ಮಣ್ಣೆತ್ತಿನ ಅಮವಾಸೆ ಬಂತು
ಮಕ್ಕಳಿಗೆ ಸಂತೋಷ ತಂತು
ಶಾಲೆಗೆ ಸೂಟಿಯು ಅಂದು
ಕೂಡಿತು ಮಕ್ಕಳ ದಂಡು
ಹೊರಟರು ಎಲ್ಲರೂ ಊರಿನ ಹೊರಗೆ
ಜೊತೆಗೊಯ್ದರು ಬುಟ್ಟಿ ಕುರ್ಚಿಗೆ
ಹುಡುಕುತ ಹೊರಟರು ’ಹುತ್ತ’
ಕೊನೆಗೂ ಕಣ್ಣಿಗೆ ಬಿತ್ತು
ತಂದರು ಹುತ್ತಿನ ಮಣ್ಣ
ಕುಟ್ಟಿ ಮಾಡಿದರು ಪುಡಿಯನ್ನ
ಕಲಸಲು ಮೆತ್ತಗೆ ಅದನು
ಕುಳಿತರು ಮಾಡಲು ಎತ್ತನು
ತಿದ್ದುತ ತೀಡುತ ಮಾಡಿದರು
ಎತ್ತು ದೋಣಿಯ ಎಲ್ಲರೂ
ಕೊಂಬಿಗೆ ಒಣ ಮೆಣಸಿನಕಾಯಿ
ಇಟ್ಟರು ಕಣ್ಣಿಗೆ ಗುಲಗುಂಜಿ
ಕೊರಳಲಿ ಹಣೆಯಲಿ ಸೊಂಕಿನ ಸರ
ಹಾಕಿ ಮಾಡಿದರು ಸಿಂಗಾರ
ಧರಿಸಲು ಗೆಜ್ಜೆ ಗುಂಬ್ರಿ ಸರ
ಅವಸರದಿಂದ ಭಿಕ್ಷೆಗೆ ಹೊರಟರು
ಮಣ್ಣೆತ್ತಿನ ಒಂದು ಕಾಲನು ಮುರಿದು
‘ಎಂಟೆತ್ತಿನಲ್ಲಿ ಕುಂಟೆತ್ತು ಬಂದಿದೆ
ಜ್ವಾಳ ನೀಡ್ರಮ್ಮೋ’…ಎನ್ನುತರಿವರು
ಹಗಲಿಡೀ ಊರನು ಆಡಿದರು
ಭಿಕ್ಷೆಯ ಕಾಳನು ಅಂಗಡಿಗೆ ಹಾಕಿ
ಕೊಂಡರು ಬೆಲ್ಲ ಮಂಡಾಳು ಪುಠಾಣಿ
ನಡೆದರು ಊರ ಹೊರಗಿನ ಹಳ್ಳಕೆ
ಬಿಟ್ಟರು ಮಣ್ಣೆತ್ತುಗಳನು ನೀರಿಗೆ
ಮರಳಲಿ ದುಂಡಗೆ ಕುಳಿತರು
ತಿನಿಸನು ಟವೆಲಲಿ ಸುರುವಿದರು
ಜಾತಿ ಭೇದ ಮರೆತು ತಿಂದರು
ನೀರನು ಕುಡಿದು ಮೇಲೆದ್ದರು
ಹಾಡುತ ಆಡುತ ಮನೆಯ ಕಡೆಗೆ
ಓಡುತ ಹಬ್ಬವ ಮುಗಿಸಿದರು.
*****