‘ಯಾವ ಆಟವೇ ಆಗಲಿ, ಅದನ್ನು ಆಡುವಾಗ ಎರಡು ಬಗೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯ ಬಗೆಯ ನಿಯಮಗಳನ್ನು, ಎಂಥ ಆಟಗಾರನೇ ಆಗಲಿ, ಪಾಲಿಸಬೇಕು, ಮುರಿಯುವಂತಿಲ್ಲ. ಎರಡನೆಯ ಬಗೆಯ ನಿಯಮಗಳನ್ನು ಮುರಿಯಬಾರದೆಂದಿಲ್ಲ, ಪಾಲಿಸಲೇಬೇಕು ಎಂದಿಲ್ಲ. ಆದರೆ ಆಟಗಾರ ತಾನು ಗೆಲ್ಲಬೇಕಾದರೆ, ಪಾಲಿಸಲೇಬೇಕಾದ ನಿಯಮಗಳು ಇವು.
ಚದುರಂಗದ ಆಟವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಆಟದಲ್ಲಿ ಬಗೆಬಗೆಯ ಕಾಯಿಗಳುಂಟಷ್ಟೆ. ಒಂದೊಂದು ಬಗೆಯ ಕಾಯಿಗೂ ಒಂದೊಂದು ರೀತಿಯ ನಡುಗೆ ಉಂಟು. ಮಂತ್ರಿ, ಒಂಟೆ, ಕುದುರೆ, ಕಾಲಾಳು ಮುಂತಾದ ಕಾಯಿಗಳನ್ನು ಕೆಲವು ರೀತಿಗಳಲ್ಲಿ ಮಾತ್ರ ನಡೆಸಬಹುದು. ಈ ನಿರ್‍ಬಂಧಗಳು ಚದುರಂಗದ ಆಟದ ನಿಯಮಗಳಲ್ಲಿ ಕೆಲವು. ಈ ರೀತಿಯ ನಿಯಮಗಳು ಮೊದಲನೆಯ ಬಗೆಯವು. ಎಂಥ ಆಟಗಾರನೇ ಆಗಲಿ, ಇವುಗಳನ್ನು ಮುರಿಯಲಾರ.
ಎದುರಾಳಿಯ ಕಾಲಾಳಿರುವ ಮನೆಯ ಪಕ್ಕದ ಮನೆಗೆ ತನ್ನ ರಾಜನನ್ನು ನಡೆಸಬಾರದು ಎಂಬುದು ಚದುರಂಗದಾಟದ ನಿಯಮವೇನೂ ಅಲ್ಲ. ಆದರೆ ಈ ನಿಯಮವನ್ನು ಪಾಲಿಸದಿದ್ದರೆ ಆಟದಲ್ಲಿ ಸೋತಂತೆಯೇ. ಇದು ಎರಡನೆಯ ಬಗೆಯ ನಿಯಮಕ್ಕೆ ಉದಾಹರಣೆ.
ಕೆಲವು ಸಲ ಈ ಎರಡನೆಯ ಬಗೆಯ ನಿಯಮವನ್ನು ಮುರಿದು ವಿಶೇಷ ಪರಿಣಾಮಗಳನ್ನು ಸಾಧಿಸಬಹುದು. ನಮ್ಮದೊಂದು ಕಾಲಾಳನ್ನು ಹೊಡೆಯುವ ಪ್ರಲೋಭನೆಯನ್ನು ಎದುರಾಳಿಯ ಮನಸ್ಸಿನಲ್ಲುಂಟುಮಾಡಿ ಅವನ ಒಂಟೆಯನ್ನು ನಾವು ಹೊಡೆದು ಹಾಕಬಹುದು.
