರಗಿಕೊಂಡು ನಿದ್ದೆ ಮಾಡುತ್ತಾನೆ. ಸ್ವಾಮಿಯವರಿಗೆ ಹಿಂದೆಯೇ ಅರಿಕೆ ಮಾಡಿ ಕೊಂಡಿದ್ದೆ. ಚಿತ್ತಕ್ಕೆ ಬರಲಿಲ್ಲ.’
ರಂಗಣ್ಣನಿಗೆ ಮೇಷ್ಟು ಉಗ್ರಪ್ಪನ ವಿಚಾರ ಚೆನ್ನಾಗಿ ತಿಳಿದಿತ್ತು, ಕರಿಯಪ್ಪ ಮತ್ತು ಕಲ್ಲೇಗೌಡರ ಏಜೆಂಟು ಅವನು. ಹಿಂದೆ ಎರಡು ಬಾರಿ ಜನಾರ್ದನಪುರದ ರೇಂಜಿನಿಂದ ವರ್ಗವಾಗಿ ಪುನಃ ಆ ವರ್ಗದ ಆರ್ಡರು ರದ್ದಾಗಿ ಜನಾರ್ದನಪುರದಲ್ಲಿ ಪಾಳೆಯಗಾರನಾಗಿ ಮೆರೆಯುತ್ತಿರುವ ಸಿಪಾಯಿ ಮೇಷ್ಟ್ರು! ಈಗ ಆವನು ಪುಂಡಾಟಕ್ಕೆ ಪ್ರಾರಂಭಮಾಡಿದ್ದಾನೆಂದು ತಿಳಿಯುತ್ತಲೂ ತನಗೆ ಎಲ್ಲ ಕಡೆಗಳಿಂದಲೂ ತೊಂದರೆ ಕೊಡುವುದೂ ಅಪಮಾನಪಡಿಸುವುದೂ ಆ ಮುಖಂಡರ ಹಂಚಿಕೆಯೆಂದು ರಂಗಣ್ಣನಿಗೆ ಬೋಧೆಯಾಯಿತು. ರಂಗಣ್ಣ ಮೌನವಾಗಿದ್ದುದನ್ನು ನೋಡಿ, ಹೆಡ್ ಮೆಷ್ಟ್ರು ತಾನೇ ಮಾತನ್ನು ಮುಂದುವರಿಸಿದನು.
‘ಮೊನ್ನೆ ತರಗತಿಯಿಂದ ಕೆಲವರು ಹುಡುಗರನ್ನೆಲ್ಲ ಹೊರಕ್ಕೆ ಕಳಿಸಿಬಿಟ್ಟು, ನಿನಗೆ ನಾನು ಪಾಠ ಮಾಡುವುದಿಲ್ಲ! ಹೋಗಿ ನಿಮ್ಮ ಹೆಡ್ ಮಾಸ್ಟರ ಕೊಟಡಿಗೆ! ಅಲ್ಲೇ ಕುಳಿತುಕೊಂಡು ಪಾಠ ಹೇಳಿಸಿ ಕೊಳ್ಳಿ!-ಎಂದು ಗಟ್ಟಿಯಾಗಿ ಕೂಗಾಡಿದ ಸ್ವಾಮಿ ಆತ. ನಾನು ಅಲ್ಲಿಗೆ ಹೋಗಿ ಉಗ್ರಪ್ಪನವರೇ ! ಹಾಗೆಲ್ಲ ಹುಡುಗರನ್ನು ಗದರಿಸಿ ಹೊರಕ್ಕೆ ಕಳಿಸಬೇಡಿ-ಎಂದು ವಿನಯದಿಂದ ಹೇಳಿದೆ. ನಾನು ಮುವ್ವತ್ತು ಜನಕ್ಕಿಂತ ಹೆಚ್ಚಿಗೆ ಹುಡುಗರಿಗೆ ಪಾಠ ಹೇಳೋದಿಲ್ಲ – ಎಂದು ಆತ ಹಟ ಮಾಡಿದ. ನಾನೇನು ಮಾಡಲಿ ಸ್ವಾಮಿ? ಇತರ ಮೇಷ್ಟ್ರುಗಳನ್ನು ಎತ್ತಿ ಕಟ್ಟಿ ಪಾಠಶಾಲೆಯಲ್ಲಿ ಕೆಲಸ ನಡೆಯದಂತೆ ಮಾಡಿದ್ದಾನೆ.’
