ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ
ಓ ಜಗತ್ಸಂಹಿನೀಂ – ಭಾರತತಪಸ್ವಿನೀ
ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ
ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು
ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು
ಸತ್ಯದರ್ಶನಮಾದ ತಾಯೇ
ಸೆರೆ ಕೊಳೆಯ ತೊಳೆದ ಧೀಯೇ.
ಅಮರ ತೇಜದಿ ಬೆಳಗಿ – ನಿತ್ಯದಲಿ ಬಯಲಾಗಿ
ಗಾಳಿಯಲಿ ಕೀರ್ತಿಪರಿಮಳ ಬಹುದು ಹಿರಿದಾಗಿ
ಹೃದಯವನೆ ತೀಡುತಿದೆ – ದುರ್ವಿಷಯಕರಿಯಾಗಿ
ನಿರ್ಮಲವ ಮಾಡುತಿದೆ – ಬಿಡುಗಡೆಗೆ ಅಣಿಯಾಗಿ
ಹೇ ಮಾತೆ ಪ್ರಖ್ಯಾತೆ – ನಮಿಸುವೆವು ಶಿರಬಾಗಿ.
ತೆರಸು ಬಾ ಕಣ್ಗಳನು – ದೇವೀ
ನಡೆಸು ಬಾ ಸತ್ಯದಲಿ – ಓವೀ.
ಗತಿದೊರೆದ ಭಾರತೀಯರ ಜನ್ಮ ಭಾಗ್ಯಸಿರಿ
ಮುಳುಗದಿರು ಕಣ್ಮರೆಯ ಮಾಡದಿರು ಸುಖಲಹರಿ
ಭಾರತಿಯ ಸತ್ಪುತ್ರಿ-ಮಕ್ಕಳನು ನೋಡು ಬಾ
ಮುಕ್ತಹಸ್ತವ ನೀಡಿ-ಬಡತನವ ಹರಿಸು ಬಾ
ಸೆರೆಮನೆಯನೊಡೆದು ಬಾ-ತಾಯೆ ಕಸ್ತೂರಿಬಾ
ಕರುಣವನು ಕರೆಯ ಬಾ-ತಾಯೆ
ಪೂಜೆಯನು ಕೊಳ್ಳು ಬಾ-ತಾಯೆ.
ನೀನೆಲ್ಲರೊಳು ಬೆರೆತು ನಿತ್ಯಾತ್ಮವಾಗಿರುವೆ
ನಿನ್ನಂತರಂಗವೇ- ಸ್ವಾತಂತ್ರರಣರಂಗ
ನಿನ್ನ ನುಡಿ ನಿನ್ನ ನಡೆ-ಎಮ್ಮನಿದೊ ಸಾಗಿಸಿವೆ
ಭಾರತಿಯ ಬಿಡುಗಡೆಗೆ-ಸಾಹಸವಗೈಸುತಿವೆ
ಎದ್ದೇಳು ನಿನ್ನವರ- ನೆನೆದು ಬಾ ಶ್ರೀ ವಧುವೆ
ಕರುಣದಲಿ ನಿಂದೊಮ್ಮೆ ನೋಡು
ಮುಗುಳು ನಗೆಯೊಂದನ್ನು ನೀಡು.
*****