ನಿದ್ದೆಯಲ್ಲಿ ಬಿದ್ದೇಕೆ ಆತ್ಮನೇ ಏಳು ಆಳದಿಂದ
ಏಳು ಏಳು ಜಗದಗ್ನಿಲಿಂಗವೇ ದೇವಕಿರಣದಂದ
ಎತ್ತು ನಿನ್ನ ಮನ, ಎತ್ತು ಹೃದಯಧನ, ಏರು ಯಶದ ತೆಂಗು
ತಿಮಿರ-ಗರ್ಭದರ್ಭಕನೆ ಸೂರ್ಯನೇ `ತತ್ತ್ವಮಸಿ’ಯ ನುಂಗು
ಏಕ ವಿಶ್ವ, ಸರ್ವಾತ್ಮಸೃಷ್ಟಿಯೇ ಏಳು ಯೋಗದಿಂದ
ಜಡಪ್ರಕೃತಿಯಲಿ ಏಕೆ ತಿರುಗುತಿಹೆ ಮೂಕಚಕ್ರದಂದ
ದೇವಜನಿತ ನೀನೆನಿಸಿ ಏಳು, ತಿಳಿ ನೀನು ಮರಣರಹಿತ
ಕಾಲ ಮೀರಿ ನೀ ಮರಳು ನಿನಗಹುದು ಅಮರ-ಪಟ್ಟ ವಿಹಿತ.
*****