೧
ಸುಮ್ಮಗಿರಬೇಡ ನನ್ನೆದೆಯ ಹಾಡೇ…
ಸುಮ್ಮಗಿರಬೇಡ ನನ್ನೆದೆಯ ಹಾಡೇ!
ಗುಡುಗಿನಬ್ಬರದಿ ಮೊರೆ,
ವೀಣೆ ನುಡಿಸಿಲ್ಲದಿರೆ…
ಸತ್ತವರ ಮನೆಯಂತಿದೇನು ಪಾಡೆ ?
ಎತ್ತು ದನಿ, ಇನ್ನೊಂದನೇನು ಬೇಡೆ.
೨
ನೀನು ಗುಡುಗುತಲಿರ್ದ್ದರೆದೆಯ ಹಾಡೇ….
ನೀನು ಗುಡುಗುತಲಿರ್ದ್ದರೆದೆಯ ಹಾಡೇ!
ಮರವೆ-ಮೋಹಗಳ ತೆರೆ
ರೂಢಮೂಢತೆಯ ಪೊರೆ-
ಹಿಸಿದು ಲೋಕದ ಕಿವುಡ ಕೀಳಬಹುದೆ….
ಹೊಸಯುಗದ ಹಜ್ಜೆಯುಲಿ ಕೇಳಲಹುದೆ ?
೩
ವೀಣೆಯನು ನೀ ನುಡಿಸಲೆದೆಯ ಹಾಡೆ….
ವೀಣೆಯನು ನೀ ನುಡಿಸಲೆದೆಯ ಹಾಡೆ!
ತಾನಾರರಿಯದಿರುವ
ದೀನ ಮಾನವಕುಲವ
ನೀನಿರುವ ಕಡೆಗೆ ಬರಮಾಡಿಕೊಳುವೆ….
ಗಾನದೊಡನೆಯೆ ಬಾಳ ತಿರುಳನೊರೆವೆ!
೪
ಸುಮ್ಮಗಿರಬೇಡ ಬೇಡೆದೆಯ ಹಾಡೇ….
ಸುಮ್ಮಗಿರಬೇಡ ಬೇಡೆದೆಯ ಹಾಡೆ!
ಗುಡುಗಿನಂದದಲಿ ಮೊರೆ
ವೀಣೆ ನುಡಿಸಿಲ್ಲದಿರೆ,
ಸುಮ್ಮಗಿದ್ದರೆ ಜಗಕೆ ಕೇಡು ನೋಡೆ-
ಒಮ್ಮೆಯೊಮ್ಮೆಯು ಸುಮ್ಮಗಿರದೆ ಹಾಡೆ!
*****