ಕುಂವೀ ಅವರ “ಅರಮನೆ”

ಕುಂವೀ ಅವರ “ಅರಮನೆ”

ಈಗಾಗಲೇ ಹದಿನೈದು ಕಾದಂಬರಿಗಳನ್ನೂ ಹತ್ತು ಕಥಾ ಸಂಕಲನಗಳನ್ನೂ ಪ್ರಕಟಿಸಿರುವ, ನವೋತ್ತರದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ, ಕುಂವೀ ಎಂದೇ ಪ್ರಸಿದ್ಧರಾದ ಕುಂ. ವೀರಭದ್ರಪ್ಪನವರ ಪ್ರಧಾನ ಆಸಕ್ತಿ ಕಥಾಸಾಹಿತ್ಯ ಎಂಬುದು ನಿರ್ವಿವಾದವಾದರೂ ಅವರು ಎರಡು ಕವನಸಂಕಲನಗಳನ್ನೂ, ಎರಡು ಜೀವನ ಚರಿತ್ರೆಗಳನ್ನೂ, ಒಂದು ಅನುವಾದವನ್ನೂ ಪ್ರಕಟಿಸಿದ್ದಾರೆ. ಅವರ ಕೆಲವು ಕತೆಗಳು ಪಠ್ಯವಾಗಿವೆ, ಚಲನಚಿತ್ರವಾಗಿವೆ. ಎಲ್ಲೆಲ್ಲೂ ದಲಿತ ವರ್ಗದ ನೋವು, ಸಂಕಟಗಳಿಗೆ ದಟ್ಟವಾದ ಧ್ವನಿಯಾಗುವ ಕುಂವೀ ಅವರಿಗೆ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಚದುರಂಗ ಪ್ರಶಸ್ತಿ ಲಭಿಸಿವೆ.

೨೦೦೫ರಲ್ಲಿ ಪ್ರಕಟವಾದ ಅವರ ಇತ್ತೀಚಿನ ಕಾದಂಬರಿ “ಅರಮನೆ” ಅವರ ಮಹತ್ವಾಕಾಂಕ್ಷೆಯ ಪ್ರಯತ್ನ ಎಂಬುದು ಮೇಲುನೋಟಕ್ಕೇ ತೋರುತ್ತಿದ್ದು, ಹದಿನೈದು ವರ್ಷಗಳ ಕಾಲದಲ್ಲಿ ಮೂರು ಬಾರಿ ಮರುಬರವಣಿಗೆ ಕಂಡಿದೆಯಂತೆ! ಇದೀಗ ಪ್ರತಿಷ್ಠಿತ ಚದುರಂಗ ಪ್ರಶಸ್ತಿ ಅದಕ್ಕೆ ಸಿಕ್ಕಿದೆ. ಚಂದ್ರನಾಥ ಆಚಾರ್ಯ ಬರೆದ ಮುಖಪುಟದ ಚಿತ್ರ ಮತ್ತು ಒಳಪುಟಗಳ ಅನೇಕ ರೇಖಾಚಿತ್ರಗಳು, ಛಾಯಾಚಿತ್ರಗಳು ಪುಸ್ತಕದ ಸೌಂದರ್ಯವನ್ನು ಹೆಚ್ಚಿಸಿವೆ.

ಸಾವಿರಾರು ವರ್ಷಗಳಿಂದ ಶೃತಿ ಪರಂಪರೆಯಲ್ಲಿದ್ದು, ನೂರಾರು ವರ್ಷಗಳಿಂದ ಲಿಪಿ ರೂಪಕ್ಕಿಳಿದು, ಯಾವುದೋ ಒಂದು ಹಂತದಲ್ಲಿ ಸಿದ್ಧಮಾದರಿಯಾಗಿಬಿಡುವ “ಭಾಷೆ” ಎಂಬ ಅಪೂರ್ವ ವಸ್ತು ತನಗೆ ತಾನೇ ಸತತವಾಗಿ ಬೆಳೆಯುವ ಚೈತನ್ಯದ ನಿಧಿಯೇ ಆಗಿದ್ದರೂ, ಸಾರ್ವತ್ರೀಕರಣವಾಗಬೇಕಾಗಿರುವ ಕಾರಣದಿಂದಾಗಿಯೇ ತನಗೆ ತಾನೇ ನಿರ್ಬಂಧಗೊಳ್ಳುತ್ತದೆ. ಅದೇ ಶಿಷ್ಟ ಮಾದರಿ. ಅದನ್ನು ಮೀರಿದ್ದು ಅಶಿಷ್ಟ, ಅಬದ್ಧ, ಉದಾಹರಣೆಗೆ : ಉಪಾಧ್ಯಾಯ ವೃತ್ತಿಯಲ್ಲಿದ್ದು ನಾನು ಗಮನಿಸಿದಂತೆ ಎಷ್ಟೊಂದು ಮಕ್ಕಳಿಗೆ ‘ಅ’ಗೂ ‘ಹ’ಗೂ ಇರುವ ವ್ಯತ್ಯಾಸವೇ ತಿಳಿದಿಲ್ಲ. ಗ್ರಾಮಾಂತರ ಪ್ರದೇಶಗಳಿಂದ ಬಂದ ಮಕ್ಕಳಿಗೆ ಬೆಳೆಯುವ ಪರಿಸರವೇ ಕಾರಣವಾಗಿ ಇವೆರಡೂ ಬೇರೆ ಬೇರೆ “ಧ್ವನಿ”ಗಳು ಮತ್ತು ಬೇರೆ ಬೇರೆ ಅರ್ಥ ಕೊಡುತ್ತವೆ ಎಂಬ ವಿಷಯವೇ ತಿಳಿಯದು. ಮೌಲ್ಯಮಾಪನ ಮಾಡುವ ಉಪಾಧ್ಯಾಯರು ಹಾಗೆ ಬರೆಯುವುದು ತಪ್ಪು ಎಂದು ಪರಿಗಣಿಸಿ ಅಂಕ ಕಳೆಯುತ್ತಾರೆ. ಹಾಗಿದ್ದರೆ ಯಾವುದು ಸರಿ ? ಅವರವರಿಗೆ ಅವರವರದ್ದೇ ಸರಿ. ಆದರೆ ಬರೆಯುವಾಗ ? ಈ ನಿರಂತರ ಪ್ರಶ್ನೆಯನ್ನು ಎಚ್ಚರದ ಸ್ಥಿತಿಯಲ್ಲಿಟ್ಟುಕೊಂಡೇ ಗ್ರಾಮಾಂತರ ಪ್ರದೇಶದ ಘಟನೆಗಳನ್ನು ವಸ್ತುವಾಗಿಟ್ಟುಕೊಂಡು ಬರೆದ ಎಲ್ಲ ಲೇಖಕರೂ ಸಂಬಾಷಣೆ ಹೊರತುಪಡಿಸಿ ನಿರೂಪಣೆಯಲ್ಲಿ ಸಿದ್ಧ ಮಾದರಿಗಳನ್ನೇ ಬಳಸಿದ್ದಾರೆ. ಬೆಸಗರಹಳ್ಳಿ ರಾಮಣ್ಣನಿಂದ ಹಿಡಿದು ಕುಸುಮಬಾಲೆಯವರೆಗೆ ಇದರ ವೈವಿಧ್ಯವಿದೆ. ಭಾಷೆಯ ಸಿದ್ಧಮಾದರಿಗಳನ್ನು ಹಿಂದೆ ವಚನಕಾರರು ಮತ್ತು ಹರಿದಾಸರು ಮುರಿದಿದ್ದರು. ಆದರೆ ನಿರೂಪಣೆಯಲ್ಲೇ ಇಡಿ ಇಡಿಯಾಗಿ ಸಿದ್ಧಮಾದರಿಯನ್ನು ಮುರಿದವರು (ಕುಸುಮಬಾಲೆ ಹೊರತುಪಡಿಸಿ) ಕುಂ.