ಜಪಾನ್ ದೇಶವು ಚಿಕ್ಕದಾದರೂ ವೈಜ್ಞಾನಿಕವಾಗಿ ಬಹಳ ಶ್ರೇಷ್ಠ ಮಟ್ಟದಲ್ಲಿದೆ. ಪ್ರತಿದಿನವೂ ಅಲ್ಲಿ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಕಾರು ತಯಾರಿಕೆಯಲ್ಲಿ ಬಹಳ ಕಾಲದಿಂದಲೂ ಮೊದಲ ಸ್ಥಾನಗಳಲ್ಲಿ ಇದೆ. ಪುಟಾಣಿ ಗಾತ್ರದ ಯಂತ್ರಗಳ ಸೃಷ್ಟಿಯಲ್ಲಿಯೂ ಈ ದೇಶ ಎತ್ತಿದ ಕೈ. ಈಗ ಎಲ್ಲದಕ್ಕೂ ಮುಂದೆ ಹೋಗಿ ಅಕ್ಕಿಕಾಳಿನ ಗಾತ್ರದಲ್ಲಿ ಒಂದು ಚಲನ ಶೀಲ ಕಾರೊಂದನ್ನು ತಯಾರಿಸಿ ಬಿಟ್ಟಿದೆ. ಇದು ಮನರಂಜನೆ, ಅಥವಾ ಆಟಿಗೆ ವಸ್ತು ಅಲ್ಲವೇ ಅಲ್ಲ. ಕಾರಿನೊಳಗೆ ಇರಬೇಕಾದ ಎಲ್ಲ ಬಿಡಿಭಾಗಗಳು ಯಂತ್ರಗಳು, ಸೀಟುಗಳು, ಎಲ್ಲವೂ ಇವೆ. ಇದರಲ್ಲಿಯ ಬಿಡಿಭಾಗಗಳನ್ನು ದುರ್ಭೀನು ಹಾಕಿಯೇ ನೋಡಬೇಕು.
ಇಂಥಹ ಕಾರುಗಳನ್ನು ಜಪಾನಿನ “ನಿಪೊಂಡೆನ್ಸೊ” ಕಂಪನಿಯು ತಯಾರಿಸುತ್ತಿದ್ದು ಈ ಕಾರುಗಳ ವೇಗ ಒಂದು ಸೆಕೆಂಡಿಗೆ ೫ ಸೆಂಟಿಮೀಟರ್‌ಗಳಷ್ಟು ಚಲಿಸುತ್ತದೆ. ಈ ಕಾರಿನಲ್ಲಿ ೨೪ ಭಾಗಗಳಿದ್ದು ೫ ಭಾಗಗಳಿಂದ ರಚಿತವಾದ ಮೋಟಾರುಗಳನ್ನು ಒಳಗೊಂಡಿದೆ. ೧೦ ವರ್ಷಗಳ ಸಂಶೋಧನೆ ಈ ಕಾರಿನ ತಯಾರಿಕೆಯಲ್ಲಿ ಹಿಡಿದಿದೆ. ಈ ಸಂಶೋಧನೆಗೆ ತಗುಲಿದ ವೆಚ್ಚ ೨೫ ಕೋಟಿ ಡಾಲರ್‌ಗಳು, ಒಂದು ಘನಸೆಂಟಿ ಮೀಟರ್‌ಗ್ರಾತಕ್ಕಿಂತಲೂ ಚಿಕ್ಕಾದಾದರೂ ಈ ಕಾರು ಸಮರ್ಥವಾಗಿ ನಿರ್ವಹಿಸಬಲ್ಲ ಯಂತ್ರಗಳ ಅಭಿವೃದ್ಧಿಯೇ ಮುಖ್ಯಗುರಿ, ಎಂದು ಸಂಶೋಧಕರು ಹೇಳುತ್ತಾರೆ.
*****