ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ
ರಾಮನಾಥ
ಜೇಡರ ದಾಸಿಮಯ್ಯನ ವಚನ. ಕಳಬೇಡ, ಕೊಲಬೇಡ ಎಂದಿತ್ಯಾದಿಯಾಗಿ ಬಸವಣ್ಣ ಹೇಳಿದ್ದಕ್ಕೆ ಪ್ರತಿಯಾದ ಸವಾಲಿನಂತಿದೆ ಈ ಮಾತು. ದೇಹ ಇರುವವರೆಗೆ ಹಸಿವು ಇರುತ್ತದೆ, ಹಸಿವು ಇರುವವರೆಗೆ ಸುಳ್ಳೂ ಇರುತ್ತದೆ. ದೇಹ ಇರುವ ಮನುಷ್ಯ ಹಸಿಯದೆ, ಸುಳ್ಳು ಹೇಳದೆ ಇರಲಾರ. ಸುಮ್ಮನೆ ಒಣ ನೀತಿಯನ್ನು ದೇವರೇ ಹೇಳಿದರೂ ಅದನ್ನು ಒಪ್ಪಲಾರೆ.
ದೇವರೇ, ನೀನು ನನ್ನ ಹಾಗೆ ಒಮ್ಮೆ ದೇಹಧಾರಿಯಾಗಿ ನೋಡು, ಸುಳ್ಳು ಹೇಳದೆ, ಹಸಿವು ಅನುಭವಿಸದೆ ಇರುವುದಕ್ಕೆ ಸಾಧ್ಯವೇ ಎಂದು-ಇದು ಭಕ್ತನ ಸವಾಲು. ಇದು ಸವಾಲೋ, ಸಮರ್ಥನೆಯೋ? ನಾವು ಹೇಳುವ ಸುಳ್ಳುಗಳಿಗೆ ಸಮರ್ಥನೆ ಎಂದು ಈ ವಚನವನ್ನು ನೋಡಬೇಕಾಗಿಲ್ಲ. ಹಸಿವು, ಸುಳ್ಳುಗಳು ಮನುಷ್ಯನಿಗೆ ಅನಿವಾರ್ಯವಾಗುವ ಸ್ಥಿತಿ ಬಂದಿದೆಯಲ್ಲಾ ಅನ್ನುವ ನೋವು ಕಾಣಿಸುತ್ತದೆ. ಹಸಿವನ್ನು, ಸುಳ್ಳನ್ನು ಟೀಕಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಮುಖ್ಯ. ಅರ್ಥಮಾಡಿಕೊಂಡರೆ ನಿಜವಾದ ದೇವರಾಗಬಹುದು ಅನ್ನುವ ದೃಷ್ಟಿ ಕಾಣುತ್ತದೆ.
*****