೧
ಅವರ ಬಂಗಲೆಯ ಹಜಾರದ
ನೀರ ಬೋಗುಣಿಯಲಿ ನೆಟ್ಟ
ಅಲ್ಲಲ್ಲ… ಇಟ್ಟ
ಅದು ವಾಸ್ತು ಗಿಡವಂತೆ.
ನಿಂತಿದೆ ತಾನೇ,
ದಯನೀಯವಾಗಿ.
ಅದರ ಮೊಗದ ತುಂಬಾ ದುಗುಡ
ಈಗಲೋ ಆಗಲೋ
ಕಟ್ಟೆ ಒಡೆವಂತೆ.
ದಿಕ್ಕೆಟ್ಟು ನಿಂತ
ಜೀವಂತ ಗಿಡವೂ
ಒಂದು ಬೆದರುಬೊಂಬೆ!
ಅವರ ಷೋಕೇಸಿನ
ನಿರ್ಗಂಧ ಪ್ಲಾಸ್ಟಿಕ್ ಹೂವು
ನಿಸ್ತೇಜ ಫಲಕಗಳ ಜೊತೆಗೆ.
‘ಈ ಗಿಡಕ್ಕೆ
ಮಣ್ಣು ಬೇಡ
ಬಿಸಿಲೂ ಬೇಡ
ಗೊಬ್ಬರವೂ ಹಾಕಬೇಕಿಲ್ಲ
ಕಳೆಯೂ ಬೆಳೆಯುವುದಿಲ್ಲ
ಕೊಳೆಯುವುದೂ ಇಲ್ಲ.
ಪಾತಿ ಮಾಡಬೇಕಿಲ್ಲ.
ಮಣ್ಣು ಹದ ಮಾಡುವಂತಿಲ್ಲ
ಕ್ರಿಮಿ ಕೀಟದ ಸೊಂಕಿಲ್ಲ
ಇರುತ್ತದೆ ಇದ್ದಂತೆ ಹೀಗೇ……
ಅಂಟಿಯೂ ಅಂಟದಂತೆ
ಆದರೂ ಮನೆಗೇ ಅದೃಷ್ಟ’
ಅವರ ಹೆಮ್ಮೆಯ ವ್ಯಾಖ್ಯಾನ.
೨
ಅಲ್ಲಿ ಇದ್ದಷ್ಟೂ ಹೊತ್ತು
ವಾಸ್ತುಗಿಡದ ನಿಟ್ಟುಸಿರು
ಬಿಗಿದು ಕಟ್ಟಿತ್ತು ನನ್ನುಸಿರು.
ವಾಪಸ್ಸು ಹೊರಟವಳಿಗೆ
ಅವರಿಂದ ಅದೇ ಗಿಡದ
ಒಂದು ಟಿಸಿಲು ಉಡುಗೊರೆ
‘ನೀರಲ್ಲಿ ಬಿಸಾಕಿದರೂ ಸಾಕು
ಬೇರೇನೂ ಬೇಕಿಲ್ಲ
ಅನಾಯಾಸ ಅದೃಷ್ಟ’
‘ಇದ್ದಂತೆಯೇ ಇರಲು!’
ನನ್ನ ಪಿಸುಗು
ಅವರ ತಲುಪಲೇಯಿಲ್ಲ.
ಹೊರಗೆ ಬಂದದ್ದೇ
ಬಟ್ಟಂಬಯಲಿನಲಿ
ಮಣ್ಣು ಕೆತ್ತಿ ಪಾತಿ ಮಾಡಿ
ಬೇರನೂರಿ ಗಿಡನೆಟ್ಟೆ
ನಾನೇ ಮಣ್ಣಿನಲಿ
ಊರಿಕೊಂಡಂತೆ.
ಕ್ಷಣಾರ್ಧದಲ್ಲಿ
ಜಡ ಗಿಡಕ್ಕೆ ಜೀವ ಮೂಡಿ
ನೂರಾರು ಕೊಂಬೆ
ಸಾವಿರಾರು ಎಲೆ ಚಿಗುರೊಡೆದು…
ನಗು
ಈಗಷ್ಟೇ…
ವಾಸ್ತು ಅಳೆಯಲು ಹೊರಟಿದೆ!
*****