ಹುಟ್ಟಿ ಬರಲಾರಿರಾ ಇನ್ನೊಮ್ಮೆ
ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ
ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ
ಹೊಸಬೆಳಕಾಗಿ ಹೊಸದಾರಿ ತೋರಲು
ಹುಟ್ಟಿಬರಲಾರಿರಾ ಇನ್ನೊಮ್ಮೆ?
ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ
‘ಕೈಗಾರೀಕರಣ ಇಲ್ಲವೆ ನಾಶ’ ಎನ್ನುತ್ತಾ
ಶತಮಾನದ ಹಿಂದೆಯೇ ಬಡಿದೆಬ್ಬಿಸಿದ್ದ ನಿಮ್ಮ ಕೆಚ್ಚು
ಮರೆಯಾಗಿಲ್ಲ ಕನ್ನಡಿಗರ ಮನದಿಂದ.
ಬಡತನದ ನೋವಲ್ಲೂ ಸ್ವಪ್ರತಿಭೆಯ ಅರಳಿಸಿ,
ಇಂಜಿನಿಯರ್ ಆಗಿ ಬುದ್ಧಿವಂತಿಕೆಯಿಂದ ಮೆರೆದು
ತ್ರಿವಿಕ್ರಮನಂತೆ ಎದ್ದು ನಿಂತ ನಿಮ್ಮ ಛಲ
ಮರೆಯಾಗಿಲ್ಲ ಕನ್ನಡಿಗರ ಮನದಿಂದ.
ಹುಟ್ಟಿದ್ದು ಕನ್ನಡ ನಾಡಿನೊಂದು ಹಳ್ಳಿಯಲಿ.
ಮಾತೃಭಾಷೆ ತೆಲುಗು, ಆಂಗ್ಲ ಭಾಷಾ ಪ್ರವೀಣ.
ಕನ್ನಡಿಗನಾಗಿ ಮೆರೆದ ನಿಮ್ಮ ಕನ್ನಡನಾಡಿನಭಿಮಾನ
ಮರೆಯಾಗಿಲ್ಲ ಕನ್ನಡಿಗರ ಮನದಿಂದ.
ಕನ್ನಡ ನಾಡಿನ ಪಾಶ ನಿಮ್ಮನ್ನೆಳೆದಿತ್ತು ಸದಾ
ಮೈಸೂರು ದಿವಾನರಾಗಿ, ಕೈಗಾರಿಕಾ ಬೆಳವಣಿಗೆಯ ರೂವಾರಿಯಾಗಿ
ನಾಡಿನ ಭವಿಷ್ಯ ಬರೆದ ನಿಮ್ಮ ದೂರದರ್ಶಿತ್ವ
ಮರೆಯಾಗಿಲ್ಲ ಕನ್ನಡಿಗರ ಮನದಿಂದ.
ಉಕ್ಕಿ ಹರಿದ ಕಾವೇರಿಗೆ ಕಟ್ಟಿದ ಕನ್ನಂಬಾಡಿ ಕಟ್ಟೆ
ಸೌಂದರ್ಯದೇವತೆಯ ಸೆರೆಹಿಡಿದ ಬೃಂದಾವನ
ಹೊಸಹುಟ್ಟು ಪಡೆದು ಕಬ್ಬಿನ ಕಣಜವಾದ ಮಂಡ್ಯ
ಭದ್ರಾವತಿಯ ಉಕ್ಕಿನ ಕಾರ್ಖಾನೆ, ಕಟ್ಟಿದ ವೃತ್ತಿ ಶಿಕ್ಷಣ ಸಂಸ್ಥೆಗಳು,
ಕೋಲಾರದ ಚಿನ್ನದ ಗಣಿ ಉಳಿಸಲು ತೊಟ್ಟ ಪಣ
ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಲು ತೋರಿದ ದಾರಿ
ಮರೆಯಾಗ ಬಿಡುವುದೇ ನಿಮ್ಮ ನೆನಪ?