ವೀ. ಒಬ್ಬರೇ ಎಂದು ತೋರುತ್ತದೆ. ಕಾದಂಬರಿಯೊಳಗಿನ ಭಾಷೆ ಬಳ್ಳಾರಿ ಜಿಲ್ಲೆಯ ಗಡಿ ಅಂಚಿನಲ್ಲಿ ಹರಿಯುತ್ತಿರುವ ವೇದಾವತಿಯ ಇಕ್ಕೆಲದ ಸರಹದ್ದಿನದು ಎಂದು ಹೇಳುವಾಗಲೇ ಕುಮಾರ ವ್ಯಾಸನ ಕನ್ನಡದಲ್ಲಿ ಮರಾಠಿ ಪದಗಳು ಬೆರೆತಿರುವಂತೆ ಇಲ್ಲಿಯ ಕನ್ನಡದಲ್ಲಿ ತೆಲುಗು ಬೆರೆತಿದೆ ಎಂದು ತಿಳಿಯುತ್ತದೆ. (ಮುಂದೆ ಲೇಖಕರೇ ಅದನ್ನು ಹೇಳುತ್ತಾರೆ) ಈ ಕಾರಣದಿಂದಾಗಿಯೂ ಇಲ್ಲಿಯ ಕನ್ನಡ ಅಪರಿಚತತೆಯನ್ನು ಹುಟ್ಟಿಸುತ್ತದೆ. ಪ್ರಾರಂಭದ ಕೆಲವು ಪುಟಗಳನ್ನು ಗಟ್ಟಿಯಾಗಿ ಓದಿಕೊಳ್ಳಿರಿ ಎಂದು ಲೇಖಕ ಕೇಳಿಕೊಳ್ಳುವಾಗ ಮತ್ತೆ ಕುಮಾರವ್ಯಾಸನೇ ನೆನಪಾಗುತ್ತಾನೆ. ಅವನ ಪದ್ಯಗಳೂ ಗಟ್ಟಿಯಾದ ವಾಚನಕ್ಕೆ ಅರ್ಹವೇ ಹೊರತು ಮನಸ್ಸಿನೊಳಗೇ ಓದಿಕೊಳ್ಳುವುದಕ್ಕಲ್ಲ. ಕನ್ನಡವು ಇಲ್ಲಿ ರೂಪು ತಾಳುವ ಬಗೆಗೆ ಒಂದು ಉದಾಹರಣೆ :

“ಯೀ ನವೀನ ವಚನ ಕ್ರುತಿಯಲ್ಲಿ ಶಬ್ದಾರ್‍ಧಗಳೊಳ್ ಬುದ್ಧಿ ಪ್ರಮಾದದಿಂದ ಬಂದ ನ್ಯೂನಾಧಿಕಭಾವಯಿದ್ದಲ್ಲಿ ಸಕಲ ಕಲಾಭಿಜ್ಞರಾದ ಲೇಖಕ, ವಾಚಕರು ತಿದ್ದಿ ವೋದುತ್ತ ದೋಸವನ್ನೆಣಿಸದೆ ಗುಣವಂ ಕಂಡು ಆನಂದವ ಪಡುವುದು ಆಸೀರುವಾದವಂ ಮಾಡುವುದು ಯಂಬಲ್ಲಿಗೆ ಯೀ ಅರಮನೆಯೆಂಬ ಅಯ್ತಿಹಾಸಿಕ, ಪುರಾಣಿಕ, ಸಾಮಾಜಿಕ ಕಥಾನಕವು ಪರಿಸಮಾಪ್ತಿಯಾದುದು” (ಕೊನೇಪುಟ)

ಮುನ್ನೂರು ವರ್ಷ ನಮ್ಮನ್ನು ಆಳಿದ ಮತ್ತು ದಬ್ಬಾಳಿಕೆ ನಡೆಸಿದ ಬ್ರಿಟಿಷರೆಂದರೆ ಸಾರಾ ಸಗಟಾಗಿ ನಮಗೆ ದ್ವೇಷ. ಅವರು ಸಮರೋಪಾದಿಯಲ್ಲಿ ಈ ದೇಶದಲ್ಲಿ ಜಾರಿಗೆ ತಂದ ಸತೀಪದ್ಧತಿ, ಬಾಲ್ಯವಿವಾಹದಂತಹ ಅನಿಷ್ಠಗಳ ನಿವಾರಣೆ, ಸಾರ್ವತ್ರಿಕ ವಿದ್ಯಾಭ್ಯಾಸ, ಸಾರಿಗೆ, ರೈಲ್ವೇ, ಅಂಚೆ…. ಈ ಯಾವುದನ್ನೂ ಪರಿಗಣಿಸದೇ ಅವರನ್ನು ಟೀಕಿಸುವುದು ಬಹುಶಃ ಭಾವನಾತ್ಮಕವಾಗಿ ಸರಿಯಿರಬಹುದು. ಆದರೆ ಅವರಲ್ಲೂ ಒಳ್ಳೆಯ ಹೃದಯವಂತ ಆಡಳಿತಗಾರರಿದ್ದರು (ಮುಸ್ಲಿಂ ದೊರೆಗಳಲ್ಲಿ ಅಕ್ಬರ್ ಇದ್ದಂತೆ) ಅಂಥವರಲ್ಲೊಬ್ಬ ಈ ಕಾದಂಬರಿಯ ಸರ್ ಥಾಮಸ್ ಮನ್ರೋ ಎಂಬ ಬ್ರಿಟಿಷ್ ಅಧಿಕಾರಿ. ಅವನು ೧೭೬೧ ರಿಂದ ೧೮೨೭ರ ವರೆಗೆ ಬದುಕಿದ್ದನಂತೆ, ಮಂಗಳೂರು ಸೇರಿದಂತೆ ಕರ್ನಾಟಕದ ಮತ್ತು ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕಲೆಕ್ಟರನಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಬ್ರಿಟಿಷ್ ಅಧಿಕಾರಿ. ಅವನು ಕಲೆಕ್ಟರ್ ಆಗಿ ನೇಮಕವಾದಾಗಿನಿಂದ ಪ್ರಾರಂಭವಾಗುವ ಈ ಕೃತಿ ಅವನ ಮರಣದೊಂದಿಗೆ ಮುಗಿಯುತ್ತದೆ. ಅವನ ಅಧಿಕಾರಾವಧಿಯಲ್ಲಿ ನಡೆಯುವ ಘಟನೆಗಳ ದಾಖಲೆ ಈ ಕೃತಿ ಎಂದಿಟ್ಟುಕೊಂಡರೂ “ಗ್ರಾಮೀಣ ಭಾರತದ ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ಆಯಾಮಗಳನ್ನು ವಸ್ತುನಿಷ್ಠವಾಗಿ ಇದು ಚಿತ್ರಿಸುತ್ತದೆ” ಎಂದು ಮುನ್ನುಡಿ ಬರೆದಿರುವ ಸಿ.ಎನ್. ರಾಮಚಂದ್ರನ್ ಗುರುತಿಸುತ್ತಾರೆ. ಅವರು ಈ ಕಾದಂಬರಿಯನ್ನು ಪ್ರಭುಶಂಕರ ಅವರ “ಬೆರಗು”, ಕಾಮರೂಪಿ ಅವರ “ಕುದುರೆ ಮೊಟ್ಟೆ”, ಗಿರಿ ಅವರ “ಗತಿ ಸ್ಥಿತಿ”, ತೇಜಸ್ವಿ, ಅವರ “ಜುಗಾರಿ ಕ್ರಾಸ್”, ಕಂಬಾರರ “ಚಕೋರಿ” ಮತ್ತು ದೇವನೂರರ “ಕುಸುಮಬಾಲೆ” – ಈ ಕೃತಿಗಳ ಸಾಲಿನಲ್ಲಿ ನಿಲ್ಲಿಸುತ್ತಾರೆ. ಆದರೆ ಭಾಷೆಯನ್ನು ಒಡೆದು ಕಟ್ಟುವ ಒಂದು ರೀತಿಯ ಭಂಜನಾ ಕ್ರಿಯೆಗೆ ಸಂಬಂಧಿಸಿ ಹೇಳುವುದಾದರೆ ಈ ಕೃತಿಯನ್ನು ಬೇರೆಯದೇ ಆದ ಮಾನದಂಡದಿಂದ ಅಳೆಯಬೇಕಾಗುತ್ತದೆ.