‘ನೀವು ಆತನಿಂದ ಸಮಜಾಯಿಷಿ ಕೇಳಿ, ಬರೆವಣಿಗೆಯಲ್ಲಿ ಏನೇನು ಹೇಳುತ್ತಾನೋ ನೋಡೋಣ’
‘ಮೆಮೋ ಮಾಡಿ, ಜವಾನನ ಕೈಯಲ್ಲಿ ಕಳಿಸಿಕೊಟ್ಟೆ. ಆ ಮೆಮೋವಿಗೆ ರುಜು ಮಾಡಲಿಲ್ಲ. ಜವಾನನಿಗೆ ಎರಡು ಏಟು ಬಿಗಿದು ಕಳಿಸಿಬಿಟ್ಟ ಸ್ವಾಮಿ ! ಆ ಜವಾನ ಅಳುತ್ತಾ ಬಂದು ಮೆಮೋ ಪುಸ್ತಕವನ್ನು ಮೇಜಿನ ಮೇಲಿಟ್ಟು-ಸ್ವಾಮಿ! ನನಗೆ ನಾಲ್ಕು ದಿನ ರಜಾ ಕೊಡಿ, ನಾನು ಸ್ಕೂಲಿಗೆ ಬರೋಕಾಗೋದಿಲ್ಲ ಎಂದು ಹೇಳಿದನು. ನಾನೇ ಎದ್ದು ಹೋಗಿ- ಹಾಗೆಲ್ಲ ಅವಿಧೇಯತೆಯಿಂದ ನಡೆದುಕೊಳ್ಳಬಾರದು ಉಗ್ರಪ್ಪ ನವರೇ! ಜವಾನನಿಗೆ ಹೊಡೆದದ್ದು ತಪ್ಪು ಎಂದು ಹೇಳಿದೆ. ನನ್ನನ್ನು ದುರುಗುಟ್ಟಿಕೊಂಡು ಆತ ನೋಡುತ್ತ-ನನಗೆ ಮೆಮೋ ಕಳಿಸೋ ಹೆಡ್ಮೇಷ್ಟ್ರು ಇದುವರೆಗೂ ಹುಟ್ಟಿಕೊಂಡಿರಲಿಲ್ಲ. ಇನ್ಸ್‌ಪೆಕ್ಟರ ಬೆಂಬಲ ಇದೆ ಎಂದು ನನಗೆ ಮೆಮೋ ಮಾಡಿದ್ದೀರಿ. ಮಕ್ಕಳೊಂದಿಗರು ನೀವು! ಹುಷಾರಾಗಿರಿ!- ಎಂದು ಎಲ್ಲರೆದುರಿಗೂ ಹೇಳಿದ ಸ್ವಾಮಿ! ನನಗೆ ಕೈ ಕಾಲು ಅದುರಿಹೋಯಿತು. ಆ ಮನುಷ್ಯನನ್ನು ನೋಡಿದರೇನೇ ಸಾಕು, ಎಂಥವರಿಗಾದರೂ ಭಯವಾಗುತ್ತೆ! ಅಂಥ ಭಾರಿ ಆಳು! ಆತನ ಕೈ ಯಲ್ಲಿ ದೊಣ್ಣೆ! ಅದೇನು ಒನಕೆಯೋ ಏನೋ ಎನ್ನುವಹಾಗಿದೆ! ಮಹಾ ಪುಂಡ ಮನುಷ್ಯ! ರೇಗಿ ಒಂದು ಬಾರಿ ಅಪ್ಪಳಿಸಿಬಿಟ್ಟರೆ ನನ್ನ ಆಯುಸ್ಸು ಮಗಿದು ಹೋಗುತ್ತೆ!’
‘ಈಗ ನಡೆದಿರುವ ವಿಚಾರವನ್ನೆಲ್ಲ ರಿಪೋರ್‍ಟು ಮಾಡಿ ; ಇತರ ಅಸಿಸ್ಟೆಂಟರ ಹೇಳಿಕೆಗಳನ್ನು ತೆಗೆದು ಕಳಿಸಿಕೊಡಿ ; ಜವಾನನ ಹೇಳಿಕೆ ಯನ್ನು ತೆಗೆದು ಕಳಿಸಿ, ಆಲೋಚನೆ ಮಾಡುತ್ತೇನೆ. ಈಗ ನಾನು ಸಾಹೇಬರನ್ನು ನೋಡಿಕೊಂಡು ಬರಬೇಕು.’
‘ಅಪ್ಪಣೆ ಸ್ವಾಮಿ ! ನನ್ನ ರಿಪೋರ್ಟನ್ನೂ, ಕೆಲವರು ಅಸಿಸ್ಟೆಂಟರ ಹೇಳಿಕೆಯನ್ನೂ, ಜವಾನನ ಹೇಳಿಕೆಯನ್ನೂ ಎಲ್ಲವನ್ನೂ ಈ ಲಕ್ಕೋಟಿ ಯಲ್ಲಿಟ್ಟಿದ್ದೇನೆ ಸ್ವಾಮಿ ! ಪರಾಂಬರಿಸಬೇಕು. ಜಾಗ್ರತೆ ತಾವು ಇದನ್ನು ಫೈಸಲ್ಮಾಡಬೇಕು. ಒಂದು ಕ್ಷಣ ಎನ್ನುವುದು ನನಗೆ ಒಂದು ಯುಗದಂತೆ ಆಗಿದೆ!’
