ಗಾಳಿಯ ಕಾಲದಿ
ಧೂಳಿನ ದಿನದಿ
ಗಾಳೀಪಟದ ಹುಚ್ಚು
ಪೇಟೆಗೆ ಹೋಗಿ
ಕೊಂಡು ಸಾಮಗ್ರಿ
ಹರಡಿಕೊಳುವುದೇ ಹೆಚ್ಚು
ಪೇಪರ್ ಕತ್ತರಿ
ಬಿದಿರು ಬೆತ್ತರಿ
ಕೊಯ್ದು ಸೀಳಿ ಅಳತೆಗೆ
ಅಂಟು ಸವರಿ
ಕಲ್ಲನು ಹೇರಿ
ತೆಗೆದಿಟ್ಟರು ಪಟನಾಚೆಗೆ
ಸೂತ್ರವ ಬಿಗಿದು
ಫರ ಫರಿ ತೆಗೆದು
ಹೊರಟರು ಊರಿನ ಬಯಲಿಗೆ
ಗಾಳಿಗೆ ತೂರಲು
ದಾರವ ಹಿಡಿಯಲು
ಏರಿತು ನೀಲಿಯ ಬಾನಿಗೆ
ವಂ ವಂಯ್‌ಗುಟ್ಟುತ
ಗಮನವ ಸೆಳೆಯುತ
ಸಂಜೆಯವರೆಗೆ ಆಡಿಸಲು
ಜನಗಳು ಹೊಗಳಲು
ಹರುಷದಿ ತೇಲಲು
ಧರೆಗಿಳಿಯಿತು ನಶೆಯಾಗಲು
ಪಟವನು ಹಿಡಿದ
ಸಂತಸ ಮಿಡಿದು
ರಂಗನು ಮನೆಗೆ ಐತಂದ
ತಿಳಿಯಲು ವಿಷಯ
ಪಟ್ಟರು ಖುಷಿಯ
ಹೊಗಳಲು ರಂಗನ ತಾಯ್ತಂದೆ
ಊಟವ ಮಾಡಲು
ರಂಗನು ಮಲಗಲು
ಕಂಡನು ಬಣ್ಣದ ಕನಸುಗಳ
ಪಟದ ಸ್ಪರ್ಧೆಯಲಿ
ರಂಗನು ಗೆಲ್ಲಲು
ಪಡೆದನು ಬಹುಮಾನಗಳ
*****