ನಮ್ಮ ಕಾವ್ಯಗಳ ಕವಿ ಸಮಯಗಳಲ್ಲಿ, ಹದಿನೆಂಟು ವರ್ಣನೆಗಳಲ್ಲಿ ಸೂರ್‍ಯೋದಯ ಸೂರ್‍ಯಾಸ್ತದ ವರ್ಣನೆಗಳೂ ಸೇರಿವೆ. ಆದರೆ ಅವೆಲ್ಲಾ ಸಾಂಪ್ರದಾಯಕ ವರ್ಣನೆಗಳು, ಹೊಸಗನ್ನಡ ಕವಿಗಳು ವಿಶೇಷವಾಗಿ ಕುವೆಂಪು, ಬೇಂದ್ರೆ, ಸೂರ್‍ಯೋದಯದ ಬಗ್ಗೆ ಕವಿತೆ ಬರೆದಿದ್ದಾರೆ. ಅವು ಪ್ರತಿಮಾತ್ಮಕವಾಗಿರುವುದಲ್ಲದೇ ಪಂಪ, ಕುಮಾರವ್ಯಾಸರಿಗಿಂತ ಭಿನ್ನವಾಗಿವೆ. ರಾಜರತ್ನಂ ಒಬ್ಬರೇ ಈ ಸಾಂಪ್ರದಾಯಕ ವೈಭವೀಕರಣವನ್ನು ಮುರಿದವರು. ಕಥಾಪ್ರಕಾರವೊಂದರಲ್ಲಿ ಸೂರ್‍ಯಾಸ್ತವನ್ನು ಹೀಗೆ ವರ್ಣಿಸುವ ಮೂಲಕ ಕುಂವೀ ಈ ಕವಿಸಮಯವನ್ನು ಮುರಿದುಕಟ್ಟುತ್ತಿದ್ದಾರೆ :- “ಸೂರ್‍ಯ ಪರಮಾತುಮನ ಕೈಲಿ ಪಡುವಣ ದಿಕ್ಕು ಕೊಲೆಯಾಗಿ ಯಲ್ಲಿ ನೋಡಿದರಲ್ಲಿ ರಾಮಾರಗುತ ವರಕೊಂಡ” ಬಿಟ್ಟಿತ್ತು. ಸದರೀ ಕಗ್ಗೋಲೆಯನ್ನು ಮುಚ್ಚಿಹಾಕುವ ಹುನ್ನಾರಿನಿಂದಾಗಿ ಕರಿಗಂಬಳಿಯೊಂದು ಪಡುವಣದ ಕಳೇಬರದ ಮ್ಯಾಲ ಕವುಚಿಕೊಳ್ಳುತ್ತಿರುವುದನ್ನು ಗಮನಿಸಿದವನಾದ ಗಂಜಲನು ತಾನಿದ್ದ ಪ್ರಹರಿ ಗೋಡೆ ಮ್ಯಾಲಿಂದ ಘೋಷಿಸುತ್ತಲೇ ಯಿಬ್ಬಂದಿ, ಚಕ್ಕುಬಂದಿಯರು ತಮ ತಮ್ಮ ಕಯ್ಲಿದ್ದ ಮಚ್ಚುಗಳಿಂದ ಟಗರುಗಳ ತಲೆಗಳನ್ನು ಕತ್ತರಿಸಿದೊಡನೆ ಜೀಽಽಯಂದು ಹರಿಯತೊಡಗಿದ ರಕುತವನ್ನು ತಪಾಲೆಯಲ್ಲಿ ಸಂಗ್ರಹಿಸಿದ್ದು ಯಾರೆಂದರೆ ರಣಗೋಪನು “ಅಗೋ ಮುಡು ಮುಡುನೆ ಮೂಡುತಾ ಯಿರೋ ಚಂದ್ರಾಮನ ಕಿರಣಗಳು ಬಂದವೋ ಬಂದವು ಯಂದು ಆತುಮಾಹುತಿ ದಿಬ್ಬದ ಮ್ಯಾಲ ನಿಂತಿದ್ದ ಸೆಂಡ್ರನು ಘೋಷಿಸುತ್ತಲೇ ಥಳ ಥಳ ಹೊಳೆಯತೊಡಗಿದ ರಾಶಿ ರಾಶಿ ಜೋಳದ ಅನ್ನದ ಮ್ಯಾಲ ಕರಯ್ಯ ರಗುತ ಸುರಿದು ವಂದೇ ಸಮಕ ದಾಳಿಸತೊಡಗಿದಾಗ ಸವಾರೆವ್ವ ಮತ್ತಾಕೆಯ ಸಂಗಡಗಿತ್ತೆರು…. ಹಾಡತೊಡಗಿದರು.” (ಪುಟ ೨೯೩-೨೯೪)

