ಶಾಲೆಗೆ ಅಂದು ರಜಾ
ರಂಗ ನಿಂಗರಿಗೆ ಮಜಾ
ತಂದೆಗೆ ಸಹಾಯ ಮಾಡಲು
ಬುತ್ತಿ ಹೊತ್ತು ನಡೆದರು
ದಾರಿಯ ಬದಿಗೆ ಹೊಲ
ಹಸಿರು ಮುರಿಯುವ ನೆಲ
ಭರೋ ಎನ್ನುವ ಗಾಳಿಗೆ
ಹೆದರಿದರು ಆ ಘಳಿಗೆಗೆ
ದೂರದಿ ತಂದೆಯ ನೋಡಿದರು
ಕೂಡಲು ಬರ್ಕಿಸೆ ಓಡಿದರು
ಗೂಳಿಯು ಅವರನು ನೋಡಿತ್ತು
ಅಟ್ಟಿಸಿಕೊಂಡೂ ಹೋಗಿತ್ತು
ಆ ದೃಶ್ಯವ ನೋಡಿದ ತಂದೆ
ಅವರನು ಕೊಂದು ಬಿಡುವುದೆಂದೆ
ಕೋಲನು ಹಿಡಿದು ಅರಚುತ್ತ
ಓಡುತ ಬಂದನು ಅವರತ್ತ
ಕೂಗಿ ಕೂಗಿ ಹೇಳುತಲಿದ್ದ
ಬೋರಲು ಮಲಗಿರಿ ಓಡದೇ
ತಂದೆಯ ಮಾತನು ಕೇಳಿದರು
ಇಬ್ಬರು ಹಾಗೆಯೇ ಮಾಡಿದರು
ತಿವಿಯಲು ನೋಡಿದ ಗೂಳಿಗೆ
ಮಕ್ಕಳು ಸಿಗಲಿಲ್ಲ ಕೋಡಿಗೆ
ಅವರನು ದಾಟಿಯೇ ಓಡಿತ್ತು
ಬೆಳೆಗಳ ಮಧ್ಯೆ ಮರೆಯಾಯ್ತು
ತಂದೆ ಬಂದು ಹಿಡಿದೆತ್ತುತಲೆ
ಮಕ್ಕಳಿಗೆ ತಿಳಿ ಹೇಳಿದನು
ಧೈರ್ಯ ಯುಕ್ತಿ ಇದ್ದರೆ ಸಾಕು
ಬಾಳಿಗೆ ಬೇರಿನ್ನೇನು ಬೇಕು?
ತಂದೆಯ ಬಗ್ಗೆ ಹಿಗ್ಗಿದರು
ಬುತ್ತಿಯನ್ನು ಬಿಚ್ಚಿ ತಿಂದರು
ಕೆಲಸದಿ ಸಹಾಯ ಮಾಡಿದರು
ಮನೆ ಕಡೆ ಹೆಜ್ಜೆ ಹಾಕಿದರು
*****