ತಾತ್ತರ್ಯವಿಷ್ಟೆ: ಚದುರಂಗದಾಟದಲ್ಲಿ ಎರಡು ಬಗೆಯ ನಿಯಮಗಳುಂಟು. ಮೊದಲನೆಯ ಬಗೆಯ ನಿಯಮ ಆಟಕ್ಕೆ ಸಂಬಂಧಿಸಿದ್ದು. ಅದನ್ನು ಯಾರೂ ಯಾವಾಗಲೂ ಮುರಿಯುವಂತಿಲ್ಲ. ಎರಡನೆಯ ಬಗೆಯ ನಿಯಮ ಆಟಗಾರ ತನ್ನ ಗೆಲುವಿನ ದೃಷ್ಟಿಯಿಂದ ಕೆಲವು ಸಲ ಪಾಲಿಸಿ, ಕೆಲವು ಸಲ ಮುರಿದು ಹಾಕುವಂತಹುದು.’
ಈ ಉದ್ಧರಣೆಯನ್ನು ನಾನು ಎಚ್. ಎಸ್. ಬಿಳಿಗಿರಿಯವರ ‘ಭಾಷೆ ಮತ್ತು ಆಟ’ ಎಂಬ ಲೇಖನದಿಂದ ಎತ್ತಿಕೊಂಡಿದ್ದೇನೆ. ‘ಶಿವನಿಗೆ ಮೂರೈ ನನಗೋ ನಾಲ್ಕೈ’ (ಶಿವನಿಗೆ ಮೂರು ’eye’ ಅರ್ಥಾತ್ ಕಣ್ಣು; Biligiriಗೆ ನಾಲ್ಕು ’i’!) ಎಂದ ಈ ಭಾಷಾವಿಜ್ಞಾನಿ ಅದೆಷ್ಟು ಸೊಗಸಾಗಿ ಅತ್ಯಂತ ಕ್ಲಿಷ್ಟವಾದ ವಿಚಾರಗಳನ್ನೂ ವಿವರಿಸಬಲ್ಲರು ಎಂಬುದಕ್ಕೆ ಉದಾಹರಣೆಯಾಗಿ. ಭಾಷಾವಿಜ್ಞಾನವೆಂದರೆ ಆಲಸ್ಯ ಬರಿಸುವ ಜ್ಞಾನಶಾಖೆ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ಚಾಲೆಂಜ್ ಮಾಡುವ ಹಾಗೆ ಬಿಳಿಗಿರಿಯವರು ಬರೆಯುತ್ತಾರೆ. ಯಾಕೆಂದರೆ ಅವರು ಮೂಲತಃ ಕವಿ ಹಾಗೂ ರಸಿಕರು. ಆಟದಲ್ಲಿರುವಂತೆ ಭಾಷೆಯಲ್ಲೂ ಪಾಲಿಸಲೇಬೇಕಾದ ನಿಯಮವು ಹಾಗೂ ಮುರಿಯಬಹುದಾದ ನಿಯಮ ಎಂಬ ಎರಡು ಬಗೆಗಳಿವೆ ಎನ್ನುತ್ತಾರೆ. ಉದಾಹರಣೆಗೆ, ಕರ್ತೃ ಮತ್ತು ಕ್ರಿಯಾಪದಗಳು ಲಿಂಗವಚನಗಳಲ್ಲಿ ಸಂಗತವಾಗಿರಬೇಕು ಎನ್ನುವುದು ಯಾರೂ ಮುರಿಯಲಾಗದ ನಿಯಮ: ‘ನಾನು ನೆನ್ನೆ ಬಂದೆ’ ಎನ್ನುವುದು ನಿಯಮಬದ್ಧ: ‘ನಾನು ನಿನ್ನೆ ಬಂದೆವು’ ಎನ್ನುವುದು ಅಲ್ಲ. ಈ ನಿಯಮವನ್ನು ಮುರಿದರೆ ಭಾಷೆಯನ್ನೇ ಧಿಕ್ಕರಿಸಿದಂತೆ. ಆದರೆ ‘ಬೆಟ್ಟವನ್ನು ಇಲಿ ನಂಗಿತು’ ಎಂಬ ವಾಕ್ಯ ಕೂಡಾ ಈ ನಿಟ್ಟಿನಲ್ಲಿ ಸರಿಯಾಗಿದೆ: ಎಂದರೆ ಅದು ಪಾಲಿಸಲೇಬೇಕಾದ ಯಾವುದೇ ನಿಯಮವನ್ನು ಮುರಿದಿಲ್ಲ; ಅದು ಕನ್ನಡವಲ್ಲ ಎಂದು ಹೇಳುವಂತೆಯೂ ಇಲ್ಲ. ಆದರೂ ವಾಕ್ಯ ಯಾಕೆ ವಿಚಿತ್ರವೆನಿಸುತ್ತದೆ? ಯಾಕೆಂದರೆ ಬೆಟ್ಟವನ್ನು ಇಲಿ ನುಂಗಲಾರದು ಎನ್ನುತ್ತದೆ ನಮ್ಮ ಸಾಮಾನ್ಯ ಜ್ಞಾನ. ಇಲ್ಲಿ ಮುರಿದಿರುವುದು ಎರಡನೆಯ ತರದ ನಿಯಮವನ್ನು. ಇಂಥ ಹಲವಾರು ಉದಾಹರಣೆಗಳನ್ನು ಕೊಡುತ್ತ, ಬಿಳಿಗಿರಿ ಅನ್ನುವುದು: ‘ಎರಡನೆಯ ಬಗೆಯ ನಿಯಮವನ್ನು ಮುರಿದರೆ, ತಪ್ಪೇನೂ ಇಲ್ಲ. ವಿಚಿತ್ರವಾಗಿ ಕಾಣಬಹುದು ಅಷ್ಟೆ. ಮೊದಲನೆಯ ಬಗೆಯ ನಿಯಮವನ್ನು ಮುರಿದರೆ, ಕನ್ನಡವೇ ಆಗುವುದಿಲ್ಲ.
ನಂತರ: ‘ಚದುರಂಗದಾಟದಲ್ಲಿ ಎರಡನೆಯ ಬಗೆಯ ನಿಯಮವನ್ನು ಕೆಲವು ಸಲ ಮುರಿದು ವಿಶೇಷ ಪರಿಣಾಮವನ್ನು ಸಾಧಿಸುತ್ತೇವೆಯಷ್ಟೆ. ಭಾಷೆಯಲ್ಲೂ ಇದು ಸಾಧ್ಯ. ಈ ಸಾಧ್ಯತೆಯನ್ನೇ ಕವಿ ಉಪಯೋಗಿಸಿಕೊಳ್ಳುವುದು. ಭಾಷೆಯ ಸಾಧಾರಣ ಉಪಯೋಗಕ್ಕೂ, ಕವಿಯ ಉಪಯೋಗಕ್ಕೂ ಇಲ್ಲೆ. ಕವಿಯಾದವನಿಗೆ ಎರಡನೆಯ ಬಗೆಯ ನಿಯಮಗಳನ್ನು ಮುರಿಯುವುದೇ ಕಸಬು. ಈ ನಿಯಮೋಲ್ಲಂಘನೆಯಿಂದಲೇ ಆತ ವಿಶೇಷ ಪರಿಣಾಮಗಳನ್ನುಂಟು ಮಾಡುವುದು.’ ಹೀಗಂದು, ‘ಈ ಮಾತುಗಳಿಗೆ ಉದಾಹರಣೆಗಳನ್ನು, ನನಗಿಂತಲೂ ಹೆಚ್ಚು ಕಾವ್ಯ ಪರಿಚಯವುಳ್ಳ ಓದುಗರೇ ಕೊಟ್ಟುಕೊಳ್ಳಬಹುದು’ ಎಂದು ಬಿಳಿಗಿರಿ ಚೆಂಡನ್ನು ನಮ್ಮ ಅಂಗಳಕ್ಕೆ ಎಸೆಯುತ್ತಾರೆ. ಒಬ್ಬೊಬ್ಬ ಓದುಗನಿಗೂ ತನ್ನದೇ ಆದೆ ಉದಾಹರಣೆಗಳಿರಬಹುದು. ನನಗೆ ತಟ್ಟನೆ ನೆನಪಾಗುವುದು, ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತ” ಎನ್ನುವ ಹಾಡು!
