ಹೋಳಿ ಹಬ್ಬ ಬಂದಿದೆ
ರಕ್ತದೋಕುಳಿಯ ಚೆಲ್ಲುತ
ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ
ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ
ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ
ಅಂದು ಬಲಿಯಾದ ಬಸುರಿಯರು
ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು
ತ್ರಿಶೂಲಕ್ಕೆ ಸಿಕ್ಕಿಸಿ ಕುಣಿದ
ದೆವ್ವ ಕುಣಿತಕೆ ದಶಕ ಸಂದಿದೆ.
ಸತಿಯ ಚಿತೆಗೆ ನೂಕಿ ಸುಟ್ಟು
ಮಹಾಸತಿಯ ಗುಡಿ ಕಟ್ಟಿದ್ದಾರೆ
ಕನಸುಗಳ ಸುಟ್ಟ ಘಮಟು ವಾಸನೆ
ಗೊಬ್ಬರ ಸಾಲು ಸಸಿಗೆ ಪಾತಿ ಮಾಡಿ
ಒತ್ತೊತ್ತು ಕನಸು, ಮುಳ್ಳು ಬೇಲಿಗಳ ಕಿತ್ತು.
ಗುಜರಾತಿನ ಗಾಂಧಿಯ ಚರಕ
ನೂಲು ನೇಯುತ್ತಲೇ ಇದೆ ಇಂದಿಗೂ
ಶಾಂತಿ ಮಂತ್ರ ಜಪಿಸುತ್ತಲೇ ಇದೆ
ಪ್ರಗತಿಯ ಮಂತ್ರ ತಂತ್ರಗಳ ಹೇಳುತ್ತ
ನಿಷ್ಪಾಪಿಗಳ ಹತ್ಯೆ ಎಂತಹ ಸಾಧನೆ?
ಸತ್ಯ, ಶಾಂತಿ, ಅಹಿಂಸೆಯ ತತ್ತ್ವ
ಕೆಂಪುರಕ್ತದಲ್ಲಿ ಬಿದ್ದು ಒದ್ದೆಯಾಯ್ತು.
ಅಂಗಳದಲ್ಲಿ ಒಣಹಾಕಿ ಬೀಗಿದೆನು
ಎದುರಾಳಿಯ ಸೊಕ್ಕು ಮುರಿದೆನೆಂದುಕೊಂಡೆನು
ಮನುಜರಿಗೆ ಬೆಂಕಿಯಿಟ್ಟ ಪಾತಕಿಗಳು
ನಡೆದಾಡುತ್ತಿರುವರು ಆ ನಡುಬೀದಿಯಲ್ಲೇ.
ಗುಜರಾತಿನಲ್ಲಿ ಸುಟ್ಟ ಶವಗಳ ಬೂದಿ
ಘಮಟು ವಾಸನೆ ಉಬ್ಬಳಿಕೆ ಬರುತ್ತಿದೆ
ಕ್ರೌರ್ಯದ ಪರಮಾವಧಿಯೊಳಗೆ
ಹೂತು ಹೋಗಿರುವ ಮಾನವೀಯತೆ
ಕೆಂಡವಾರಿದ ಬೂದಿ ಎಲ್ಲಿ ಹಾಕಲಿ?
ಅದು ಕ್ರಾಂತಿ ಬೀಜವಾಗಿ ಮೊಳೆಯಬಹುದೆ?
ಸೈತಾನನ ಸೊಕ್ಕು ಮುರಿಯದಿದ್ದರೆ ನಾನು
ಸತ್ತವರ ಅತ್ಮಗಳ ಎದುರಿಸಲಿ ಹೇಗೆ?
*****