‘ನಾನು ಹೆಡ್ ಕ್ವಾರ್ಟರಿಗೆ ಹಿಂದಿರುಗಿ ಬಂದಮೇಲೆ ಈ ವಿಚಾರಕ್ಕೆ ಗಮನ ಕೊಡುತ್ತೇನೆ. ನೀವು ಈ ಮಧ್ಯೆ ಏನೇನು ನಡೆಯುತ್ತದೆಯೋ ಎಲ್ಲಕ್ಕೂ ಸರಿಯಾಗಿ ರಿಕಾರ್ಡಿಡಿ, ಆತನಿಗೆ ಒಳ್ಳೆಯ ಮಾತಿನಲ್ಲಿ ಬುದ್ದಿ ಯನ್ನೂ ಹೇಳಿ, ಬೇಕಾಗಿದ್ದರೆ ನನ್ನ ಹತ್ತಿರ ಕಳಿಸಿಕೊಡಿ. ನಾನೂ ಬುದ್ದಿ ಹೇಳುತ್ತೇನೆ. ನಮ್ಮ ಮಾತುಗಳನ್ನು ಕೇಳದೆ ಪುಂಡಾಟ ಮಾಡಿದರೆ ಗೊತ್ತೇ ಇದೆ: ದಂಡಂ ದಶಗುಣಂ ಭವೇತ್ ; ದಂಡೇನ ಗೌರ್ಗಾರ್ದಭಃ’
‘ಅಪ್ಪಣೆ ಸ್ವಾಮಿ! ನಾನು ಮಕ್ಕಳೊಂದಿಗ, ನನಗೆ ಜಮೀನು ಮನೆ ಮೊದಲಾದ ಆಸ್ತಿಯೇನೂ ಇಲ್ಲ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಪಾಡು ನಾಯಿಪಾಡಾಗುತ್ತದೆ. ಬರುವ ಅಲ್ಪ ಇನ್ಸೂರೆನ್ಸ್ ಹಣದಲ್ಲಿ ಏನನ್ನು ತಾನೇ ಮಾಡಲಾಗುತ್ತದೆ? ಮನೆ ಬಿಟ್ಟು ಒಂಟಿಯಾಗಿ ಓಡಾಡುವುದಕ್ಕೆ ಹೆದರಿಕೆಯಾಗುತ್ತೆ ಸ್ವಾಮಿ! ಸಾಯಂಕಾಲವಂತೂ ಕತ್ತಲಾಗುವುದರೊಳಗಾಗಿ ಮನೆ ಸೇರಿಕೊಳ್ಳುತ್ತೇನೆ. ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ! ಕನಸಿನಲ್ಲಿಯೂ ನೆನಸಿನಲ್ಲಿಯೂ ಆ ಉಗ್ರಪ್ರನ ಆಕಾರವೇ! ಅವನ ಕೈಯ ದೊಣ್ಣೆಯೇ!
‘ಒಳ್ಳೆಯದು ಹೆಡ್ ಮೇಷ್ಟೇ! ಏನು ಮಾಡುವುದು? ದುಷ್ಟರ ಸಹವಾಸ! ಆತ ಧರಿಸುವ ಖಾದಿ ನೋಡಿದರೆ ಗಾಂಧಿಯವರ ಶಿಷ್ಯ! ಆತನ ದುರ್ವಿದ್ಯೆ ನೋಡಿದರೆ ಸೈತಾನಿನ ಶಿಷ್ಯ!’
ಹೆಡ್ಮೇಷ್ಟ್ರು ಕೈ ಮುಗಿದು ಹೊರಟು ಹೋದನು. ಶಂಕರಪ್ಪ ಬಂದು, ‘ಬಹಳ ಜರೂರು ಕಾಗದಗಳು! ಸ್ವಾಮಿಯವರ ರುಜುವಾಗಬೇಕು’ ಎಂದು ಹೇಳಿ ಕೆಲವು ಕಾಗದಗಳನ್ನು ಮೇಜಿನ ಮೇಲಿಟ್ಟನು. ರಂಗಣ್ಣ ನಿಂತಹಾಗೆಯೇ ಅವುಗಳಿಗೆ ರುಜುಗಳನ್ನು ಕಿರಕಿ ಕೊಟಡಿ ಯಿಂದ ಹೊರಟನು. ಆ ಹೊತ್ತಿಗೆ ರಂಗನಾಥಪುರ ಕೇಂದ್ರದ ಉಪಾಧ್ಯಾಯರ ಸಂಘದ ಕಾರ್ಯದರ್ಶಿ ತಿಮ್ಮಣ್ಣ ಭಟ್ಟ ಬಂದು ಕೈ ಮುಗಿದು ಎರಡು ನಿಂಬೇಹಣ್ಣುಗಳನ್ನು ರಂಗಣ್ಣನಿಗೆ ಕಾಣಿಕೆ ಕೊಟ್ಟನು.
