ಇತಿಹಾಸದ ಪುಟಪುಟಗಳಲ್ಲಿ
ಸಾವು, ನೋವು, ರಕ್ತ
ಮಾನವರ ಬೇಟೆ ನರಮೇಧ
ಸಾವಿನ ಬಾಯಿಗೆ ಬಲಿಯಾದವರು,
ಉಳಿದು ಊನರಾಗಿ ಭಾರವಾದವರು,
ತೋಪಿನ ಬಾಯಿಗೆ ಎದೆಕೊಟ್ಟು
ವೀರ ಪಟ್ಟವ ಪಡೆದು
ಸ್ವಾತಂತ್ರ್ಯಕ್ಕಾಗಿ ಹಗಲಿರುಳೂ
ಹಂಬಲಿಸಿ ಮಣ್ಣಾದವರು.
ಇವರ ಹೆಂಗಸರಿಗೆ ಉಳಿದದ್ದು
ವಿಧವೆಯರ ಪಟ್ಟ
ಹಸಿವು ದಾರಿದ್ರ್ಯಗಳ ನರ್ತನ,
ಜಾತಿ-ಮತಗಳ ಮತ್ಸರ
ದುಷ್ಟ ಶಕ್ತಿಗಳ ಕೈವಾಡ
ಆಂತರಿಕ ಭಯ
ಅಭದ್ರತೆಯ ಕಾಟ
ಅಸಹಾಯಕ ಜನತೆಯನು
ಬಲಿಕೊಡುವ ಕಸಾಯಿಗಳ
ಕೈಯಿಂದ ಜನರನು
ಹೇಗೆ ಉಳಿಸಿಕೊಳ್ಳಲಿ?
ನನ್ನವರೆ ಒಂದಾಗಿರಿ
ಹಿಂದಿನವರ ತ್ಯಾಗ
ಬಲಿದಾನಗಳ ನೆನೆದು
ಸಾಮ್ರಾಜ್ಯಶಾಹಿಗಳ ಸೊಕ್ಕಡಗಿಸಲು
ಪಟ್ಟಭದ್ರರ – ಕುಟಿಲ ತಂತ್ರಗಳನ್ನು
ಹುಸಿಗೊಳಿಸಲು ಒಂದಾಗಿರಿ
ದೇಶದ ಮೇಲೆ ಹರಡಿದ
ಕಪ್ಪು ಕತ್ತಲೆಯ ಸರಿಸಲು
ಬೆಳಕಿನ ಆಶಾಕಿರಣವಾಗಿರಿ.
*****