ರತ್ನಸಿಂಹಾಸನದಿ ಮಣಿ ಕಿರೀಟವನಿಟ್ಟು
ತುಂಬಿದೊಡ್ಡೋಲಗದಿ ರಘುವೀರ ಶೋಭಿಸಲು
ಪಕ್ಕದಲಿ ಶ್ರೀಸೀತೆ ಮಂಡಿಸಿರೆ ನಸುನಗುತ
ಸರುವರುಂ ಕಣ್ತುಂಬ ನೋಡುತ್ತ ಸೇವಿಪರು.
ಭರತ ಶತ್ರುಘ್ನರುಂ ಚಾಮರವನಿಕ್ಕುತಿರೆ
ಸುಗ್ರೀವ ಮಾರುತಿ ವಿಭೀಷಣರ್ ಮೊದಲಾಗಿ
ರಘುಪತಿಯನೋಲಗಿಸುತ್ತಿರುವಾಗ ಲಕ್ಷ್ಮಣಂ
ಘೋಳ್ಳೆಂದು ನಕ್ಕನದ ಕೇಳ್ದುದಾ ಸಭೆಯೆಲ್ಲ.
ಹದಿನಾಲ್ಕು ಲೋಕದೊಡೆಯನ ನಿಂದು ಸರ್ವರುಂ
ಭಯದಿಂದ ಗೌರವಿಸುತ್ತಿರುವಾಗ ತಮ್ಮನೇ
ಮಾನವರಿಯದನಂತೆ ನಗುವುದೇ- ಇರಲಿರಲಿ
ವತ್ಸನೇ ನಗಲು ಕಾರಣವೇನು- ಹೇಳೆಂದ.
ಶತಕೋಟಿ ಸೂರ್ಯಪ್ರಕಾಶನೀಂ ಬೆಳಗುತಿರೆ
ರತ್ನಸಿಂಹಾಸನದಿ, ತಾಯಿ ಕೃಪೆಯಿಂ ನೋಡೆ
ಸಕಲರುಂ ಭಕ್ತಿಯಿಂದೋಲೈಸುತಿರುವಾಗ
ಮೂರ್ಖನಾಂ ನಿದ್ರೆಯಿಂ ಮಾಯೆಯೊಳು ಬಳಲುತಿಹೆ.
ಹದಿನಾಲ್ಕು ವತ್ಸರಂ ಎಚ್ಚರಿರೆ ತೂಕಡಿಸಿ
ಬಳಲಿಲ್ಲ ತೊಳಲಿಲ್ಲ. ಸೌಂದರ್ಯ ಮೂರ್ತಿಯಂ
ನೋಡುತಾನಂದಿಸದೆ ನಿದ್ರೆ ಬಂದುದಕೆನಗೆ
ನಗೆ ಬಂತು- ಮೂಢತನಕಾಗಿ ಹರಿ, ಬೇರಿಲ್ಲ.
ಎನಲು ರಘುಪತಿ ನಕ್ಕು ಮನ್ನಿಸಿದ ತಮ್ಮನಂ
ಸರ್ವರುಂ ತಲೆದೂಗೆ ಚಚ್ಚರದಿ ಲಕ್ಷ್ಮಣನ
ಮನವರಿತು ಗೌರವಿಸಿ ರಘುವೀರನನುಜಗಿಂ
ಮಿಗಿಲಾದ ಭಕ್ತರರಾರಿಹರೆಂದು ಹೊಗಳಿದರು.
*****