‘ಸ್ವಾಮಿಯವರ ಸವಾರಿ ನಾಳಿದ್ದು ರಂಗನಾಥಪುರಕ್ಕೆ ಪ್ರೋಗ್ರಾಂ ಇದೆ. ಸಂಘದ ಸಭೆ ಏರ್ಪಾಟಾಗಿದೆ. ಸ್ವಾಮಿಯವರಿಗೆ ಜ್ಞಾಪಿಸಿ ಹೋಗೋಣವೆಂದು ಬಂದಿದ್ದೇನೆ.’
‘ಆಗಲಿ ಭಟ್ಟರೇ! ಬರುತ್ತೇವೆ. ಆದರೆ ಈ ಬಾರಿ ಊಟದ ಏರ್ಪಾಟು ಇಟ್ಟು ಕೊಳ್ಳಬೇಡಿ. ಸಭೆಯನ್ನು ಮಧ್ಯಾಹ್ನ ಹನ್ನೆರಡು ಗಂಟೆಗೆ ಸೇರಿಸೋಣ. ಉಪಾಧ್ಯಾಯರೆಲ್ಲ ಊಟಗಳನ್ನು ಮಾಡಿಕೊಂಡೇ ಬರಲಿ. ಸಾಯಂಕಾಲ ಐದು ಗಂಟೆಗೆ ಮುಕ್ತಾಯ ಮಾಡಿದರೆ ಅವರವರ ಊರುಗಳನ್ನು ಕತ್ತಲೆಯಾಗುವುದರೊಳಗೆ ಸೇರಿಕೊಳ್ಳುತ್ತಾರೆ’
‘ಗಂಗೇಗೌಡರು ಎಲ್ಲ ಏರ್‍ಪಾಟುಗಳನ್ನೂ ಮಾಡಿಬಿಟ್ಟಿದ್ದಾರೆ
ಸ್ವಾಮಿ!’
‘ಮಾಡಿದ್ದರೇನು? ಅವರಿಗೆ ಈ ಕೂಡಲೆ ತಿಳಿಸಿಬಿಡಿ. ಈ ಊಟದ ವ್ಯವಸ್ಥೆಗಳು ಬರಬರುತಾ ರಗಳೆಗೆ ಹಿಡಿದುಕೊಂಡಿವೆ, ತುಂಟರು ಅರ್ಜಿಗಳನ್ನು ಬರೆಯುವುದಕ್ಕೆ ಅವಕಾಶವಾಗಿದೆ. ಇನ್ನು ಮುಂದೆ ಊಟದ ಏರ್ಪಾಡು ರದ್ದು!’
‘ಸ್ವಾಮಿಯವರಿಗೆ ಬಹಳ ಬೇಸರಿಕೆ ಆದ ಹಾಗೆ ಕಾಣುತ್ತೆ. ನಮ್ಮ ಮೇಷ್ಟರುಗಳಲ್ಲಿ ತಮ್ಮ ಮೇಲೆ ಅರ್ಜಿ ಬರೆಯುವವರು ಯಾರೂ ಇಲ್ಲ ಸ್ವಾಮಿ! ನಾನು ಬಲ್ಲೆ. ಗ್ರಾಮಸ್ಥರು ಎಷ್ಟೋ ಸಂತೋಷದಿಂದ ಚಪ್ಪರ ಹಾಕಿ, ವರ್ಷಕ್ಕೊಂದು ಉತ್ಸವ ಎಂದು ಭಾವಿಸಿಕೊಂಡು ಒಪ್ಪೊತ್ತು ಆದರಾತಿಥ್ಯ ಮಾಡುತ್ತಾರೆ. ಅವರು ಯಾರೂ ಅರ್ಜಿ ಬರೆಯೋವರಲ್ಲ. ಈ ದಿನ ಗಂಗೇಗೌಡರೇ ಇಲ್ಲಿಗೆ ಬರುತ್ತಿದ್ದರು. ಸ್ವಾಮಿಯವರು ಸರ್ಕಿಟು ಹೊರಟಿರುತ್ತೀರೋ ಏನೋ, ನಾನೇ ಹೋಗಿ ನೋಡಿ ಕೊಂಡು ಬರುತ್ತೇನೆ; ಇದ್ದರೆ ಜ್ಞಾಪಿಸಿ ಬರುತ್ತೇನೆ ಎಂದು ಸಮಾಧಾನ ಹೇಳಿ ನಾನು ಹೊರಟು ಬಂದೆ.’
