(ಪುಷ್ಯ ಶುದ್ಧ ಅಷ್ಟಮೀ ರಾತ್ರಿ ೧೩-೧-೪೪)
ಹರಿವ ಮುಗಿಲ ನೌಕೆಯೇರಿ
ಬರುವ ಚಂದ್ರ ಗಗನ ಸಾರಿ
ಅರ್ಧ ಮುಳುಗಿ ಅರ್ಧ ಬೆಳಗಿ
ನಗುವ ರಜನಿಗೂಡೆಯನಾಗಿ
ಕಳೆಯ ಕೊಟ್ಟು ಬೆಳಕನುಟ್ಟು
ಉಡುಗಣಂಗಳೊಂದಿಗಿಟ್ಟು
ಜಗವನಪ್ಪಿ ನಭವನೊಪ್ಪಿ
ಜೀವಕೊಂದು ಕಳೆಯ ಕೊಟ್ಟು
– ತಂಪು ಸೂಸಿ ಬರುವನು.
ಕರಿಯ ಮುಗಿಲು ಬಣ್ಣವೇರಿ
ಗಗನಕೊಂದು ಹೂಳಪ ತೋರಿ
ನಭವ ಮುತ್ತಿ ರಾತ್ರಿ ಬರುವ
ಚುಕ್ಕಿ ಗಣಕೆ ಕಣ್ಣ ತೋರಿ
ಹಗಲಿಗೇನು ಹಮ್ಮೆಯೆಂದು
ರಾತ್ರಿಗೇನು ಕಡಮೆಯೆಂದು
ಕುಣಿದು ಕುಣಿದು ತಂಪನೆರೆದು
ಶಾಂತಿಗಡಲನುಕ್ಕಿ ಹರಿದು
– ನಗೆಯ ಹಾಸಿ ಬರುವನು.
*****