ನಾವೆಲ್ಲ ಒಂದೇ
ನಾಡೆಲ್ಲ ನಮದೇ
ವೇಷ ಭಾಷೆ ಬೇರೆ ಬೇರೆ
ಹರಿಯುವ ನೀರು
ಬೀಸೋ ತಂಬೆಲರು
ಕೇಳುತಿಹವು ಹೇಗೆ ಬೇರೆ?
ಜಾತಿ ಮತಗಳು
ಆರಾಧ್ಯ ದೈವಗಳು
ಹೇಗಿದ್ದರೇನು? ದೇವರೊಂದೇ
ಶಾಲೆ ನೂರಾರು
ಒಂದೇ ನಮ್ಮ ಗುರು
ಬೋಧನೆಯು ಮಾತ್ರ ಒಂದೇ
ಹಿರಿಯರ ಭಿನ್ನಮತ
ಅರಸಿದರೆ ದಡ್ಡತನ
ಮೆರೆಯಲಿ ಮಕ್ಕಳಲಿ ಹಿರಿತನ
ಸೋದರ ಭಾವನೆ
ಹುಟ್ಟಲಿ ಕಾಮನೆ
ಹರಡಲಿ ಭವ್ಯ ಪರಂಪರೆಯನ್ನು
ಸೂರ್ಯ ಚಂದ್ರರು
ಗ್ರಹಗಳು ಹತ್ತಾರು
ಎಲ್ಲರಿಗೂ ಸರಿಸಮಾನವಲ್ಲವೇ?
ಮಾಡುವ ಕೆಲಸ
ಹೊಮ್ಮುವ ಉಲ್ಲಾಸ
ಮನದ ಭಾವನೆಗಳು ಏಕವಲ್ಲವೇ?
ಏನೇ ಇರಲಿ
ಭಿನ್ನತೆಯಲ್ಲೂ
ದೇಶ ನಮ್ಮದೆಂಬ ಭಾವ ಬೆಳೆಯಲಿ
ಪಾಕ ಕೆದಕಲಿ
ಚೀನಾ ಹಣುಕಲಿ
ಕೆಚ್ಚೆದೆ ಪ್ರತ್ಯುತ್ತರ ನಮ್ಮದಾಗಿರಲಿ
ನಮ್ಮಯ ಬಾಳಿಗೆ
ದೇಶದ ಏಳಿಗೆ
ಎಂಬ ಭಾವ ಜೇನು ಗೂಡು ಕಟ್ಟಲಿ
ವಿಶ್ವದಿ ನಮ್ಮಯ
ದೇಶ ಪ್ರಥಮ
ವಾಗಲೆಂಬ ಧ್ಯೇಯ ನಮ್ಮದಾಗಿರಲಿ
*****