ಮೋಹನ
೧
ಮೂರು ದಿನಗಳು ಜಾರಿದುವು, ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ! ನನ್ನವ
ಬಾರನೇಕೆನುತಿರುವೆನು.
ಬರುವೆನೆನ್ನುವ ಓಲೆಯಿಲ್ಲವ-
ನರುಹಿದೊಸಗೆಗಳಿಲ್ಲ,
ಬರುವನೆನ್ನುತ ಬಗೆಯಿದೇನೋ
ಮೊರೆಯುತಿದೆ ಸುಳ್ಳಲ್ಲ.
ಎಂತಲೇ ದಿನವೆಲ್ಲಾ….
ಎಂತಲೇ ದಿನವೆಲ್ಲ ಹೀಗೆಯೆ
ನಿಂತು ನಿರುಕಿಪೆನಲ್ಲಾ !
೨
ಸದ್ದನಾವುದ ಕೇಳಿದರೆ ಜು-
ಮ್ಮೆದ್ದ ಮೈಮನದಿಂದ
ಎದ್ದು ನೋಡುವೆ ಇನಿಯನೆಂದೇ
ಹೊದ್ದಿದಾತುರದಿಂದ.
ಆತನಲ್ಲದೆ ಇರಲು ಬಯಕೆಯು
ಬೀತು ಬಳಲಿಕೆಯಾಂತು,
ಕಾತರದಿ ಬಂದೊಳಗೆ ಬೀಳುವೆ-
ಕಾಯ್ದ ಸುಯ್ಲಲಿ-ಸೋತು.
ಮತ್ತೆ ಆಶೆಯು ಕೂಗಿ ….
ಮತ್ತೆ ಆಶಯು ಕೂಗಿ ಕರೆಯಲು
ಒತ್ತಿ ಏಳುವೆ ಬೀಗಿ.
೩
ದೂರ ಬರುತಿರಬಹುದು ನನ್ನಾ
ನೀರನೆಂಬ ವಿಚಾರದಿ,
ಏರಿ ನೆಲೆಮನೆ ಹುಬ್ಬಿನೊಳು ಕೈ-
ಯೂರಿ ನಿರುಕಿಪೆ ದೂರದಿ;
‘ಏನಿದಿವಳಾರನ್ನು ನೋಡುವ-
ಳೇನಿದಾತುರ?’ ಎನ್ನುತ
ಆಡುವುದೆ ಜನ ?-ಎಂದು ಸುತ್ತಲು
ನೋಡುವೆನು ನಾನಂಜುತ
ಬರಲಿರುವನವನೆಂದು….
ಬರಲಿರುವನೆಂಬೀ ಬಗೆಯ ಬರಿ-
ಮೊರೆತಕೇನೆನಲಿಂದು ?
* * *
ಮೂರು ದಿನಗಳು ಜಾರಿದುವು ಬರಿ-
ದಾರಿ ಕಾಯುತಲಿರುವೆನು.
ಹಾರಯಿಕೆಯಂತಹದು ? ನಲ್ಲನು
ಬಾರನೇಕೆನುತಿರುವೆನು.
ಮನವನ್ನೇತರೊಳೊ
ಹೆಣೆದವನ ಮರೆಯಲಿಕೆ
ಹಣುಗಿಯೇ ಹಣುಗುವೆನು, ಆದರೇನು !
೪
ಕಿಡಗೇಡಿ ತಂಗಾಳಿ-
ಯೊಡನೆ ಬಂದಾ ನೆನಹು
ಒಡಲ ಜುಽಮ್ಮೆನಿಸಿ ನವಿರೇರಿಸುವುದು.
ಬೆಳುದಿಂಗಳೊಡಗೊಂಡು
ತಿಳಿಯದಂತೈತಂದು
ಕಳವಳವ ಕರುಳಿನೊಳಗೂರಿಸುವುದು.
೫
ತನ್ನವಳ ಜೊತೆಗೂಡಿ
ಹಾಡುತಿಹ ಹಕ್ಕಿಯುಲಿ
ತನ್ನ ಮಟ್ಟಕೆ ಸುಮ್ಮನಿರಬಾರದೆ?
ನನ್ನ ದೇನಿರಲು ಬಹು-
ದನ್ನೆಯವು ! ಅವನ ನೆನ-
ಪನ್ನು ಕಿವಿಗೊತ್ತಿ ಕಾಡುವುದು ಬರಿದೆ.
೬
ಸುಡಲಿ, ಬಂದಿತಿದೇಕೊ
ಜಡಿಯ ಮೋಡದ ಜಿನುಗು !
ಹಿಡಿದು ಬೆಸೆವುದು ಆತನಾಶೆಯೊಡನೆ,
ಇಡಿದ ಕತ್ತಲೆಯಿರುಳು
ಮಿಡುಕುತೊಬ್ಬಳೆ ಮಲಗಿ-
ದೆಡೆಗೆ ಕಳುಹುವುದವನ ಬಯಕೆಯನ್ನೇ.
೭
ಮುಳಿಸು ಹೆಮ್ಮೆಗಳಲ್ಲಿ
ಮಾಡಿದಾ ನಿರ್ಣಯವು
ಗಳಿಗೆಯರೆಗಳಿಗೆಯೂ ನಿಲ್ಲದಿಹುದು.
ನನಗಿರುವ ಆತುರವು
ಇನಿಯಗೇಕಿರದೆಂದು
ಜಿನುಗಿ ನನ್ನೆದೆಯುಸಿರ ಚೆಲ್ಲುತಿಹುದು.
೮
‘ಇನಿತೊಂದು ಹಲುಬಿ ಕಂ-
ಬನಿಯಿಡುವೆನವಗಾಗಿ
‘ನೆನಪಾದರೂ ಇಹುದೆ ನನ್ನದವಗೆ?’
ಎನುವ ಯೋಚನೆ ಬರಲು
ಮುನಿಸು ಮೊಗದೋರಿ ನಾ-
ನೆನುವೆ ‘ಇನಿತೇಕೆ ಮನದಳಲು ನನಗೆ ?’
*****