‘ಭಾಷೆ ಎಂಬ ಆಟ’ ಮೊತ್ತಮೊದಲು ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾಯಿತು (೧೯೬೭), ನಂತರ ‘ವರಸೆಗಳು’ ಎಂಬ ಲೇಖನ ಸಂಕಲನದಲ್ಲಿ (ಪ್ರಕಟಣೆ: ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ, ಬೆಂಗಳೂರು, ೧೯೯೫). ಇದೇ ರೀತಿ ವಿದ್ವತ್ಪೂರ್ಣವೂ ಸ್ವಾರಸ್ಯಕರವೂ ಆದ ಹಲವು ಲೇಖನಗಳನ್ನು ಈ ಸಂಕಲನದಲ್ಲಿ ಕಾಣಬಹುದಾಗಿದೆ. ಭಾಷೆ ಮತ್ತು ಛಂದಸ್ಸಿಗೆ ಸಂಬಂಧಪಟ್ಟ ಈ ಲೇಖನಗಳನ್ನು ಓದುವವರಿಗೆ ಬೆಳಕಿನ ಅದ್ಭುತಲೋಕವೊಂದನ್ನು ಪ್ರವೇಶಿಸಿದ ಅನುಭವ ಉಂಟಾಗುವುದರಲ್ಲಿ ಸಂದೇಹವಿಲ್ಲ. ಆದರೆ ಇಲ್ಲಿ ನಾನು ‘ಭಾಷೆ ಎಂಬ ಆಟ’ದಲ್ಲಿ ಬಿಳಿಗಿರಿ ಹೇಳುವ ಎರಡನೆಯ ನಿಯಮೋಲ್ಲಂಘನೆಯ ಬಗ್ಗೆ ವಿಚಾರವನ್ನು ಮುಂದೊತ್ತುವುದಕ್ಕೆ ಬಯಸುತ್ತೇನೆ. ಚದುರಂಗದಾಟದ ಸಾದೃಶ್ಯಕ್ಕೆ ತಾವು ಸಿ. ಇ. ಬೇಝೆಲ್ ಎಂಬವರಿಗೆ ಆಭಾರಿಯೆಂದು ಮತ್ತು ಬೇಝೆಲರಿಗಿಂತ ಭಿನ್ನವಾದ ರೀತಿಯಲ್ಲಿ ಅದನ್ನು ಉಪಯೋಗಿಸುತ್ತಿದ್ದೇನೆಂದು ಅವರು ಪುಸ್ತಕದ ಅನುಬಂಧದಲ್ಲಿ ಹೇಳುತ್ತಾರೆ. ಅದು ಮುಖ್ಯವಲ್ಲ. ಈ ಸಾದೃಶ್ಯ ಯಾಕೆ ಕಾಡುತ್ತಿದೆಯೆಂದರೆ ಕೇವಲ ಭಾಷೆಗೂ ಅಲ್ಲ, ಸಾಹಿತ್ಯಕ್ಕೂ-ಪ್ರಾಯಶಃ ಬದುಕಿಗೇ? – ಇದೊಂದು ಮಾತೃಕಾಸ್ವರೂಪವಾಗಿ ಅನಿಸುವುದರಿಂದ. ಚದುರಂಗದಾಟದ ಉದ್ದೇಶ ಎದುರಾಳಿಯನ್ನು ಸೋಲಿಸಿ ನಾವು ಗೆಲ್ಲುವುದು; ಎದುರಾಳಿಯನ್ನು ಸೋಲಿಸಬೇಕಾದರೆ ನಾವು ಈ ಎರಡನೆಯ ನಿಯಮವನ್ನು ಆಗಾಗ್ಗೆ ಉಲ್ಲಂಘಿಸುತ್ತಿರಬೇಕು: ಎಂದರೆ ಎದುರಾಳಿಗೆ ಸುಳ್ಳು ನಿರೀಕ್ಷೆಗಳನ್ನು ಹುಟ್ಟಿಸಿ ಅದರ ಲಾಭಪಡೆಯುವುದು. ಇದೇ ಆಟದ ವರಸೆ! ಚದುರಂಗದಲ್ಲಿ ಮಾತ್ರವಲ್ಲ; ಟೆನಿಸ್, ವಾಲಿಬಾಲ್, ಬಾಕ್ಸಿಂಗ್ ಮುಂತಾದ ಯಾವುದೇ ಆಟದಲ್ಲೂ-ಉಳಿದೆಲ್ಲವೂ ಸಮನಾಗಿದ್ದಾಗ-ಹೀಗೆ ಆಡಿದವರೇ ಗೆಲ್ಲುವುದು. ಟೆನಿಸ್‌ನಲ್ಲಿ ಏಸ್ ಹೊಡೆಯುವವರು ಎದುರಾಳಿ ನಿರೀಕ್ಷಿಸದ ಕಡೆಗೇ ಹೆಚ್ಚಾಗಿ ಹೊಡೆಯುವುದು. ಅದೇ ಒಂದೆಡೆಯಿಂದ ಇನ್ನೊಂದೆಡೆಗೆ ಚೆಂಡನ್ನು ಹೊಡೆಯುವ ರ್‍ಯಾಲಿಯಲ್ಲೂ, ಆಟ ಮುಂದುವರಿದಂತೆ ಒಬ್ಬೊಬ್ಬರೂ ಇನ್ಕೊಬ್ಬನು ನಿಯಂತ್ರಿಸಲಾರದ ಜಾಗಕ್ಕೆ ಚೆಂಡನ್ನು ಕಳಿಸಲು ಕಾದುಕೊಂಡಿರುವುದು ವೀಕ್ಷಕರಿಗೆ ಗೊತ್ತಾಗುತ್ತದೆ. ಇಬ್ಬರು ಆಟಗಾರರಿಗೂ ಎದುರಾಳಿಯ ತಂತ್ರದ ಅರಿವಿದ್ದರೂ, ಒಬ್ಬನ ನಿರೀಕ್ಷೆ ಸುಳ್ಳಾಗಿ ಇನ್ನೊಬ್ಬನ ವರಸೆ ಮೇಲುಗೈಯಾಗುತ್ತದೆ. ಬಾಕ್ಸಿಂಗ್‌ನಲ್ಲಿ ಆಟಗಾರರು ಒಂದೆಡೆ ಕೈ ಬೀಸಿ ಇನ್ನೊಂದೆಡೆ ಪಂಚ್ ಕೊಡುವುದು ಮಾಮೂಲಿ. ಆಟದಂತೆ ಯುದ್ಧರಂಗದಲ್ಲೂ ವಿರೋಧಿ ಪಡೆಗಳಿಗೆ ಹುಸಿ ನಿರೀಕ್ಷೆಗಳನ್ನು ಅವನ್ನು ಸೋಲಿಸುವುದು ಒಂದು ಯುದ್ಧತಂತ್ರ. ನೆಪೋಲಿಯನ್ ರಶಿಯಾದ ಮೇಲೆ ಆಕ್ರಮಣ ನಡೆಸಿದ ಸಂದರ್ಭ ರಶಿಯನ್ ಜನರಲ್ ಮಿಖೈಲ್ ಕುಟುಝೋವ್ ಅನುಸರಿಸಿದ ಯುದ್ಧತಂತ್ರ ಜಗತ್ಪ್ರಸಿದ್ಧವಾದ್ಧು: ಫ್ರೆಂಚ್ ಪಡೆಗಳು ಮೋಸ್ಕೋ ಪ್ರವೇಶಿಸಿದಾಗ ಅವರಿಗೆ ಎದುರಾಳಿಗಳೇ ಇರಲಿಲ್ಲ; ಯಾಕೆಂದರೆ ಇಡೀ ಮೋಸ್ಕೋ ಬಹುತೇಕ ಖಾಲಿಯಾಗಿತ್ತು! ಫ್ರೆಂಚ್ ಪಡೆಗಳಿಗೆ ತಿನ್ನುವುದಕ್ಕೆ ಆಹಾರ ಕೂಡಾ ಇರಲಿಲ್ಲ. ಕುಟುಝೋವ್ ಫ್ರೆಂಚರನ್ನೆದುರಿಸಿದ್ದು ರಶಿಯಾದ ಚಳಿಯನ್ನು ತಡೆಯಲಾರದೆ ಆಕಮಣಗಾರರು ಮರಳುತ್ತಿದ್ದ ಸಂದರ್ಭದಲ್ಲಿ.