ನವ್ಯ ಕಾವ್ಯದ ಪ್ರಾರಂಭ ದೆಸೆಯಲ್ಲಿ ಗೋಪಾಲಕೃಷ್ಣ ಅಡಿಗರು ಭಾಷೆಗೆ ಕೊಟ್ಟ “ಚಿಕಿತ್ಸೆ”ಯನ್ನು ನಂತರದ, ಅದೇ ಪರಂಪರೆಯಲ್ಲಿ ಬರೆಯತೊಡಗಿದ ಬೇರೆ ಬೇರೆ ಕವಿಗಳು ನೀಡಿ ಕನ್ನಡವನ್ನು “ಸೂಕ್ಷ್ಮ”ವಾಗಿಸಿದರು, ಮಸೆದು ಮಸೆದು ಹೊಳಪು ಕೊಟ್ಟರು. ನಮ್ಮದ ಗದ್ಯಕ್ಕೂ ಈ ಮಾತನ್ನು ಅನ್ವಯಿಸಬಹುದು. ಹಾಗೇ ನವ್ಯೋತ್ತರದ ಗದ್ಯದ ಬಗ್ಗೆ ಹೇಳಹೊರಟರೆ ದೇವನೂರು ಮಹಾದೇವ ಅವರಿಂದ ಪ್ರಾರಂಭವಾದ ಈ ಚಿಕಿತ್ಸೆ ಬೆಸಗರಹಳ್ಳಿ ರಾಮಣ್ಣ, ಕೇಶವರೆಡ್ಡಿ ಹಂದ್ರಾಳ, ಎಂ.ಎಸ್. ವೇದಾ, ಮುಳ್ಳೂರು ನಾಗರಾಜ್, ಮೊಗಳ್ಳಿ ಗಣೇಶ್….ರ ಮೂಲಕ ಮುಂದುವರೆಯುತ್ತಾ ಬಂದು ಕುಂವೀ ಅವರ ಕತೆಗಳಲ್ಲಿ ಒಂದು ಹಂತಕ್ಕೆ ನಿಂತು ಈ ಅರಮನೆಯಲ್ಲಿ ಸ್ಪಷ್ಟವಾದ ತಿರುವು ಪಡೆದಿದೆ.

ಅಸ್ಥಿತ್ವದಲ್ಲಿರುವ ನಯನ ಮನೋಹರವಾದ ಅರಮನೆಗಳಿಗಿಂತ ಅಂತಧ್ಯಾನವಾಗಿರುವ ಚಿಕ್ಕಪುಟ್ಟ ಪಾಳೆಪಟ್ಟುಗಳು ಅಗೋಚರ ಅರಮನೆಗಳೇ ಹೆಚ್ಚು ಸುಂದರ ಎಂದು ಭಾವಿಸುವ ಕುಂವೀ ಕೋಟೆ ಗುಡಿ ಗುಂಡಾರ, ಶಾಸನ, ವೀರಗಲ್ಲು, ಮಾಸ್ತಿಗಲ್ಲು ನೋಡಲು ಊರೂರು ಸುತ್ತಿದ್ದರು. ಈ ಕಾರಣದಿಂದಲೇ ಜನಸಾಮಾನ್ಯರ ಈ ಕಥನಕ್ಕೆ ‘ಅರಮನೆ’ ಎಂದು ಹೆಸರಿಟ್ಟಿರಬಹುದು.

ಪುಟ ೪೩೬ರಲ್ಲಿ ಬರುವ ಮಾತಿಗೆ ಬೆಲೆ ಬರೋದು ವಾಸ್ತವವನ್ನು ಮೆಟ್ಟಿದಾಗ ಮಾತ್ರ. ಆಗ ಮಾತ್ರ ಕಣ್ಣುಮುಚ್ಚಿ ನೋಡಲಿಕ್ಕಾಯ್ತದ….. ಕಿವಿ ಮುಚ್ಚಿ ಕೇಳಲಿಕ್ಕಾಯ್ತದ…. ಮೂಗಿನ ಹಂಗು ತೊರೆದು ವಾಸನೆ ಹಿಡೀಲಿಕ್ಕಾಯ್ತದ….. ವರ್ತಮಾನದ ರೇಜಿಗೆಯಿಂದ ದೂರವುಳಿದು ಲೋಕ ಸಂಚಾರ ಮಾಡಲಿಕ್ಕಾಯ್ತದ…” ಎಂಬ ಲೇಖಕರ ಮಾತನ್ನು ಅವರ ಈ ಕಾದಂಬರಿಯ ಓದಿಗೇ ಅನ್ವಯಿಸಿ ಇದನ್ನು ಅನುಭವಿಸಬೇಕೇ ಹೊರತು ಅರ್ಥ ಮಾಡಿಕೊಳ್ಳಲಿಕ್ಕಾಗದು.
*****
‘ಪುಸ್ತಕ ಲೋಕ’ಕ್ಕಾಗಿ ಬರೆದ ವಿಮರ್ಶೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುವೆ
Next post ಸ್ಮಶಾನ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…