ಜಗದ ತೇಜಮಿದೆಂದು ಇದ ಸಲಹಬೇಕೆಂದು
ಜನನಿಯಾದಳು ತಾಯಿ ನೋವು ಹಲವನು ತಿಂದು
ಹೊಸ ಜೀವವವಳಿಂದ ಕಳೆಗೂಡಿ ಮೈದುಂಬಿ
ಧರೆಗಿಳಿದು ಬಂದಿಹುದು ಅವಳ ಕರುಣೆಯ ನಂಬಿ.
ಗೇಣುದ್ದ ದೇಹದಿಂ ಬಂದ ಶಿಶುವಂ ಹಾಡಿ
ಬೇನೆಗಳ ಲೆಕ್ಕಿಸದೆ ಬೆಳೆಸಿದಳು ಮೊಲೆಯೂಡಿ
ಕುಲಕೋಟಿಯನು ಕಾಯ್ವ ದಿನಮಣಿಯು ನೀನೆಂದು
ತಾಯಾಗಿ ನೋಡಿದಳು ತನಗೆ ಮಗು ಬೇಕೆಂದು.
ಶಿಶುವಿರುವ ತಾಯಿಯೇ ಧನ್ಯೆ ಲೋಕದೊಳೆಂದು
ಹಲವು ಜನ್ಮಾಂತರದ ಸುಕೃತಫಲ ಮಗುವೆಂದು
ಹೊಳೆ ಹೊಳೆವ ಬೆಳ್ಜಸದ ಕೊಡೆಯೊಳಗೆ ಬಾಳೆಂದು
ನಲವಿಂದ ಹರಸುವಳು ಇರದಿರದೆ ತಾ ಬಂದು.
ತಾಯ ಕಣ್ಣಿನ ಮುತ್ತು-ಹೃದಯ ಕಮಲದ ಮುತ್ತು
ಅವಳ ನಲ್ಮೆಯ ಸ್ವತ್ತು-ಸುಖದ ಸೊಬಗಿನ ಸ್ವತ್ತು
ಅಳುವ ಬಾಯಿಯ ಬಿತ್ತು-ಹವಳ ತುಟಿಗಳ ಮುತ್ತು
ತನ್ನೆದೆಯ ಸವಿಯಿತ್ತು-ನೋಡುವಳು ಮನಮಿತ್ತು.
ಈ ಶಕ್ತಿ ಈ ಬುದ್ದಿ ಈ ತನುವು ಈ ಮನವು
ಅವಳ ಹರಕೆಯ ಹಾಲು ಈ ಕೀರ್ತಿ ಸದ್ಗುಣವು
ಅವಳ ರಕ್ತದ ಪಾಲು, ತಾಯ್ನಿಂದ ನೆಲದೊಲವು
ಭಾರತ ತಪಸ್ವಿನಿಯ ಕಣ್ಣಂಗಳದ ನಲವು.
ನುಂಗುವಳು ತಪ್ಪುಗಳ – ತಿದ್ದುವಳು ತೋರುವಳು
ತೊದಲು ಮಾತುಗಳಿಂದ ಹಿಗ್ಗಿ ಹಿರಿದಾಗುವಳು
ಪೂಗಾಯಿ ಹಣ್ಣಾಗಿ ಸವಿಗೂಡಿತೆನ್ನುವಳು
ಸಿಂಗರಿಸಿ ಮನದಣಿಯೆ ಹಾಡುವಳು ನೋಡುವಳು.
ಈ ಹೂವು ನಿನದೆಂದು ದೇವರಡಿಯೊಳು ನಿಂದು
ಬೆಳಕಿತ್ತು ಬಾಳಿತ್ತು ಇದ ನಿತ್ಯ ನೋಡೆಂದು
ಈ ಜೀವ ಹಸನೆನಿಸಿ ಆತ್ಮದೊಳು ಮೂಡೆಂದು
ಒಂದು ಮನದಲಿ ಬೇಡಿ ಕಾಪಿಡುವಳೆಂದೆಂದು.
ಆರರಿವರೀ ಪ್ರೇಮ ನೇಮ ಧರ್ಮದ ಗುಟ್ಟು
ನಾರಿಯರ ಹೃದಯವೇ ತಾಯಿಯೊಲವಿನ ಮಟ್ಟು
ಒಂದು ಬೀಜವನಿಟ್ಟು ಬೆಳಸುವಳು ಉಸಿರಿಟ್ಟು
ಹಸುರನೆರಚುವಳೆಲ್ಲ ಲೋಕದೊಳು ಕೈಬಿಟ್ಟು.
ಹಲವು ದೇವರನೇಕೆ ಪೂಜಿಸುತ ಅಳಬೇಕು
ನಲಿವ ಮಾತೆಯ ನೋಡಿ ಅವಳ ಪೂಜಿಸಬೇಕು
ಸತ್ಯ ಭೂಮಿಯ ಪುತ್ರಿ ನಮ್ಮ ಬದುಕಿನ ಬೆಳಕು
ಪದಸರೋಜದೊಳೊಂದು ಹೂವನಿರಿಸಲಿಬೇಕು.
*****