ನಾಗರ ಪಂಚಮಿ
ನಾಡಿಗೆ ಸಂಭ್ರಮ
ತರುವುದು ಹೆಂಗಸರಿಗೆ ಮಹಾ ಹರುಷ
ಎಲ್ಲರ ಮನೆಯಲಿ
ಹುರಿ ಕರಿ ದನಿಯಲಿ
ನಾನಾ ಉಂಡಿ ತಯಾರಿಕೆಯ ಸ್ಪರ್ಶ
ಹುತ್ತವ ಹುಡುಕುತ
ಕಲ್ಲಿನ ನಾಗರ ಕಟ್ಟೆಗೆ
ಧಾವಿಸಿ ಪೂಜಿಸಿ ಎರೆವರು ಹಾಲನ್ನು
ಮಕ್ಕಳು ಮರಿಗಳು
ಹಿರಿಯರಾದಿಯಾಗಿ
ಒಟ್ಟಾಗಿ ಕಳೆವರು ನಗುತಲಿ ಕೆಲೆಯುತ
ಮಕ್ಕಳ ಜೇಬುಗಳು
ತುಂತುಂಬ ಉಂಡಿಗಳು
ತಿನ್ನುತ್ತ ತಿನಿಸುತ್ತ ಸುತ್ತುವರು ಊರನ್ನು
ಉಂಡಿ ಕೊಬ್ಬರಿ
ಕರಜಿಕಾಯಿ ಅಳ್ಳು
ಬೀರುತ ಬೆಸೆಯುವರು ಸಂಬಂಧವನು
ಮರುದಿನ ಶಾಲೆಗೆ
ಉಂಡಿ ಕೊಬ್ರಿ ಮೇಷ್ಟಿಗೆ
ಕೊಡುವರು ಗುರುದಕ್ಷಿಣೆ ಭಕ್ತಿಯಲಿ
ನಸುನಗುತ ಆ ಗುರು
ಪ್ರಸಾದವೆಂದು ಪಡೆವರು
ಗುರು-ಶಿಷ್ಯ ಸಂಬಂಧ ವೃದ್ಧಿಸಲೆಂದು
ಗಂಡಸರು ಜಿದ್ದಿನಲ್ಲಿ
ಹೆಂಗಸರು ಜೀಕಿನಲ್ಲಿ
ಮುಳು ಮುಳುಗೇಳುವರು ತಿಂಗಳು ತನಕ
ಭಾರ ಎತ್ತುತ
ಕುಸ್ತಿಯಾಡುತ
ಗಂಡಸರು ಮೆರೆವರು ಕುಣಿವರು ತಕ ತಕ
ವರ್ಷವು ಮುಗಿದರೂ
ನೆನಪನು ಮರೆಯರು
ನಾಗರಪಂಚಮಿ ನಾಡ ಹಬ್ಬವನು
ಗರ ಗರ ಕೊಬ್ಬರಿ
ಬಟ್ಟಲು ಬುಗುರಿ
ಮಕ್ಕಳು ಮೆಲುಕನು ಹಾಕುವರು
*****