ಇರುವೆ ಇರುವೆ ಎಲ್ಲಿರುವೆ?
ನೆಲದಲಿ ಹುತ್ತದಲಿ ನಾನಿರುವೆ
ಸಣ್ಣನೆ ಕಪ್ಪನೆ ಇರುವೆ
ನಿನಗೆ ಆಪರಿ ವೇಗವೇ?
ಮೈಯಲಿ ಬುಳು ಬುಳು ಓಡುವೆ
ಕಚ್ಚದೆ ಕರುಣೆಯ ತೋರುವೆ
ರಾಜ ರಾಣಿ ಜೊತೆಗೆ ಸವಾರಿ
ಅನ್ನವ ಅರಸುತ ಹೊರಡುವಿರಿ
ಶಿಸ್ತಿನ ಶಿಪಾಯಿ ತರಹ ನಿಮ್ ಪರಿ
ನೋಡಿ ಅರಗಾಗುವವು ವೈರಿ ಪಡೆ
ನಿಮ್ಮಯ ತೂಕಕ್ಕಿಂತ ಹೆಚ್ಚಿನ ಭಾರ
ಹೊತ್ತು ನೀವು ಎಲ್ಲಿಗೋ ನಡೆವಿರಿ
ನಿಮ್ಮಯ ಬದುಕು ಮೂರು ತಿಂಗಳು
ಆರು ತಿಂಗಳಿನ ಅನ್ನದ ತಿರುಳು?
ನಿಮ್ಮಯ ಬುದ್ಧಿ ನಮಗಿದ್ದಿದ್ದರೆ
ಫೇಲು ಮಾತು ನಮ್ಮಲ್ಲಿರಲಿಲ್ಲ
ಸತತೋದ್ಯೋಗ ನಮದಾಗಿದ್ದರೆ
ನಮ್ಮ ದೇಶ ಹೀಗಿರುತ್ತಿರಲಿಲ್ಲ
ಕೆಂಪು ಕೆಂಪನೇ ಕಂಜಿರುವ
ತಲೆ ತಗ್ಗಿಸಿಯೇ ನೀ ನಡೆವೆ
ಶಿಸ್ತು ಸಂಯಮ ನಿಮಗಿಲ್ಲವೇ?
ಸುಮ್ಮನೇ ಕಚ್ಚಿ ನೋಯಿಸುವೆ
ಕಪ್ಪನೆಯ ಗೊದ್ದ, ಕಟ್ಟಿರುವೆ
ಎರೆಮಣ್ಣಲ್ಲವೇ ನಿನ್ನಯ ಠಾವು?
ದಪ್ಪನೆ ಕಣ್ಣು ಉದ್ದ ಮೀಸೆಯ
ಮುಟ್ಟಲು ಖಂಡಿತ ಹೆದರುವೆನು
ಬಿದ್ದರೆ ಸಾಕು ಬೆಲ್ಲದ ವಾಸನೆ
ನುಗ್ಗಿ ಬರುವಿರಿ ಆನೆಯೋಪಾದಿ
ಮೀಸ ಕುಣಿಸುತ ಮುಕುರುವಿರಿ
ಮಕರಂದವ ಹೀರಿ ಸಾಯುವಿರಿ
ಮುಟ್ಟಿದರೆ ಮುನಿಗಳೇ ನೀವು
ಕಚಕ್ಕನೆ ಕಚ್ಚಲು ಭಾರಿ ನೋವು
ಬೇರ್ಪಟ್ಟರೂ ರುಂಡ ಮುಂಡಗಳು
ನಂದವು ನಿಮ್ಮಯ ಸೇಡಿನ ಕಿಡಿಗಳು
ಹಾರುವ ಹೋರುವ ಪುಕ್ಕದ ಇರುವೆ
ಗಿಡಗಳಲಲ್ಲವೇ ನಿಮ್ಮಯ ಇರವು
ಹಾರುತಲೇ ಮೇಲೆ ಕೆಳಗೆ ಬೀಳುವೆ
ಆ ಕೋಪಕೆ ನಮ್ಮನು ಕಚ್ಚಿಬಿಡುವೆ
ಸತ್ತ ವಾಸನೆ ಬಡಿದರೆ ನಿಮಗೆ
ಜಾತ್ರೆ-ಸಂತೆಗಳ ನೆನಪಾಗುವುದು
ನಿಮ್ಮಯ ಆ ಗುಣ ನಮಗೇಕಿಲ್ಲವೋ
ಇದ್ದರೆ ದಾರಿದ್ರ್ಯ ಇರಲಿಲ್ಲವೇನೋ
*****