ದುಮ್ಮಿಕ್ಕಿ ಹರಿದ ಜಲಶಕ್ತಿಯ ವಿದ್ಯುತ್ ಶಕ್ತಿಯಾಗಿಸಿ ಮನೆಮನೆ ಬೆಳಗಿ,
ವಿಜ್ಞಾನ ತಂತ್ರಜ್ಞಾನದ ಮುನ್ನಡೆಗೆ ಅಂದೇ ನಾಂದಿ ಹಾಕಿ
ಜಾಗತೀಕರಣದ ಅರಿವು ಮೂಡುವ ಮುನ್ನ ಜಗದ್ವಿಖ್ಯಾತರಾಗಿ
ಬ್ರಿಟಿಷರಿಂದ ಸರ್ ಎನ್ನಿಸಿ ಭಾರತರತ್ನವಾಗಿ ಮೆರೆದ ಸರ್. ಎಂ.ವಿ.
ನಾವೆಂತು ಮರೆಯಲಿ ನಿಮ್ಮ?
ನೂರು ವರುಷದ ನಿಮ್ಮ ದುಡಿಮೆ
ನಾಡು ಬೆಳೆದು, ಜನಕೆ ನೆಮ್ಮದಿಯ ಬಾಳು ಕೊಡುವುದರ ಕಡೆಗೆ.
ಮಾದರಿಯಾಗಬೇಕು ಎಲ್ಲ ರಾಜಕಾರಣಿಗಳಿಗೆ ನಿಮ್ಮ ದೇಶಪ್ರೇಮದ ಬದುಕು.
ಮಾದರಿಯಾಗಬೇಕು ಎಲ್ಲ ಕನ್ನಡಿಗರಿಗೆ ನಿಮ್ಮ ನಿಸ್ವಾರ್ಥ ಬದುಕು.
ಮಾದರಿಯಾಗಬೇಕು ಎಲ್ಲ ಮಕ್ಕಳಿಗೆ ನಿಮ್ಮ ವಿದ್ಯಾರ್ಥಿಯ ಬದುಕು.
ನೀವೆಂದೂ ಮರೆಯಾಗಿಲ್ಲ ಕನ್ನಡಿಗರ ಮನದಿಂದ
ವಿಶ್ವೇಶ್ವರಯ್ಯನಂತಹ ಮಗ ಬೇಕೆಂದು ಎಲ್ಲ ತಾಯಂದಿರ ಬಯಕೆ.
ಹರಕೆ, ಬಯಕೆ ನಿಜವಾಗಲಿಲ್ಲ ಇನ್ನೂ ಹುಟ್ಟಲಿಲ್ಲ ಇನ್ನೊಬ್ಬ ವಿಶ್ವೇಶ್ವರಯ್ಯ
ಕಾಯುತ್ತಲೇ ಇದ್ದೇವೆ ಇನ್ನೊಮ್ಮೆ ಹುಟ್ಟಿಬರಲೆಂದು!
ಚಿನ್ನದ ಗಣಿ ಮುಚ್ಚಿದೆ. ಗಣಿಕಾರ್ಮಿಕರಿಂದು ನಿರ್ಗತಿಕರು
ಸಕ್ಕರೆ ನಾಡಿನೆಡೆಗೆ ದೌಡಾಯಿಸಿವೆ ಇರುವೆಗಳ ಸಾಲು ಸಾಲು.
ಜಗದ ಜನರ ಸೆಳೆದ ಬೃಂದಾವನದ ಸೌಂದರ್ಯಕೆ ಮುಪ್ಪಡರುತ್ತಿದೆ.
ಭದ್ರಾವತಿಯ ಉಕ್ಕಿನ ಕಾರ್ಖಾನೆ ನೆಲಕಚ್ಚುತ್ತಿದೆ.
ಕನ್ನಂಬಾಡಿ ಕಟ್ಟೆ ಜರಿಯುವ ಮುನ್ನ,
ನನಸಾದ ನಿಮ್ಮ ಕನಸುಗಳು ಕೊಚ್ಚಿ ಹೋಗುವ ಮುನ್ನ,
ಇರುವೆಗಳು ಹುತ್ತ ಕಟ್ಟುವ ಮುನ್ನ
ಜಾಗತೀಕರಣದ ಭೂತ ಎಲ್ಲ ಕಬಳಿಸುವ ಮುನ್ನ
ಹೊಸ ಬೆಳಕಲಿ ಹೊಸ ದಾರಿ ತೋರಲು
ಹುಟ್ಟಿ ಬರಲಾರಿರಾ ಇನ್ನೊಮ್ಮೆ?
*****