ಊಟಕ್ಕೆ ಕುಳಿತ
ತಿಮ್ಮನ ಮೊಗವು
ಬಾಡಿ ಹೋಗಿದೆ
ಸೊಪ್ಪಿನ ಸಾರಿನ
ಜೊತೆಗೆ ರಾಗಿ
ಮುದ್ದೆ ನಕ್ಕಿದೆ
ಕಪ್ಪನೆ ಬಣ್ಣದ
ರಾಗಿಮುದ್ದೆ
ನಾನು ತಿನ್ನಲ್ಲ
ಮುತ್ತಿನಂಥ
ಅನ್ನವನ್ನು
ಅಮ್ಮ ಬಡಿಸಲ್ಲ
ರಾಗಿ ತಿಂದು
ನಿರೋಗಿಯಾದ
ಕತೆಯ ಹೇಳ್ತಾಳೆ
ತುಂಬಾ ಶಕ್ತಿಗಾಗಿ
ಮುದ್ದೆ
ತಿನ್ಬೇಕಂತಾಳೆ
ಮುದ್ದೆ ಜೊತೆಗೆ
ಬೇಳೆ ಕಾಳು
ಬೇಯಿಸಿ ಇಡ್ತಾಳೆ
ಹಸಿರು ಸೊಪ್ಪು
ತರಕಾರಿಯೆಲ್ಲ
ನಮ್ಮುಸಿರು ಅಂತಾಳೆ
ನಾಲಗೆ ಬಯಸಿದ
ಪದಾರ್ಥನೆಲ್ಲಾ
ತಿನ್ಬಾರ್ದಂತಾಳೆ
ಅಮ್ಮ ಅಂತೂ
ಒಂದೊಂದ್ ಬಾರಿ
ಡಾಕ್ಷೇ ಆಗ್ತಾಳೆ
ಏನೇ ಆದ್ರೂ
ಅಮ್ಮ ನಮ್ಮ
ಒಳಿತೇ ಬಯಸ್ತಾಳೆ.
*****