ಎನ್ನ ಜೀವನದುಸಿರು ಈ ಮಣ್ಣು
ಎನ್ನ ಬಾಳಿನ ಕಡಲು ಈ ಹೆಣ್ಣು
ಎನ್ನ ನೋಟದ ಹೊನಲು ಈ ಕಣ್ಣು
ಎನ್ನ ಮಾತಿನ ಬಣ್ಣ
ಎನ್ನ ದೀಪ್ತಿಯ ರನ್ನ
ಕೊಡಗು ನಾಡಿನ ಚೆನ್ನ
ಇದು ನಮ್ಮ ಬೀಡು ಈ ಚೆಲುವ ನಾಡು.
ಅಲ್ಲಿ ಆ ಬೊಮ್ಮಗಿರಿ ಇಲ್ಲಿ ಈ ಪುಷ್ಪಗಿರಿ
ಆಗಸಕೆ ನೆಗೆಯುತಿಹವು
ಕಾವೇರಿ ಸ್ವರ್ಣವತಿ ರಾಮಲಕ್ಷಣತೀರ್ಥ
ಗಂಗೆಯಂ ಹಳಿಯುತಿಹವು
ನೋಡಿ ಬೆಟ್ಟದಕೋಟೆ ಲೋಕದೊಳಗಿದು ಮಾಟ
ಋಷ್ಯಾಶ್ರಮಗಳ ಕೂಟ
ಕೋದಂಡ ಜೇವಡೆವ ವೀರಯೋದ್ಧರೊಲಿರುವ
ತರುರಾಜಿ ನೋಡಿ ಮೆರೆವ.
ಇಕ್ಕೇರಿಯಿಂ ಬಂದು
ಹಾಲೇರಿಯೊಳ್ನಿಂದು
ರಾಜ್ಯವನ್ನು ಕಟ್ಟಿದರು
ನಲನಾಳ್ವ ಭೂಮಿಪರು
ಸಕಲ ನಾಡಿನ ಕೊಡವ ವೀರ ಸಹವಾಸದಲಿ
ಆಳಿದರು ಕೊಡಗು ನಾಡು
ಜಮ್ಮ ಉಂಬಳಿ ಕೊಟ್ಟು ನೆಲದೊಡೆಯತನವಿತ್ತು
ನೋಡಿದರು ಸಗುವ ನಾಡು.
*****