ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ,
ಕನ್ನಡಿಗರಿಗೇನಿದೆ, ಬರಿ ಕಂಬನಿಗಳ ಕಣ್ಣೆವೆ!
೧
ಈ ಹಬ್ಬದ ಬಯಕೆಯಿಂದ ನಾವು ದುಡಿದುದೆಷ್ಟು!
‘ಹಬ್ಬ ಬಹುದು, ಬಹುದು!’ ಎಂದು ಹಿಗ್ಗಿ ಮಿಡಿದುದೆಷ್ಟು!
ಆದರೇನು? ಇಲ್ಲ ನಮಗೆ ಸುಖವು ಎಳ್ಳಿನಷ್ಟು-
ಭಾರತಕ್ಕೆ ಬಂದಿತಂತೆ ಸ್ವಾತಂತ್ರ್ಯದ ಹುಣ್ಣಿವೆ!
೨
ಗೆಳೆಯರೆಂದು ನಂಬಿದವರೆ ತಿಂಬ ಹುಲಿಗಳಾದರು;
ಹುಲಿಗಳೆಂದು ಗುಡುಗಿದವರೆ ಬಿಲದ ಇಲಿಗಳಾದರು;
ಬಲೆಗಳಲ್ಲಿ ಸಿಲುಕಿದ್ದರು ಬರಿದೆ ಗಳಹುತಿರುವರು-
ಭಾರತಕ್ಕೆ ಬಂದಿತಂತೆ ಸ್ವಾತಂತ್ರ್ಯದ ಹುಣ್ಣಿವೆ!
೩
ಹಬ್ಬದಲ್ಲಿ ಪಲ್ಲಕ್ಕಿಯ ಹೊರುವುದೆಮ್ಮ ಪಾಲು!
ಕೇಳುವವರು ಯಾರು ಇಲ್ಲ, ನೊಂದರೆಮ್ಮ ಕಾಲು!
ನಮಗೆ ಕರುಳ ಕುದಿತ, ಕುಡಿವುದಿನ್ನಾರೋ ಹಾಲು!
ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ!
೪
ಗುಡುಗು ಕೇಳಿ ಮಳೆಯೀಗಲೆ ಜಡಿವುದೆಂದೆವು;
ನಮ್ಮ ಹೊಲವ ನಾವೆ ಬಿತ್ತಿ ಬೆಳೆವೆವೆಂದೆವು;
ಬಂಜೆಗುಡುಗು, ಮಳೆಗೆ ಪಿಡುಗು, ಬರವೇ ಬರವು !
ಭಾರತಕ್ಕೆ ಬಂದಿತಂತೆ ಸ್ವಾತಂತ್ರ್ಯದ ಹುಣ್ಣಿವೆ !
ಭಾರತಕ್ಕೆ ಬಂದಿತಂತೆ ಸುಖ, ಶಾಂತಿಯ ಹುಣ್ಣಿವೆ-
ಕನ್ನಡಿಗರ ಮುಂದೆ ಮಾತ್ರ ಮುಳ್ಳು-ಕಲ್ಲು-ಮಣ್ಣಿವೆ.
*****