ಹೀಗೆ ಬಿಳಿಗಿರಿಯವರು ಹೇಳುವ ಎರಡನೆಯ ನಿಯಮ ಮೂಲತಃ ತಂತ್ರಕ್ಕೆ ಸಂಬಂಧಿಸಿದುದಾಗಿದೆ. ಬಹುಶಃ ಆರ್ಥಿಕ, ರಾಜಕೀಯ ಮುಂತಾದ ಸ್ಪರ್ಧಾತ್ಮಕ ಬದುಕಿನ ಯಾವುದೇ ರಂಗದಲ್ಲೂ ಗೆಲುವು ಇಂಥ ವರಸೆಗಳ ಮೇಲೆ ನಿಂತಿದೆ. ಇದನ್ನೇ ಡಾರ್ವಿನ್ survival of the fittest ‘ತಾಳಿದವ ಬಾಳಿಯಾನು’ ಎಂದು ಕರೆದ. (ಡಾರ್ವಿನ್ನ ಭಾಷೆಯಲ್ಲಿ ಫಿಟ್ಟೆಸ್ಟ್ ಎನ್ನುವುದು ಕೇವಲ ದೈಹಿಕ ಶಕ್ತಿಗೆ ಅಲ್ಲ, ಅದು ಯುಕ್ತಿಯೂ ಆಗುತ್ತದೆ.) ಆದರೆ ನಾಗರಿಕ ಜೀವನ ಇದನ್ನು ಎದುರಿಸುತ್ತ, ವ್ಯಕ್ತಿಗಿಂತ ಸಮಷ್ಟಿ ಮುಖ್ಯ ಎಂಬ ತತ್ವದ ಮೇಲೆ ಬೆಳೆದು ಬಂದಿದೆ. ಇತರರ ಏಳಿಗೆಗಾಗಿ ವೈಯಕ್ತಿಕ ಸುಖವನ್ನು ಬಲಿಗೊಡುವುದು ನಾಗರಿಕತೆಯ ಪರಮೋಚ್ಛ ಆದರ್ಶ: ಹಲವು ಧರ್ಮಗಳು ಕೂಡಾ ಇದನ್ನೇ ಒಂದು ಮೌಲ್ಕವಾಗಿ ಪ್ರತಿಪಾದಿಸಿವೆ. ಇದನ್ನು ನಾವೆಲ್ಲ ಅನುಸರಿಸುತ್ತೇವೆ ಎಂದಲ್ಲ: ವಾಸ್ತವದಲ್ಲಿ ಹೆಚ್ಚಿನ ಮಂದಿಯೂ ಸ್ಚಾರ್ಥಪರರಾಗಿಯೇ ಇರುತ್ತಾರೆ. ಎಂದರೆ, ಬದುಕನ್ನೊಂದು ವೈಯಕ್ತಿಕ ಗೆಲುವಾಗಿ ತೆಗೆದುಕೊಳ್ಳುವುದು. ಇಂಥ ಕಡೆ ತಾನು ಮತ್ತು ತನ್ನ ಕುಟುಂಬ ಬಿಟ್ಟು ಉಳಿದವರೆಲ್ಲ ಪ್ರತಿಸ್ಪರ್ಧಿಗಳಾಗಿ ಕಾಣಿಸುತ್ತಾರೆ. ಹಾಗೂ ಪ್ರತಿದಿನವೂ ಆ ಪ್ರತಿಸ್ಪರ್ಧಿಗಳನ್ನು ಸೋಲಿಸುವ ತಂತ್ರದಲ್ಲಿ ನಾವು ನಿರತರಾಗುತ್ತೇವೆ. ಕ್ಯೂ ನಿಲ್ಲುವುದು ಬಿಳಿಗಿರಿ ಹೇಳುವ ಮೊದಲನೆಯ ತರದ ನಿಯಮ; ಆದರೆ ಕ್ಯೂ ನಿಲ್ಲಲು ಹಿಂದಿನ ರಾತ್ರಿಯೇ ಹೋಗುವುದು ಎರಡನೆಯ ತರದ ವರಸೆ. ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಕ್ಕೆ ನಾವು ಮುಜುಗರಪಡುತ್ತೇವೆ ಎನ್ನುವುದು ಇದನ್ನೆಲ್ಲ ಮೀರಿದ ಯಾವುದೋ ಒಂದು ಮೌಲ್ಯ ಇನ್ನೂ ನಮ್ಮ ಆದರ್ಶವಾಗಿರುವುದಕ್ಕೆ ಸಾಕ್ಷಿ.
ಆದರೂ ಸಾವು ನೋವು, ಸಾಮಾಜಿಕ ಅನ್ಯಾಯ, ವರ್ಗ ಶೋಷಣೆ ಮುಂತಾದವಕ್ಕೆ ಎಡೆಗೊಡದ ಕಡೆಯೆಲ್ಲ ಸ್ಪರ್ಧಾತ್ಮಕತೆಯನ್ನು ನಾಗರಿಕ ಸಮಾಜ ಪ್ರೋತ್ಸಾಹಿಸುತ್ತದೆ. ಇಲ್ಲಿ ಸಾಹಿತ್ಯದ ಸ್ಥಾನವೇನು ಎಂದು ಕೇಳಬೇಕಾಗುತ್ತದೆ. ಸಾಹಿತ್ಯವು ಭಾಷೆಯನ್ನು ಉಪಯೋಗಿಸುವುದರಿಂದ ಬಿಳಿಗಿರಿಯವರು ಹೇಳುವ ಎರಡನೆಯ ತರದ ನಿಯಮೋಲ್ಲಂಘನೆಗೆ ಅದರಲ್ಲಿ ಅವಕಾಶವಿದೆ. ಶರೀಫ್ ಸಾಹೇಬರು ‘ಕೋಡಗನ ಕೋಳಿ ನಂಗಿತ್ತ’ ಎಂದಾಗ ಅದೊಂದು ಮಾತಿನ ವರಸೆಯಾಗಿತ್ತು. ಅದರ ಉದ್ದೇಶ ಅಥವಾ ಅರ್ಥ ಏನಿದ್ದರೂ ನಮ್ಮ ಸಿದ್ಧ ಪ್ರತಿಸ್ಪಂದನೆಗಳಿಗೆ ಘಾತವೊದಗಿಸುವ ಪರಿ ಅದು. ಹಾಗಿದ್ದರೂ ಶರೀಫ ಸಾಹೇಬರು ಕ್ರಿಯಾಶೀಲರಾಗಿದ್ದ ಭಕ್ತಿಪರಂಪರೆಯಲ್ಲಿ ಅದನ್ನೊಂದು ಹೊಚ್ಚ ಹೊಸ ವರಸೆಯೆನ್ನುವಂತೆಯೂ ಇಲ್ಲ; ಕಾರಣ ವಚನಕಾರರಿಂದ ಮೊದಲಾಗಿ ಕೀರ್ತನಕಾರರತನಕ ಇಂಥ ಬೆಡಗಿನ ಮಾತು ಆ ಪರಂಪರೆಗೆ ಸೇರಿದ್ದೇ ಆಗಿದೆ. ಶರೀಫರ ಹೊಸತನವೆಂದರೆ ಅವರು ಇದುವರೆಗೆ ಇಂಥ ಹಾಡುಗಳಿಂದ ದೂರವೇ ಇದ್ದ ಕೋಳಿ, ಕೋಡಗ, ಮುದುಕಿ, ಗಿರಣಿ ಮುಂತಾದ ವಸ್ತುಪ್ರಪಂಚವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡುದು.
