ತನ್ನ ತನ್ನೊಳಗರಿದು ತೋರಿಸಿ
ತನ್ನನೆಲ್ಲರೊಳರಿದು ಸರ್ವರ
ನನ್ನಿಯಂ ಕಂಡಿಹನು ದೈವವ
ಹಿರಿಮೆಯೆಂತೆಂದು.
ಅನ್ಯರಾವುಟಮಿಲ್ಲ ದೇವರು
ತನ್ನ ಹೊರತಿನ್ನಿಲ್ಲ-ಎಲ್ಲರ
ನನ್ಯಭಾವವ ತಳೆಯೆ ಹೊಳೆವುದು
ಸಕಲಮೇಕತ್ವಂ-
ಸರ್ವಸಂಗ ತ್ಯಾಗ, ತನ್ನಿಂ
ದುರ್ವರೆಯ ಹಿತಮೆಂಬ ಪೆರ್ಮೆಯ
ಗರ್ವ ಬಾರದು ಕೃಷ್ಣನಾಡಿತ
ದಂತೆ ನಿರಪೇಕ್ಷ
ಸರ್ವರೊಳು ಸಂಪ್ರೀತಿ ವಿನಯವ
ನಿರ್ವಹಿಸಿ ಷಡ್ವೈರಿ ವರ್ಜಿಸಿ
ಸರ್ವ ಲೋಕವನರಿವುದೇ ಸರಿ
ಯೆಂದನೀ ತವಸಿ.
ಜಗದ ಲೀಲಾರಂಗದಲಿ ಬಗೆ
ಬಗೆಯ ಮಾನವಕೋಟಿ ರೂಪದೊ
ಳೊಗೆದು ನಡೆಯಿಪ ಸೂತ್ರಧಾರಿಯ
ಹಿರಿಮೆಯಿಂತಂದು.
ಬಗೆ ಬಗೆಯ ಚಿತ್ರಗಳ ತೋರಿಸಿ
ಸೊಗಯಿಸಿದ ಶ್ರೀ ರಾಮಕೃಷ್ಣರ
ಬಗೆಗಳಚ್ಚರಿ ಲೋಕ ಮೆಚ್ಚಿತು
ಅವರಿಗೊಲಿದಿತ್ತು.
*****