ಎತ್ತು ಕಟ್ಟಿದೆ ಲಾಂದ್ರವುರಿಸಿದೆ
ಗಾಡಿ ಹೊರಟಿದೆ ಸಂಜೆಗೆ
ಎಲ್ಲಿಗೆಂದು ತಿಳಿಯದೇ
ಎಲ್ಲಿ ಮುಟ್ಟಿತಲ್ಲಿಗೆ
ಏರಿಯಲಿ ಏರುತಿರಲಿ
ಇಳಿಜಾರಿನಲಿ ಇಳಿಯುತಿರಲಿ
ಬಟ್ಟಬಯಲ ಕಾಡು ದಾರಿ
ತಿರುವುಗಳಲಿ ತಿರುಗುತಿರಲಿ
ಹಾಡೊ ಗಾಡಿಗಾರ ಆ
ಎತ್ತುಗಳಿಗೆ ಹೊಡೆಯದೇ
ಬೆತ್ತ ಬೆನ್ನಿಗೆ ತಾಗಿಸದೇ ಬರೇ
ಗಾಳಿಯಲೆ ಚಕ್ ಚಕಾ
ನೆನಪು ನಿನ್ನ ಹಾಡಿನಲ್ಲಿ ಮುಂ-
ಜಾವ ದೂರ ನಾಡಿನಲ್ಲಿ
ಅಲ್ಲೀ ವರೆಗೆ ಉರುಳುತಿರಲಿ
ನಮ್ಮ ಗಾಡಿ ಮೆಲ್ಲಗೆ ಎಲ್ಲಿ ಹೋಯ್ತೊ ಅಲ್ಲಿಗೆ
ನಿದ್ದೆ ಬರುವುದು ಕಣ್ಣಿನಲ್ಲಿ
ಎಂಥದೋ ಕನಸು ಆ ನಿದ್ದೆಯಲ್ಲಿ
ಎಷ್ಟು ಹಗಲು ಎಷ್ಟು ರಾತ್ರಿ
ಎದ್ದಾಗ ನಾನೆಲ್ಲಿ
ಎದ್ದಾಗ ನೀನೆಲ್ಲಿ
ಓ ಗಾಡಿಗಾರ ಮೋಡಿಗಾರ
ಎಂಥ ಜಾದುಗಾರನೋ
ನೀನಂಥ ಮೋದಗಾರನೋ
*****