ರಜಾ ದಿನದಂದು
ವೇಳೆ ಕಳೆಯಲೆಂದು
ಪುಟ್ಟ ಪುಟ್ಟಿ ಸೇರಿದರು
ತಮ್ಮ ತೋಟದತ್ತ ನಡೆದರು
ತೋಟದ ದಾರಿ ಮಧ್ಯೆ
ಹರಿಯುತ್ತಿತ್ತು ನದಿ
ನದಿಯ ಮರಳಿನಲ್ಲಿ
ಆಟವಾಡಿದರಲ್ಲಿ
ಪುಟ್ಟ ಹೇಳಿದ ಪುಟ್ಟಿಗೆ
ಮರಳಲಿ ಮನೆ ಕಟ್ಟಲು
ಮರಳಲಿ ಮನೆ ಹೇಗಣ್ಣ?
ಬೇಗ ತಿಳಿಸು ಪುಟ್ಟಣ್ಣ
ಹಸಿಯ ಮರಳಿನ ಮೇಲೆ
ಎಡ ಪಾದವಿಕ್ಕಿ ಕುಳಿತ
ಹಸಿ ಮರಳ ರಾಸಿಯನ್ನು
ಸುರಿದ ಕಾಲ ಮೇಲೆ
ಹಾಕಿಕೊಂಡ ಮರಳನ್ನು
ಕೈಗಳಿಂದ ತಟ್ಟಿದ
ಗಟ್ಟಿಯಾದ ಮರಳ ಗುಡ್ಡೆಯಿಂದ
ಮೆಲ್ಲನೆ ಕಾಲನು ಹೊರ ತೆಗೆದ
ಕಾಲು ತೆಗೆದ ಸ್ಥಳದಲ್ಲಿ
ಮರಳ ಮನೆಯ ಬಾಗಿಲ
ಚೆಂದವಿತ್ತು ನೋಡಲು
ಅದುವೆ ಪುಟ್ಟ ಗುಡಿಸಲು
ಅಣ್ಣ ಮಾಡಿದಂತೆ ಮನೆಯ
ಪುಟ್ಟಿ ಕೂಡ ಮಾಡಿದಳು
ತನ್ನ ಮರಳ ಮನೆಯ ನೋಡಿ
ಕುಣಿದು ಕುಣಿದು ನಲಿದಳು
ಬಿಸಿಲು ಕರಗಿ ಮಬ್ಬು ಮುಸುಕಿತು
ಕಪ್ಪನೆ ಮೋಡ ತೇಲಿ ಬಂದಿತ್ತು
ಅದನು ನೋಡಿದ ಪುಟ್ಟನಿಗೆ
ಬಂದಿತ್ತು ಜೀವ ಬಾಯಿಗೆ
ಕ್ಷಣದಲಿ ಆ ಮೋಡ ಕರಗಿ ನೀರಾಯಿತು
ಲಟ ಪಟ ಹನಿಯ ಸುರಿಸಹತ್ತಿತು
ಅವರ ಮುಂದೆ ಅವರ ಮರಳ ಮನೆ
ಕರಗಿ ಹೋಗಿ ಆಯ್ತು ನೀರ್ಮನೆ
ಮನೆ ಹಾಳಾದುದ ನೋಡಿದ ಪುಟ್ಟಿ
ಅತ್ತಳು ಬಿಕ್ಕಿ ಬಿಕ್ಕಿ
ತಂಗಿಯ ಸಂತೈಸುತ ಅವಳಣ್ಣ
ಅಪ್ಪನ ಬಳಿಬಿಟ್ಟ.
ಜೀವನ ಕೂಡ ಮರಳ ಮನೆ
ಹೀಗೇ ನಶಿಸಿ ಹೋಗುವುದು
ದುಃಖ ಸಂತಸ ಶಾಶ್ವತವಲ್ಲ
ಅರಿತು ನಡೆದರೆ ಸ್ವರ್ಗ ಸಿಗುವುದು
*****