ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು?
ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು,
ತಡೆಯದಲೆ ತೋರು ನೀ ತಡಿಯ ತಲುಪುವ ಹದನು !
೧
‘ನನ್ನ ನುಡಿ ಮನ್ನಿಸದೆ ಬೀಳದಿರು ! ಈ ಹೊಳೆ-
ಮುನ್ನ ಬಲ್ಲಿದರ ಹಲವರ ಬಳಲಿಸಿಹುದೋ!’
ಎನ್ನುತೆಳ್ಚರಿಸಿರುವ ನಿನ್ನ ನುಡಿ ಹೀಗಳೆದು
ನನ್ನ ಬಲುಹಿನ ಗರುವದಲಿ ಹೊಳೆಗೆ ಹಾರಿಹೆನು!
೨
‘ನಸುವೇಳೆ ತಾಳು, ನಾ ಹೇಳುವುದ ನೀ ಕೇಳು!
ಗಸಣೆಗೊಳಿಸದೆ ಹೊಳೆಯ ದಾಂಟಿಸುವೆ’ ಎಂದೆಯೈ!
ಕಸಕೆ ಸರಿಯೆಣಸಿದೆನು ನಿನ್ನ ನಲ್‌ನುಡಿಗಳನು,
ಮಸಣದೀ ದಾರಿಯೊಳು ಅಡಿಗಳನು ಚೆಲ್ಲಿಹೆನು.
೩
‘ಬೀಳದಿರು, ಬೀಳದಿರು! ಹಿಂದಿರುಗು, ಸರಿ, ಮರಳು!
ಕೇಳೆನ್ನ ವಚನ ಬಾಳುವೆ ಬಹಳ ದಿವಸಗಳು!’
ಹೇಳಿದೆಯೊ ಇಂತು ನಡುಹೊಳೆಯ ಸೇರುವ ವರೆಗು-
ಮೂಳ ನಿಜ ನಾನು ಗಣಿಸದೆ ಹೊಳೆಯ ಹೊಕ್ಕಿಹೆನು!
೪
ನನ್ನ ತೋಳುಗಳ ತಿರುಳನ್ನು ತೊರೆಯನ್ನೀಸಿ
ನಿನ್ನೆದುರು ತೋರಿಸುತ ಮೂದಲಿವೆನೆಂದಿದ್ದೆ;
ಮುನ್‌ನೋಡಿ ತಿಳಿಯದೇ ಬನ್ನದಲಿ ಬಿದ್ದಿಹೆನು,
ಮನ್ನಿಸೆನ್ನಯ ಮೊರೆಯ ಅಣ್ಣ ನಾವಿಕ, ಪೊರೆಯೊ!
೫
ಬಡಿದಾಡಿ ನೀರಿನೊಳು ಬಳಲಿಹವು ಕೈ ಕಾಲು;
ಅಡಿಗಡಿಗೆ ಮೂಗು-ಕಣ್-ಕಿವಿಗಳಿಗೆ ನೀರೇರಿ,
ಕುಡಿಯುತಲಿಹೆ ಒಡಲು ಒಡೆಯುವೊಲು ಕದಡನ್ನು
ನಡುಹೊಳೆಗೆ ಬರಲೀಗ, ದಡದಡಿಸುತಿಹೆನು!
೬
ಕ್ರೂರಜಲಜಂತುಗಳು ನೀರಸುಳಿ ತೆರೆತೆರೆಯು
ತೋರೆ ಭೀತಿಯೊಳು ಗುಡುಗಾಡುತಿದೆ ನನ್ನೆದೆಯು!
ಧೀರ, ನಿನ್ನಯ ನುಡಿಯ ಮಾರಿ ನಾ ನಡೆದುದನು
ತಾರದೆಯೆ ಮನದಲ್ಲಿ ತಾರಿಸುವುದೆನ್ನನು!
೭
ಮೂಢನೊಬ್ಬನು ಹಿರಿಯರಾಡಿದುದನೆಣಿಸದೇ
ಖೋಡಿನಂದದಿ ನಡೆದು ಕೇಡಿಗೊಳಗಾಗಿರಲು,
ಖೋಡಿಗಳೆದವ ನಮ್ಮ ನುಡಿಯನೆಂದಾತನನು
ನೋಡಿಯೂ ನೋಡದಾ ತೆರ ಸುಮ್ಮಗಿರುವರೆ ?
೮
ಹಲವು ಸಲ ದಾಂಟಿಹೆಯೊ, ಹೊಳೆಯಾಳ ತಿಳಿದಿಹೆಯೊ,
ಸುಲಭದಲಿ ಹಲವು ಜನರನು ಪಾರು ಮಾಡಿಹೆಯೊ!
ತಲುಪಿಸೈ ತಡಿಗೆನ್ನ ಚೆಲುವ ಅಂಬಿಗರಣ್ಣ,
ಬಲುಮೆಯಿಂದಲಿ ನನ್ನ ಬಳಗದೊಳು ಕೂಡಿಸೈ!
*****