ಭಕ್ತ ನಿನಗೊಂದು ಕಿವಿಮಾತು
ಮಾಡದಿರು ಬಾಳು ವ್ಯಸನದಿ ತೂತು
ನಾಳಿನ ಭವಿಷ್ಯಕ್ಕೆ ಇಂದು ಚಿಂತೇಕೆ!
ಕ್ಷಣಿಕ ಬದುಕಿಗೆ ಕೋಟಿ ಆಸೆಗಳೇಕೆ
ಆ ಪರಶಿವನೆ ನಿನ್ನ ಪರಮಾತ್ಮ
ಪಾರ್‍ವತಿಯೇ ನಿನ್ನ ಮನಸ್ಸು ಹೌದು
ಪ್ರಾಣಗಳೇ ಸಹಚರರು ದೇಹವೆ ಮನೆ
ಇಂದ್ರಿಯ ಕ್ರಿಯೆಗಳೇ ನಿನ್ನ ಪೂಜೆ
ನಿದ್ರೆಯೇ ನಿನ್ನ ಸಮಾಧಿ ಸ್ಥಿತಿ
ನಿನ್ನ ಸಂಚಾರವೆಲ್ಲ ಪ್ರದಕ್ಷಿಣೆ ರೀತಿ
ಆಡುವ ಮಾತೇ ಅವನಸ್ತುತಿ
ಮಾಡುವ ಕಾರ್‍ಯಗಳ ಆರಾಧನೆ ಪ್ರೀತಿ
ದೇಹವೇರಥ ಆತ್ಮನೆ ರಥಿ
ಬುದ್ಧಿಯೇ ಸಾರಥಿ ಬಾಳಿಗೆಲ್ಲ
ಮನಸ್ಸೆ ಹುರಿ ಇಂದ್ರಿಯಗಳೇ ಅಶ್ವಗಳು
ದೇವನೆಡೆಗೆ ಹೋಗದೆ ವಿಧಿ ಇಲ್ಲ
ಆಧ್ಯಾತ್ಮಿಕ ದಾರಿಯಲಿ ಬ್ರಹ್ಮಚರ್ಯ
ಪಾಲಿಸು ಸತತ ಏಕಾಗ್ರದಲ್ಲಿ
ಕಾಮನಿರುವಲ್ಲಿ ರಾಮನಿಲ್ಲ
ತುಲಸಿದಾಸರ ವಾಣಿ ನೆನೆ ಮನದಲ್ಲಿ
ಬಿದ್ದು ಹೋಗುವ ತನುವಿಗೆ ಅಭಿಮಾನವೇ
ಜಡ್ಡು ದುರಹಂಕಾರ ಬಿಗು ಮಾನವೇ
ಎಲ್ಲವನ್ನು ಆಚೆ ತಳ್ಳಿ ಎದ್ದು ನಿಲ್ಲು
ಮಾಣಿಕ್ಯ ವಿಠಲನ ಭಾವಗೆಲ್ಲು
*****