‘ಭಟ್ಟರೇ! ನೀವು ಹೇಳುವುದನ್ನೆಲ್ಲ ನಾನು ಆಲೋಚನೆ ಮಾಡಿದ್ದೇನೆ. ಹೊಸದಾಗಿ ನೀವೇನೂ ಹೇಳುತ್ತಿಲ್ಲ ಊಟದ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದ್ದೇನೆ. ಈಗ ನೀವು ನಿಮ್ಮ ಕೇಂದ್ರದ ಉಪಾಧ್ಯಾಯರಿಗೆಲ್ಲ ವರ್ತಮಾನ ಕೊಟ್ಟು ಬಿಡಿ. ಅಪ್ಪಿ ತಪ್ಪಿ ಯಾರಾದರೂ ಊಟವಿಲ್ಲದೆ ಬಂದರೆ ನಮ್ಮ ಬಿಡಾರದಲ್ಲಿ ಊಟ ಮಾಡುತ್ತಾರೆ.’
‘ಗ್ರಾಮಸ್ಥರಿಗೆ ನಾನು ಹೇಗೆ ಈ ವರ್ತಮಾನ ಕೊಡುವುದೋ ತಿಳಿಯದು ಸ್ವಾಮಿ! ಗಂಗೇಗೌಡರಿಗೆ ಹೇಗೆ ಮುಖ ತೋರಿಸಲಿ! ಈ ಬಾರಿಗೆ ದಯವಿಟ್ಟು ನಡೆಸಿಕೊಡಬೇಕು. ಮುಂದಿನ ಸಭೆಗೆ ತಮ್ಮ ಇಷ್ಟದಂತೆಯೇ ಊಟದ ಏರ್ಪಾಟನ್ನು ಕೈ ಬಿಡಬಹುದು.’
‘ಅದೆಲ್ಲಾ ಆಗುವುದಿಲ್ಲ! ಪಂಚಾಯತಿ ಚೇರ್ಮನ್ನರಿಗೆ ನಾನೇ ಕಾಗದ ಕೊಡುತ್ತೇನೆ. ತೆಗೆದುಕೊಂಡು ಹೋಗಿ ಅವರಿಗೆ ತಲುಪಿಸಿ. ಬಹಳ ಒತ್ತಾಯಕ್ಕೆ ಬಂದರೆ ಮಧ್ಯಾಹ್ನ ಉಪ್ಪಿಟ್ಟು ಮತ್ತು ಕಾಫಿಯ ಏರ್ಪಾಟನ್ನು ಮಾತ್ರ ಇಟ್ಟು ಕೊಳ್ಳಲಿ. ಊಟದ ಏರ್‍ಪಾಟು ಖಂಡಿತ ಬೇಡ!’
ಹೀಗೆಂದು ಹೇಳಿ ರಂಗಣ್ಣ ಶಂಕರಪ್ಪನನ್ನು ಕರೆದು ಒಂದು ಕಾಗದವನ್ನು ಚೇರ್ಮನ್ ಗಂಗೇಗೌಡರಿಗೆ ಬರೆದು ತರುವಂತೆ ತಿಳಿಸಿದನು. ಅದರಂತೆ ಕಾಗದವನ್ನು ಬರೆದು ಆತ ತಂದು ಕೊಟ್ಟನು. ರಂಗಣ್ಣ ರುಜು ಮಾಡಿ, ‘ಭಟ್ಟರೇ! ಈ ಕಾಗದವನ್ನು ತೆಗೆದುಕೊಂಡು ಹೋಗಿ ಕೊಡಿ. ನಾನು ನಾಳೆ ಸಾಯಂಕಾಲಕ್ಕೆ ರಂಗನಾಥಪುರಕ್ಕೆ ಬರುತ್ತೇನೆ ನಮ್ಮ ಬಿಡಾರ ನಾಳೆ ಮಧ್ಯಾಹ್ನಕ್ಕೋ ಸಂಜೆಗೋ ಅಲ್ಲಿಗೆ ಬರುತ್ತದೆ. ಮುಸಾ ಫರಖಾನೆಯನ್ನು ಚೊಕ್ಕಟಮಾಡಿಸಿ ಇಟ್ಟಿರಿ’ – ಎಂದು ಹೇಳಿ ಹೊರಟು ಬಿಟ್ಟನು. ತಿಮ್ಮಣ್ಣ ಭಟ್ಟನಿಗೆ ಕೈಗೆ ಬರುವ ಪ್ರಮೋಷನ್ ತಪ್ಪಿ ಹೋದರೆ ಎಷ್ಟು ವ್ಯಸನವಾಗಬಹುದೋ ಅಷ್ಟೊಂದು ವ್ಯಸನವಾಯಿತು. ತಾನು ಗಂಗೇಗೌಡರಿಗೆ ಹೇಳಿ ಗ್ರಾಮಸ್ಥರಿಗೆಲ್ಲ ತಕ್ಕ ತಿಳಿವಳಿಕೆ ಕೊಟ್ಟು, ಅವರಲ್ಲಿ ಉತ್ಸಾಹವನ್ನು ತುಂಬಿ ರಂಗನಾಥಪುರದ ಸಭೆ ಇತರ ಕೇಂದ್ರಗಳ ಸಭೆ ಗಳನ್ನು ತಲೆಮೆಟ್ಟುವಂತೆ ಏರ್ಪಾಟುಗಳನ್ನು ಮಾಡಿ ಕೊಂಡಿದ್ದೆಲ್ಲ ವ್ಯರ್ಥವಾಯಿತಲ್ಲ! ಈಗ ಗಂಗೇಗೌಡರಿಗೆ ಮತ್ತು ಗ್ರಾಮಸ್ಥರಿಗೆ ಏನು ಸಮಾಧಾನ ಹೇಳಬೇಕು?