ಈಗ ಆಗ ಹಗಲು ಇರುಳು
ಒಂದೊಂದು ಮುಖ ಚಹರೆ,
ಬೀದಿಯ ರಚ್ಚೆಯ ಮಾತುಗಳು,
ಘಟಿತ ಚರಿತ್ರೆಯ ಸಾಲುಗಳು,
ಒಳ ಹೊರಗೆ ಗೊತ್ತಿಲ್ಲದ ಗೊಂದಲ.
ಕತ್ತಲೆಯೊಳಗೆ ಬೆಳಕ ಕಿರಣಗಳು,
ತಾನು ತನ್ನದೆಂಬ ಮೋಹ ಕಳಚಿದ
ಅನುಭವ ಮಂಟಪದ ಅಕ್ಕ ಆಲಿಸಿದಳು.
ನಿರ್ಣಯವಿಲ್ಲದ ನಿರಾಕಾರದ ಗಡಿಬಿಡಿ
ಮತಿನಂತಿಲ್ಲ ಘನದ ಪರಿ ಮಹಾ ಕಗ್ಗಂಟು
ಸಾವನರಿಯದ ಲೋಕದ ಗಜಿಬಿಜಿ
ಸಂತೆಯಲಿ ಅರೆಮರುಳುಗಳ ಅರಿವು,
ಅಕ್ಷರಗಳ ಸರ್ವವ್ಯಾಪ್ತಿ ಸರ್ವ ವಿದ್ಯೆ
ಬುದ್ಧಿಯನರಿಯದ ಪ್ರಾಣಿ ವಿಚಾರ
ಬಯಲು ತುಂಬ ಸರಳ ಮಂಜಿನ ಕಾಳಗತ್ತಲೆ,
ಲಾಂಛನ ಹೊತ್ತವರು, ರಂಜಕನೂ ಭುಂಜಕನೂ
ತೊಳಲಿ ಬಳಲಿ ಸವೆದ ದಾರಿಯ ತುಂಬ.
ಕಲ್ಲು ಮುಳ್ಳುಗಳು ಮಾಯದ ಹುಣ್ಣು ಹತ್ತಿ.
ಸೋರೆಯ ಬಣ್ಣದ ಹಿರಿಯರು ಯುಗ ಯುಗ
ಬಲ್ಲೆನೆಂದು ಬೀಗುವರು ನಿಮ್ಮನ್ನು ಎತ್ತ ಅರಿವರು.
ಅವರಿವರ ಜಗ ಬರಡು, ಅವರಿವರ ಯೋಗ
ಭಂಗ, ಸಂಗದ ಸುಖ ಅರಿಯದವರ ಭಂಗಿ,
ಭ್ರಾಂತಿ ಭ್ರಮೆಯಲಿ ಬಳಲುತ್ತಿರಲು ಅಜ್ಞಾನಿಗೆ,
ಮುಂದಣ ಸೂಕ್ಷ್ಮ ಕಾಣುವ ಪರಿಧಿಯೊಳಗೆ
ನಾನು ನಿನ್ನಲ್ಲಿ ಒಂದಾಗಿ ಕಾಂತಿಯುತ
ಬೆಳಗು ಕಂಡೆ.
*****