ಅವರಾರ ಪರಿಯಲ್ಲ ಎಮ್ಮ ನಲ್ಲನು
ವಿಶ್ವವೆಲ್ಲ ಸತಿಯರು
ಸೋಜಿಗದ ಪುರುಷನು
ಅವರವರ ಪರಿಯಲ್ಲೆ ನೆರೆವನು
ಅವರಿಗವರಂತೆ ಸುಖಮಯನು ನೋಡಾ
ಅವರೆಲ್ಲರ ವಂಚಿಸಿ ಎನ್ನನಗಲದ ಪರಿಯ ನೋಡಾ
ಕೆಳದಿ
ನೀನೊಳ್ಳಿದಳಾದಡೆ
ಮಹಾಮಂತ್ರವ ಜಪಿಸು
ನಿನ್ನನಗಲನು
ನಿನ್ನಾಣೆ
ಉರಿಲಿಂಗದೇವ
ತನ್ನಾಣೆ ಕೆಳದಿ
[ನೆರೆವನು-ಕೂಡುವನು, ನೀನೊಳ್ಳಿದಳಾದಡೆ-ನೀನು ಒಳ್ಳೆಯವಳಾಗಿದ್ದರೆ]
ಉರಿಲಿಂಗದೇವನ ವಚನ. ನನ್ನ ಗಂಡ ಮಿಕ್ಕವರ ಗಂಡನಂತೆ ಅಲ್ಲ. ಇಡೀ ವಿಶ್ವವೇ ಅವನ ಹೆಂಡಿರು. ಅವರವರಿಗೆ ಬೇಕಾದಂತೆ ಅವರವರೊಡನೆ ಇರುತ್ತಾನೆ. ಅವರವರಿಗೆ ತಕ್ಕಂತೆ ಸುಖ ಕೊಡುತ್ತಾನೆ. ಆದರೆ ವಿಚಿತ್ರವೆಂದರೆ ಅವನಿಗೆ ನನ್ನ ಮೇಲೆ ತುಂಬ ಪ್ರೀತಿ, ಮಿಕ್ಕವರನ್ನೆಲ್ಲ ವಂಚಿಸಿ ನನ್ನೊಡನೆ ಇದ್ದಾನೆ. ನನ್ನನ್ನು ಬಿಟ್ಟು ಅಗಲುವುದಿಲ್ಲ. ನೀನು ಒಳ್ಳೆಯವಳಾದರೆ ಮಹಾಮಂತ್ರವನ್ನು ಜಪಿಸು. ಅವನು ನಿನ್ನೊಡನೆಯೇ ಇರುವಂತಾಗುತ್ತದೆ, ನಿನ್ನನ್ನು ಬಿಟ್ಟು ಹೋಗದಂತಾಗುತ್ತದೆ.
ದೈವವು ಇಷ್ಟದೈವವಾಗುವ ಪರಿ ಈ ವಚನದಲ್ಲಿದೆ. ರಾಸಲೀಲೆಯಾಡುವಾಗ ಕೃಷ್ಣ ಎಲ್ಲ ಗೋಪಿಕೆಯರೊಡನೆಯೂ ಇರುತ್ತಿದ್ದನಂತಲ್ಲ, ಹಾಗೆಯೇ ಇದು. ಇಡೀ ವಿಶ್ವಕ್ಕೆ ದೈವವಾದವನು, ನನ್ನೊಬ್ಬಳ ಸ್ವಂತವಾಗುವ ವೈಚಿತ್ರ್ಯ ಅಚ್ಚರಿಗೆ ಕಾರಣವಾಗಿದೆ. ಇದು ಅವನನ್ನು ಪತಿಯಾಗಿ ಪಡೆಯಬಯಸುವ ಎಲ್ಲರಿಗೂ ಸಾಧ್ಯ ಅನ್ನುತ್ತದೆ ಉರಿಲಿಂಗದೇವನ ಈ ವಚನ.
*****