-ಎಂದು ಬಹಳವಾಗಿ ಚಿಂತಿಸಿದನು. ಒಂದು ಕಡೆ ಇನ್ಸ್‌ಪೆಕ್ಟರು ಖಂಡಿತವಾಗಿ ಹೇಳಿಬಿಟ್ಟಿದ್ದಾರೆ; ಅವರ ಮಾತಿಗೆ ವಿರೋಧ ವಾಗಿ ನಡೆಯುವುದಕ್ಕಾಗುವುದಿಲ್ಲ. ಇನ್ನೊಂದು ಕಡೆ ತಾನು ಕೈ ಕೊಂಡಿರುವ ಏರ್‍ಪಾಟುಗಳನ್ನು ಬಿಟ್ಟು ಬಿಡಲು ಮನಸ್ಸಿಲ್ಲ. ಗ್ರಾಮಸ್ಥರೆಲ್ಲ ಬಹಳ ಉತ್ಸಾಹಭರಿತರಾಗಿದ್ದಾರೆ. ಈ ಉಭಯಸಂಕಟದಲ್ಲಿ ಸಿಕ್ಕಿ ಪೇಚಾಡುತ್ತಾ ಮಲ್ಲಮೆಲ್ಲನೆ ಕಚೇರಿಯನ್ನು ಬಿಟ್ಟು ತಿಮ್ಮಣ್ಣ ಭಟ್ಟನೂ ಹೊರಟನು.
ಮಾರನೆಯ ದಿನ ರಂಗಣ್ಣ ಬೆಳಗ್ಗೆ ಊಟಮಾಡಿಕೊಂಡು ಮಧ್ಯಾಹ್ನ ಸಾಹೇಬರ ಕಚೇರಿಗೆ ಹೋದನು. ಸಾಹೇಬರು ಹಸ್ತ ಲಾಘವವನ್ನು ಕೊಟ್ಟು, ಕುಶಲ ಪ್ರಶ್ನೆ ಮಾಡಿ, ಥಟ್ಟನೆ, ‘ರಂಗಣ್ಣನವರೇ! ನಾಳೆ ನಾನು ರಂಗನಾಥಪುರದ ಸಭೆಗೆ ಬರಲು ಒಪ್ಪಿಕೊಂಡಿದ್ದೇನೆ! ನೀವೂ ನನ್ನನ್ನು ಆಹ್ವಾನಿಸುವುದಕ್ಕಾಗಿಯೇ ಬಂದಿರಬಹುದು! ನೀವು ಆಹ್ವಾನ ಕೊಟ್ಟು ಒತ್ತಾಯ ಮಾಡುವುದಕ್ಕೆ ಮೊದಲೇ ನಾನಾಗಿ ಒಪ್ಪಿಕೊಂಡಿರುವುದು ನಿಮಗೆ ಸಂತೋಷವಲ್ಲವೆ?’ ಎಂದು ನಗುತ್ತಾ ಹೇಳಿದರು. ರಂಗಣ್ಣ ತನ್ನ ಮನಸ್ಸಿನ ಸ್ಥಿತಿಯನ್ನು ಪ್ರಯತ್ನ ಪೂರ್ವಕವಾಗಿ ಮರೆಮಾಚುತ್ತ, ‘ಬಹಳ ಸಂತೋಷ ಸಾರ್! ತಮ್ಮ ಭೇಟಿ ಮೊದಲು ನನ್ನ ರೇಂಜಿಗೆ ಕೊಡೋಣವಾಗುತ್ತದೆ. ಅದರಲ್ಲಿಯೂ ಉಪಾಧ್ಯಾಯರ ಸಂಘದ ಸಭೆಗೆ ತಾವು ದಯಮಾಡಿಸುತ್ತೀರಿ. ಅಲ್ಲಿ ಏನು ಕೆಲಸ ನಡೆಯುತ್ತದೆ? ಎಂಬುದನ್ನು ತಾವು ಸಾಕ್ಷಾತ್ತಾಗಿ ನೋಡಿದಂತಾಗುತ್ತದೆ. ನಾನು ವರದಿಯ ಮೂಲಕ ತಿಳಿಸುವುದಕ್ಕಿಂತ ತಾವು ಕಣ್ಣಾರೆ ನೋಡಿದರೆ ಹೆಚ್ಚು ಸಂಗತಿಗಳು ತಿಳಿದಂತಾಗುತ್ತದೆ. ತಾವು ರಂಗನಾಥಪುರಕ್ಕೆ ಎಷ್ಟು ಗಂಟಿಗೆ ದಯಮಾಡಿಸುತ್ತೀರಿ? ಮಧ್ಯಾಹ್ನ ಹನ್ನೆರಡು ಗಂಟೆಗೆ ಸಭೆ ಸೇರುತ್ತದೆ.’
