ತಿದ್ದಲಾರದ ನಿನ್ನೆ ಕಾಣಲಾರದ ನಾಳೆ
ಇದ್ದರೂ ಇರದಂಥ ವರ್‍ತಮಾನ
ನಿಲ್ಲಲಾರದ ಕಾಲ ಕಾಲ ಕ್ರಮದಲ್ಲಿ
ಮರಳದಿದ್ದರು ಮರಳಿದಂಥ ಅನುಮಾನ
ಬೇಡವೆಂದರು ಬೆನ್ನು ಬಿಡದಂಥ ನೆನಪುಗಳು
ಬೇಕೆಂದು ಬೇಡಿದರು ತಡೆವ ವಿಸ್ಮೃತಿಗಳು
ಕ್ಷಣ ಕೂಡ ನಿಂತಲ್ಲಿ ನಿಲ್ಲಲಾರದ ಮನ
ಯುಗವ ಹಿಡಿಯಲು ಹೋಗಿ ಮುಗಿವಂಥ ಕ್ಷಣ
ಈಗ ಬರದೆಂದರೆ ಬಂದೆಬಿಡುವುದು
ಈಗ ಬರುವುದೆಂದರೆ ಬರದೆ ಇರುವುದು
ಈಗಲೋ ಆಗಲೋ ಒಮ್ಮೆ ಸುರುವಾದುದು
ಅದರ ಕಾಲಕ್ಕೆ ಅದು ಮುಗಿಯದೆ ಇರದು
ಸಿದ್ಧವಾಗಿರು ಸದಾ ಎಂದವರು ಯಾರು
ಪಕ್ವವಾಗಿರು ಸದಾ ಎಂದವರೆ ಅವರು
ಮಾಗಿಯೋ ಸುಗ್ಗಿಯೋ ದಿನ ದಿನವು ನೀ
ಮಧುರವಾಗಿಯೆ ಇರು ಎನ್ನುವರು
ದಿವ್ಯತೆಯ ಮುಹೂರ್ತವ ಹುಡುಕಿ
ಹೋಗುವುದು ಇನ್ನೆಲ್ಲಿಗೆ
ಗಿಡದಲ್ಲಿ ಮುಡಿಯಲ್ಲಿ ಎಲ್ಲಿಯೇ ಇದ್ದರೂ
ಅರಳದಿರುವುದೆ ಸಂಜೆ ಮಲ್ಲಿಗೆ
*****