ಎಂತಹ ನಿರಂಕುಶ ಪ್ರಭುತ್ವ
ಮಹಾರಥರ ದರ್ಪದ ಸಿಂಹಾಸನ
ರತ್ನಖಚಿತ ಪ್ರಭುಗಳ ಕಿರೀಟಕ್ಕೆ
ಬರಸಿಡಿಲು ಅಪ್ಪಳಿಸಬಹುದು
ಆ ದಿನ ಕಂಡೇ ಕಾಣುತ್ತೇವೆ.
ಮಣಿ, ಮುಕುಟ ಕಿರೀಟಗಳು
ಮಣ್ಣು ಪಾಲಾದವು, ಪದ್ಮನಾಭನ
ಗುಪ್ತಧನ, ಕನಕ ಬಯಲಾದವು
ಗದ್ದುಗೆಯ ನಂಟು ಕಡೆತನಕವಲ್ಲ
ಸಿಂಹಾಸನಗಳು ನುಚ್ಚು ನೂರಾಗುವ
ಆ ದಿನ ಕಂಡೇ ಕಾಣುತ್ತೇವೆ.
ನಿರ್ಲಜ್ಜ ಸುಳ್ಳು ಭರವಸೆಗಳು
ವರಸೆ ಮಾತುಗಳ ಪರಮಾವಧಿ
ಗದ್ದುಗೆಗಳ ಬೇರು ಅದುರುತ್ತಿವೆ.
ಭೂಮಿ ಮೇಲಿನ ಅರಮನೆಗಳು
ಬೆಂಕಿ ಪೊಟ್ಟಣಗಳಂತೆ ಧಗಧಗನೆ
ಭೀಕರ ಉರಿಯುವ ದೃಶ್ಯದ
ಆ ದಿನ ಕಂಡೇ ಕಾಣುತ್ತೇವೆ.
ಓತಿಕಾಟದಂತೆ ಬಣ್ಣ ಬದಲಿಸುವ
ಇವರ ಬಣ್ಣ ಬಯಲಾಗುತ್ತದೆ.
ಇಲ್ಲಿಯೇ ನಮ್ಮ ನಿಮ್ಮೆಲ್ಲರ ಮುಂದೆಯೇ
ನಿರಾಕರಿಸಲ್ಪಟ್ಟ ಅಪರಾಧಗಳು
ಸಾಬೀತಾಗುತ್ತವೆ ಎಲ್ಲರ ಮುಂದೆಯೇ
ಬೆತ್ತಲಾಗುತ್ತಾರೆ ಅವರು
ಆ ದಿನ ಕಂಡೇ ಕಾಣುತ್ತೇವೆ.
ಪ್ರಭುಗಳ ನೆತ್ತಿಯ ಮೇಲೆ
ಅಪಾಯದ ಕತ್ತಿ ಬೀಸುತ್ತಿದೆ
ಸುಳ್ಳು ಭರವಸೆಗಳು ಛಿದ್ರವಾಗಿ
ಪುಡಿಪುಡಿಯಾದ ಒಪ್ಪಂದಗಳು
ಗಾಳಿಯಲಿ ತರಗೆಲೆಯಾಗಿ ಹಾರುವ
ಆ ದಿನ ಕಂಡೇ ಕಾಣುತ್ತೇವೆ.
*****