‘ಹನ್ನೆರಡು ಗಂಟೆಗೆ ಸಭೆ ಸೇರುವುದಾಗಿ ಆ ಹೆಡ್ ಮೇಷ್ಟ್ರು ಸಹ ತಿಳಿಸಿದನು. ಆದರೆ ನಾನು ಬೆಳಗ್ಗೆ ಒಂಬತ್ತು ಅಥವಾ ಹತ್ತು ಗಂಟೆಗೆಲ್ಲ ರಂಗನಾಥಪುರಕ್ಕೆ ಬರಬೇಕೆಂದು ಪಂಚಾಯತಿ ಮೆಂಬರುಗಳು ಒತ್ತಾಯ ಮಾಡಿದರು. ಬೆಳಗಿನ ಬಸ್ಸಿನಲ್ಲಿ ಅಲ್ಲಿಗೆ ಬರುತ್ತೇನೆ; ಸಾಯಂಕಾಲಕ್ಕೆ ಹಿಂದಿರುಗುತ್ತೇನೆ. ಅವರೂ ಈಗ ತಾನೆ-ಒಂದು ಗಂಟೆಯ ಹಿಂದೆ ವಾಪಸು ಹೋದರು. ಅವರನ್ನು ಮುಂದಾಗಿ ಕಳಿಸಿ ನೀವು ಸ್ವಲ್ಪ ಹಿಂದಾಗಿ ಬಂದಿರಿ.’
ರಂಗಣ್ಣ ಆ ಮಾತುಗಳನ್ನು ಕೇಳಿ ಏನು ಮಾಡಬೇಕು? ಒಳ್ಳೆಯ ಧರ್ಮ ಸೂಕ್ಷ್ಮದ ಸಮಸ್ಯೆ ಎದುರು ನಿಂತಿತು. ತಾನು ಅವರನ್ನು ಕಳಿಸಲಿಲ್ಲ, ಆ ಹೆಡ್ ಮೇಷ್ಟ್ರು ಗ್ರಾಮಸ್ಥರನ್ನು ಕಟ್ಟಿ ಕೊಂಡು ತಾನಾಗಿ ಬಂದು ಆಹ್ವಾನ ಕೊಟ್ಟಿದ್ದಾನೆಂದೂ ಊಟದ ಏರ್ಪಾಟಿನ ವಿಚಾರದಲ್ಲಿ ತನಗೂ ಮೇಷ್ಟರಿಗೂ ಚರ್ಚೆ ನಡೆಯಿತೆಂದೂ, ಊಟದ ಏರ್ಪಾಟನ್ನು ತಾನು ರದ್ದು ಮಾಡಲು ಹೇಳಿದೆನೆಂದೂ ಸಾಹೇಬರಿಗೆ ತಿಳಿಸಬೇಕೇ? ಇಲ್ಲದಿದ್ದರೆ, ತನ್ನ ಪ್ರೇರಣೆಯಿಂದ ಆ ಹೆಡ್ಮೇಷ್ಟ್ರು ಗ್ರಾಮಸ್ಥರೊಂದಿಗೆ ಬಂದು ಆಹ್ವಾನ ಕೊಟ್ಟನೆಂದು ಒಪ್ಪಿ ಕೊಳ್ಳಬೇಕೇ ? ತಿಮ್ಮಣ್ಣ ಭಟ್ಟ ತಂದಿಟ್ಟ ಪೇಚಾಟ! ಕೊನೆಗೂ ಇನ್ಸ್‌ಪೆಕ್ಟರಿಗೆ ಸೋಲು, ಮೇಷ್ಟರಿಗೆ ಗೆಲವು! ಆ ಸಮಯದಲ್ಲಿ ತಾನು ಏನನ್ನೂ ಆಡಬಾರದೆಂದು ರಂಗಣ್ಣ ನಿಷ್ಕರ್ಷೆ ಮಾಡಿಕೊಂಡನು. ಸಾಹೇಬರು ರಂಗನಾಥಪುರಕ್ಕೆ ಬರುತ್ತಾರೆ; ಅಲ್ಲಿ ಮಾತನಾಡುವುದಕ್ಕೆ ಬೇಕಾದಷ್ಟು