ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ
ಯಾರವನೋ ಚಿರತರುಣಾ ಬಂದಾ
ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ
ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ
– ಆಕೃತಿಬಂಧಾ
ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ,
ಸವಿನುಡಿ ಛಂದಾ-
`ಆ ಹೃದಯ ಜ್ವಾಲಾ ಮಾಲಾಲಂಕೃತಾ ಯಜ್ಞಾ ಸಿದ್ದವೇನೇ ?
ಕಂಕಣಾ ಬದ್ದವೇನೇ ?
ಬಂದೆನೇ! ಬರುವಿಯೇನೇ ?’- ಎಂದಾ
ಅರರೇ, ಗದಗದನೇ ಏನೋ ನಡುಗಿತ್ತೋ-ನಡುಗಿತ್ತೂ
ಎದೆಗೂಡಿನ ಹಿಂದೇ
ಏನೇನೋ ಅಡಗಿತ್ತೋ-ಅಡಗಿತ್ತೂ
ನೆನವೇ ನನೆಕೊನೆಹೋಗಿ ಪಲ್ಲವಿಸಿತೊ ಜೀವನವೃಕ್ಷಾ
ಆಮೋದ ಲಿಂಗ ಪಡಪಡಿಸಿತು ಪ್ರಾಣದ ಪಕ್ಷಾ
ಪ್ರತಿಬಿಂಬಿತವಾಯ್ತೋ ಭಗ್ಗನೇ, ಸ್ಮೃತಿಸಾರದ ಸಾತ್ವಿಕ ಲಕ್ಷಾ
ಓಹೋ ಹೋಯಿತೋ ಹಡಗಾ, ಬಂಗಾರದ ಹುಡುಗಾ
ಹೃದಯದ ದೇವಾ!-
ತಾಳೆನೇ ನೋವಾ.
ಟೊಳ್ಳೋ ಈ ಜಗವೆಲ್ಲಾ ಬಯಲಿನ ಡೊಗರು
ಬದುಕಾಗಿದೆ ಹಗುರು
ಒಲವಿಲ್ಲಾ ಬಾರನು ನಲ್ಲಾ, ಹಳೆ ಹಿಗ್ಗಿಗೆ ಮೂಡದು ಚಿಗುರು
ಬರದೋ, ಬರದೆನಿಸದೆ ಎಂದೂ ಬರದು
ಕಿಸಲಯ-ನಯ ಹೋಗಿದೆ ತರಿದು
ಬರಿದಾಗಿದೆ ಒಳಗೂ ಹೊರಗೂ
ಆ ರುಹ್ಮಾಂಗದ ದೇವನ ಕನಸೂ ಬರಿದಾಗಿ
ಕನಸಿನ ಹಡಗಾ ಬರದಾಗಿ.
*****