೧
ಕೂಗು ಕೂಗೆಲೆ ಕೊಗಿಲೆಯೆ ನೀ
ಗಳಪುತಿರು ಇರು ಅರಗಿಣಿ!
ಏಗಲೂ ನುಡಿ ಕೊಳಲೆ, ವೀಣೆಯೆ-
ರಾಗಿಸಲಿ ನಿನ್ನಾ ಧ್ವನಿ!
ನಿಮ್ಮ ಉಲುಹಿನೊಳೆಲ್ಲಾ….
ನಿಮ್ಮ ಉಲುಹಿನೊಳೆಲ್ಲ-ಕೇಳುವೆ
ನಮ್ಮವನ ಸವಿಸೊಲ್ಲಾ.
೨
ತುಂಬುದಿಂಗಳ ಬಿಂಬವೇ ನೀ
ಕಾಂಬೆಯೇಕೊಂದೇ ದಿನ?
ಅಂಬರದಿ ನಗುತಿದ್ದರಾಗದೆ-
ಇಂಬು ಬಿಡದೆಯೆ ದಿನದಿನ?
ನಗುಮೊಗದ ನಿನ್ನಲ್ಲಿ….
ನಗುಮೊಗದ ನಿನ್ನಲ್ಲಿ ರಮಣನ
ನಗೆಯ ಬಗೆಯಿಹುದಲ್ಲಿ!
೩
ತನಿರಸವನೆಲ್ಲಿಂದ ತಂದಿರೆ
ಹಣ್ಣು-ಹಂಪಲವೇ?
ಇನಿದನೆಲ್ಲಿಂದೆಳೆದಿಹಿರಿ ಕೆನೆ-
ವಾಲೆ ಜೇಂಗೊಡವೇ?
ಬಲ್ಲೆನಾನಿದರಂದ….
ಬಲ್ಲೆನಾ ತಂದಿರುವಿರಿನಿಯನ
ಬಾಯ ತಂಬುಲದಿಂದ.
೪
ಮುಡಿದ ಮಾಲೆಯ ಮೆಲ್ಲಿತಾಗಿಹ
ಬೆಡಗಿನಲರಿನ ಸೋಂಕದು
ಒಡೆಯನಪ್ಪುಗೆ-ಸೊಗವ ಮನದೆದು-
ರಿಡುವ ಸಾಧನವಹುದಿದು;
ಆದರೇನಿದು ಎಲ್ಲಾ….
ಆದರೇನಿದು ಎಲ್ಲವೂ ಬಲು-
ಬೇಗ ಬಯಲಹುದಲ್ಲಾ!
೫
ಎಲ್ಲವು ತೋರುವುವು ನನ್ನೆದು-
ರಲ್ಲಿ ಮಿಂಚಿನ ಮಾಟವ
ನಲ್ಲನೊಡನಿರೆ ಸವಿನೆನವಿರತ-
ಎಲ್ಲವೀ ಸೊಗದೂಟವ
ಬರುವುದೆಂದಾ ಕಾಲ….
ಬರುವುದೆಂದೋ ಎಂದು ನೂಕುತ
ಲಿರುವೆ ದಿನಗಳನೆಲ್ಲ !
*****