ಅವಕಾಶವಿರುತ್ತದೆ ; ಸಂದರ್ಭ ನೋಡಿಕೊಂಡು ತಿಳಿಸಬೇಕಾದ ವಿಚಾರಗಳನ್ನು ಆಗ ತಿಳಿಸಿದರಾಯಿತು – ಎಂದು ತೀರ್ಮಾನಿಸಿಕೊಂಡು, ‘ಅಪ್ಪಣೆಯಾದರೆ ನಾನು ಹೋಗಿಬರುತ್ತೇನೆ. ನಾಳೆ ರಂಗನಾಥಪುರದಲ್ಲಿ ತಮ್ಮ ಭೇಟಿಯಾಗುತ್ತದೆಯಲ್ಲ! ಅಲ್ಲಿ ಏನೇನು ಏರ್ಪಾಟುಗಳನ್ನು ಮಾಡಿದ್ದಾರೆಯೋ ಏನೇನು ಬಿಟ್ಟದ್ದಾರೆಯೋ ಹೋಗಿ ನೋಡುತ್ತೇನೆ’ ಎಂದು ಹೇಳಿದನು.
‘ಹೆಚ್ಚು ಏರ್ಪಾಟುಗಳೇನೂ ಬೇಡ ಎಂದು ಗ್ರಾಮಸ್ಥರಿಗೆ ತಿಳಿಸಿ.’
‘ನಮ್ಮ ಮಾತುಗಳನ್ನು ಅವರು ಯಾರೂ ಕೇಳುವುದಿಲ್ಲ ಸಾರ್? ಹಿಡಿದ ಹಟವನ್ನು ಸಾಧಿಸುವುದೇ ಅವರ ಚಾಳಿ!’ ಎಂದು ಉತ್ತರ ಹೇಳಿ ರಂಗಣ್ಣ ಹೊರಟು ಬಂದನು.
ಸಾಹೇಬರು ತನ್ನ ರೇಂಜಿಗೆ ಬಂದು ಉಪಾಧ್ಯಾಯರ ಸಂಘದ ಕಾರ್ಯ ಕಲಾಪಗಳನ್ನು ನೋಡುವ ವಿಚಾರದಲ್ಲಿ ರಂಗಣ್ಣನಿಗೆ ಸಂತೋಷವಿದ್ದರೂ, ಆ ಹೆಡ್‌ಮೇಷ್ಟ್ರು ತಿಮ್ಮಣ್ಣ ಭಟ್ಟ ತನ್ನ ಅಪ್ಪಣೆಗೆ ವಿರುದ್ದವಾಗಿ ನಡೆದು, ಪಂಚಾಯತಿಯವರನ್ನು ಎತ್ತಿ ಕಟ್ಟಿ, ಕಡೆಗೂ ಊಟದ ಏರ್ಪಾಡನ್ನು ಇಟ್ಟು ಕೊಂಡನಲ್ಲ! ತನ್ನನ್ನು ಅಲಕ್ಷಿಸಿ ಸಾಹೇಬರ ಹತ್ತಿರ ಹೋದನಲ್ಲ!- ಎಂಬುದಾಗಿ ಅಸಮಾಧಾನ ಮತ್ತು ಕೋಪಗಳು ಆ ಸಂತೋಷವನ್ನು ಮುಳುಗಿಸಿಬಿಟ್ಟುವು. ಆದ್ದರಿಂದ ರಂಗನಾಥಪುರಕ್ಕೆ ಬರುತ್ತ ಆ ತಿಮ್ಮಣ್ಣ ಭಟ್ಟನಿಗೆ ತಕ್ಕ ಶಾಸ್ತಿಯನ್ನು ಯಾವ ಸಂದರ್ಭದಲ್ಲಾದರೂ ಮಾಡಬೇಕೆಂಬ ಕೀಳು ಯೋಚನೆಗೆ ಎಡೆಗೊಟ್ಟು ಚಿತ್ತ ಶಾಂತಿಯನ್ನು ಕೆಡಿಸಿಕೊಂಡನು.
*****
ಮುಂದುವರೆಯುವುದು