ಸಾಹಿತ್ಯ ಅಥವಾ ಕಲೆಗೆ ಚದುರಂಗದಾಟದಂತೆ ಎದುರಾಳಿಗಳಿಲ್ಲ; ಆದ್ದರಿಂದ ಅವು ಯಾರ ವಿರುದ್ಧವೂ ಗೆಲ್ಲುವ ಹುನ್ನಾರ ನಡೆಸುವುದಿಲ್ಲ. ಆದರೂ ಚದುರಂಗದ ಹೋಲಿಕೆಯಿರುವುದು ಬಿಳಿಗಿರಿಯವರೆನ್ನುವ ಆ ಎರಡನೆಯ ತರದ ಉಲ್ಲಂಘನದಲ್ಲಿ. ಈಮಟ್ಟಿಗೆ ಸಾಹಿತ್ಯವೂ ಒಂದು ಆಟವೇ. ಆದರೆ ಸಾಹಿತ್ಯ ಉಲ್ಲಂಘಿಸುವುದು ಏನನ್ನು? ನಮ್ಮ ಸಿದ್ಧ ಪ್ರಣಾಳಿಕೆಗಳನ್ನೇ? ಪೂರ್‍ವಾಗ್ರಹಗಳನ್ನೇ? ಹೊಸತೊಂದು ರೂಪಕವನ್ನು ಹೊಸೆಯುವಾಗ ನಮಗೆ ಎರಡು ವಿಷಯಗಳ ನಡುವೆ ಇದುವರೆಗೆ ಕಂಡಿರದ ಸಾಮ್ಯ ಗೋಚರಿಸುತ್ತದೆ: ಅದೂ ಒಂದು ಲಂಘನವೇ. ಓದುಗರ ಅರಿವನ್ನು ಹೆಚ್ಚಿಸುವ, ಜಾಡ್ಯವನ್ನು ಓಡಿಸುವ ಎಲ್ಲಾ ಪರಿಗಳೂ ಬಿಳಿಗಿರಿಯವರ ಈ ಎರಡನೆಯ ವರಸೆಗೆ ಸೇರುತ್ತವೆ. ಹಾಗಿದ್ದರೆ ವಾಸ್ತವವಾದಿ ಸಾಹಿತ್ಯದ ರೀತಿಯೇನು? ಎಂದು ಕೇಳಬಹುದು. ಯಾವುದೊಂದು ರೂಪಕವನ್ನೂ ಬಳಸದೆ, ಯಾವುದೇ ಸ್ಪಷ್ಟ ಉಲ್ಲಂಘನೆಯನ್ನೂ ಮಾಡದೆ, ನಮಗೆ ಬೆರಗುಂಟುಮಾಡುವ ಸಾಹಿತ್ಯವೂ ಇದೆ. ಇಂಥ ಸಾಹಿತ್ಯವೂ ಅದು ನೀಡುವ ಕೇವಲ ವಸ್ತುವಿವರಗಳಿಂದಲೇ ನಮ್ಮನ್ನು ಎಚ್ಚರಿಸಬಹುದು.
*****