ಮಣ್ಣು ಹೊನ್ನಿನ ಗೂಡು
ಮಣ್ಣು ಜೀವದ ಸೂಡು
ಮಣ್ಣು ಹೆಣ್ಣಿನ ಬೀಡು
ಮಣ್ಣು ಗಂಡಿನ ನಾಡು.
ಮಣ್ಣು ಪಾವನಮೆದು
ತುಳಸಿ ಮೈತ್ರಿಕೆಯಾಯ್ತು
ಬಣ್ಣ ಬಣ್ಣದ ಮಣ್ಣು
ಮೈಗೆ ಪೂಸುವ ಗಂಧ.
ಉಪ್ಪು ಸಿಹಿಕಾರಗಳ
ಷಡ್ರಸಾಹಾರಗಳ
ಜೀವಕೇ ತವರಿದುವು
ಮಣ್ಣು ಸಂಜೀವನವು.
ಮಣ್ಣಿಂದ ಸಾಗರವು
ಸಾಗರದಿ ಮುತ್ತುಗಳು
ಹೊನ್ನು ರನ್ನಗಳೆಲ್ಲ
ಮಣ್ಣಿಂದಮೈಶ್ವರ್ಯ.
ಈ ರಾಜ್ಯ ಸಂಪದವು
ಈ ಸೌಧವರಮನೆಯು
ಸಾಮ್ರಾಜ್ಯ ಸಿಂಹಾಸ
ನಗಳು ಮಾಯದ ಮಣ್ಣು.
ನೀರೊಳಗೆ ಮುಳುಗಿಪುದು
ಆಗಸದಿ ಹಾರಿಪುದು
ನೆಲದಲ್ಲಿ ನಡೆಸುವುದು
ಶಕ್ತಿಗೇ ಗಣಿಯಿದುವು.
ದೇವ ಸೃಷ್ಟಿಯ ಮಣ್ಣು
ಬ್ರಹ್ಮಾಂಡಮಾಯ್ತಿಂದು
ಚಣ ಚಣಕೆ ಹೊಸ ಯುಗವ
ಕರೆಯುತಿದೆ ತೋರುತಿದೆ.
ಸಕಲ ಬಗೆಗಳ ಜೀವ
ಖನಿಜ ಸಂಪದ ಭಾವ
ದೈವಶಕ್ತಿಯು ತೀವಿ
ತುಂಬಿರುವ ವರ ಕಣಜ
ಈ ನಾಡು ಈ ಕಾಡು
ಎಂಬ ಭಾವದ ಮಾಯೆ
ಆಸೆ ಕಲಹದಸೂಯೆ
ಮಣ್ಗುಂಟಿ ಪರಿಕಿಸಲು.
ಮಣ್ಣಿಲ್ಲದಿನ್ನಿಲ್ಲ
ನಿತ್ಯವಸ್ತುವೆ ಮಣ್ಣು
ಮನವರಿಯದಿರ್ದೊಡೀ
ಕಣ್ಣರಿಯದೇ ನಿಜವ.
ದೇವರ್ಗೆ ಮಣ್ಣೆಂದ
ರೇನು ಪ್ರೇಮವೊ ಕಾಣೆ
ಅಮೃತವನೆ ಬಿತ್ತಿಹನು
ಜೀವಕಳೆ ತುಂಬುವನು.
ಮಣ್ಣಿಗಿಹ ಸುತ್ಯಾಗ
ಶುಚಿ ಪ್ರೀತಿ ವಾತ್ಸಲ್ಯ
ವೈರಾಗ್ಯಮುಪಕಾರ
ಗುಣವೊಲಿಯಲೆಮಗಿಂದು.
*****