ಎಷ್ಟೊಂದು ಚಳಿ ಈ ಕಂಬಳಿ ಹುಳಕೆ
ಕಂಬಳಿ ಹೊದ್ದೇ ಹೊರಡುವುದು
ಮಳೆಗಾಲವಾಗಲಿ ಬೇಸಿಗೆಯಾಗಲಿ
ಕಂಬಳಿಯಿಲ್ಲದೆ ಹೋಗುವಂತಿಲ್ಲ
ಎಷ್ಟೊಂದು ಶೀತ ಈ ಬಸವನ ಹುಳಕೆ
ಮೈ ಕೈ ಶೀತ ಕೊಂಬುಗಳು ಶೀತ
ಯಾವಾಗಲೂ ನೆಗಡಿ-ಇದಕೆ
ಚಳಿಯಾಗಲಿ ಸೆಕೆಯಾಗಲಿ ನಡೆದಲ್ಲೆಲ್ಲಾ ನೆಗಡಿ
ಎಷ್ಟೊಂದು ಉರಿ ಈ ಬೆಂಕಿಯ ಹುಳಕೆ
ರಾತ್ರಿಯೆಲ್ಲಾ ಉರಿದೇ ಉರಿಯುವುದು
ಲೋಕಕೆ ತಾನೇ ಬೆಳಕು ಕೊಡುವ ಹಾಗೆ
ಮಿಣು ಮಿಣುಕಿಸಿ ಮಿನುಗುವುದು
ಎಷ್ಟೊಂದು ಮಧುರ ಈ ತುಂಬಿಗೆ
ರೆಕ್ಕೆಯಲ್ಲಿ ಸ್ವರ ತುಂಬಿ ಪಕ್ಕೆಯಲಿ ಪರಾಗ ತುಂಬಿ
ನಂದನ ವನದಲಿ ತಿರುಗಿಸಿ ಬಿಟ್ಟಂತೆ
ತಿರುಗಾಡುವುದಿದು ಉಲ್ಲಾಸ ತುಂಬಿ
ಎಷ್ಟೊಂದು ಬಣ್ಣ ಪಾತರಗಿತ್ತಿಗೆ
ಆ ಹೂವಿಗೆ ಈ ಹೂವಿಗೆ
ಕೊಟ್ಟೂ ಉಳಿಯಿತು ಇನ್ನೆಷ್ಟೊ
ಕೊಟ್ಟಂತೇ ಅದು ಮೆತ್ತಿಯುಕೊಂಡಿತು
ಆ ಹೂವಿಂದ ಅಷ್ಟು ಈ ಹೂವಿಂದ ಇಷ್ಟು
ಅಗಣಿತ ತಾರಾಗಣ ಅಂತರಿಕ್ಷಕೆ
ಎಲ್ಲ ಗಣಿಸಿದವರಿಲ್ಲ ಎಲ್ಲ ಗುಣಿಸಿದವರಿಲ್ಲ
ನೋಡುವ ಮನ ತನ್ಮಯ
*****