ಆನೆ ಕುದುರೆ ಭಂಡಾರವಿರ್ದಡೇನೋ
ತಾನುಂಬುದು ಪಡಿಯಕ್ಕಿ
ಒಂದಾವಿನ ಹಾಲು
ಮಲಗುವುದರ್ಧ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೋ
ಕೈಹಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ
ನಿಃಕಳಂಕ ಮಲ್ಲಿ ಕಾರ್ಜುನಾ
[ಪಡಿ-ಒಂದು ಅಳತೆ, ಒಂದಾವಿನ-ಒಂದು ಹಸುವಿನ]
ಮೋಳಿಗೆ ಮಾರಯ್ಯನ ವಚನ. `ನನ್ನದು’ ಎಂದುಕೊಂಡ ವಸ್ತುಗಳಲ್ಲೇ ಬದುಕಿನ ಸಾರ್ಥಕತೆಯನ್ನು ಕಾಣುವ ಧೋರಣೆ ಸರಿಯಲ್ಲ ಅನ್ನುತ್ತದೆ ಈ ವಚನ. ಆನೆ, ಕುದುರೆ, ಭಂಡಾರ ಅನ್ನುವದರ ಬದಲು ಕಾರು, ಬೈಕು, ಆರಂಕಿಯ ಸಂಬಳ ಎಂದು ಕೊಳ್ಳೋಣ. ಆಗ ನಮ್ಮ ಕಾಲದ ಬಗ್ಗೆ ಕಾಮೆಂಟರಿ ಮಾಡುತ್ತಿರುವಂತೆ ಇದೆ ಅನ್ನಿಸುವುದಿಲ್ಲವೇ? ಅಷ್ಟೆಲ್ಲ ಇದ್ದರೂ ತಿನ್ನುವುದು ಮಾತ್ರ ಒಂದಳತೆ ಅಕ್ಕಿಯ ಅನ್ನ, ಅದೂ ನಮ್ಮ ಹೊಟ್ಟೆ ಹಿಡಿಸುವುವಷ್ಟೇ. ಅರ್ಧಮಂಚ ಅನ್ನುವುದಂತೂ ಅದ್ಭುತವಾದ ರೂಪಕ.
ನನಗೆ ಸುಖಕೊಡುವ ಜೊತೆ ಜೀವಿಯೊಡನೆ ಅರ್ಧ ಮಂಚ ಹಂಚಿಕೊಳ್ಳಬೇಕು. ಇಬ್ಬರೂ ಸ್ವಂತದ ಸುಖವನ್ನೇ ಅಪೇಕ್ಷಿಸುತ್ತಾ ಸುಖ ಸಿಕ್ಕಿದ್ದೂ ಭ್ರಮೆಯೇ ಆಗಬಹುದು. ಹಾಗೆ ಸುಖದ ಸಾಧನ ಅಂದುಕೊಂಡಿರುವ ಮಂಚ ಸಿಕ್ಕಿದ್ದೂ ಅರ್ಧವೇ! ಸುಖಸಾಧನವಾದ ದೇಹ ನನ್ನದು ಅಂದುಕೊಂಡರೆ ಅದೂ ಭೂಮಿಯ ಪಾಲು, ಜೀವಿಸಿದ್ದೇನೆನ್ನುವುದಕ್ಕೆ ಆಡುತ್ತಿರುವ ಉಸಿರು ಕೂಡ ಗಾಳಿಯ ಪಾಲು. ನನ್ನವಳೆಂದುಕೊಂಡ ಹೆಂಡತಿ ನನ್ನ ನಂತರ ಬೇರೆಯವರ ಪಾಲಾಗುವುದಿಲ್ಲವೇ, ಆಗಬಾರದೇ? ಹಾಗಿದ್ದರೆ ನನ್ನ ಜೊತೆಗೆ ಯಾರಿದ್ದಾರೆ, ಏನಿದೆ? ಸಾವು ಒಂದೇ, ಸಂಗಡ ಇರುವವರು ಯಾರೂ ಇಲ್ಲ. ಹತಾಶೆಯೋ, ಅಗಾಧ ಒಂಟಿತನದ ಅನುಭವವೋ, ಇಂಗ್ಲಿಶಿನಲ್ಲಿ ಆಂಗ್ಸ್ಟ್ ಅನ್ನುತ್ತಾರಲ್ಲ ಅದೋ, ಏನಾದರೂ ಕರೆಯಿರಿ. ಕಾಡುವ ಏಕಾಂಗಿತನ ಕೇವಲ ಆಧುನಿಕ ಕಾಲದ್ದೂ ಅಲ್ಲ. ಅದು ಎಲ್ಲ ಕಾಲದ ಮನುಷ್ಯ ಬದುಕಿನ ಸತ್ಯ ಅನ್ನಿಸುತ್ತದೆ.
*****